Kalaburagi: ಲಿಂಗಾಯಿತರ ಮೇಲಿನ ದೌರ್ಜನ್ಯ- ಕಿರುಕುಳ ಮರುಕಳಿಸಿದರೆ ತಕ್ಕಪಾಠದ ಎಚ್ಚರಿಕೆ
Team Udayavani, Oct 16, 2023, 12:10 PM IST
ಕಲಬುರಗಿ: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವೀರಶೈವ-ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಕಿರುಕುಳ ಹೆಚ್ಚಳವಾಗುತ್ತಿದ್ದು, ಇದು ನಿಲ್ಲದಿದ್ದರೆ ತಕ್ಕಪಾಠ ಕಲಿಸುವುದಾಗಿ ವೀರಶೈವ- ಲಿಂಗಾಯಿತ ಸ್ವಾಭಿಮಾನ ಬಳಗ ಎಚ್ಚರಿಕೆ ನೀಡಿದೆ.
ಲಿಂಗಾಯಿತ ನೌಕರರ ಮೇಲಿನ ಕಿರುಕುಳ ಹಾಗೂ ದೌರ್ಜನ್ಯ ಹೆಚ್ಚಳವಾಗುತ್ತಿರುವುದರ ಜತೆಗೆ ನಿರ್ಲಕ್ಷ್ಯತನ ಪ್ರಕರಣ ಕಲಬುರಗಿ ಜಿಲ್ಲೆಯಲ್ಲೂ ವ್ಯಾಪಕವಾಗಿ ಕಂಡು ಬರುತ್ತಿದೆ ಎಂದು ಮೂಲಕ ಬಳಗದ ಸಂಚಾಲಕರಾದ ಎಂ.ಎಸ್. ಪಾಟೀಲ್ ನರಿಬೋಳ, ವಿಶ್ವನಾಥ ಪಾಟೀಲ್ ಗವನಳ್ಳಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳ ಹಾಗೂ ನಿರ್ಲಕ್ಷ್ಯತನ ವಿರುದ್ದ ಧ್ವನಿ ಎತ್ತಲಾಗುತ್ತಿದೆ ಎಂದರು.
ಪಾಲಿಕೆಯಲ್ಲಿ ಸಮಾಜದ ನೌಕರರ ಮೇಲೆ ರಾಜಾರೋಷವಾಗಿ ಹಲ್ಲೆ ನಡೆದಿದ್ದರೂ ಇಲ್ಲಿಯವರೆಗೂ ಹಲ್ಲೆಕೋರರನ್ನು ಬಂಧಿಸಿಲ್ಲ. ಅದೇ ತೆರನಾಗಿ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಸಮಾನತೆ ಸಾರಿದ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಎಸಗಲಾಗಿದೆ. ಇಲ್ಲೂ ಕೂಡಾ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಪ್ರಮುಖವಾಗಿ ಕಲಬುರಗಿ ನಗರಾಭಿವೃದ್ಧಿ ಆಯುಕ್ತ ದಯಾನಂದ ಪಾಟೀಲ್ ಅವರಿಗೆ ಕಿರುಕುಳ ಕೊಡಲಾಗುತ್ತಿದೆ. ನಿವೃತ್ತಿಯಾಗಲು ಕೇವಲ ಎಂಟು ತಿಂಗಳು ಉಳಿದಿದೆ. ಎರಡು ತಿಂಗಳು ಹಿಂದೆ ವರ್ಗಾವಣೆಗೊಳಿಸಿದ್ದಕ್ಕೆ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಆದರೆ ತಡೆಯಾಜ್ಞೆ ತಂದಿದ್ದಕ್ಕೆ ಪ್ರತಿಕಾರ ಎನ್ನುವಂತೆ ಯಾವದೇ ತಳಬುಡ ಇಲ್ಲದ ಪ್ರಕರಣದಲ್ಲಿ ಅಮಾನತ್ತುಗೊಳಿಸಲಾಯಿತು. ಇದರ ವಿರುದ್ಧವೂ ದಯಾನಂದ ಪಾಟೀಲ್ ಕೆಇಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ವರ್ಗಾವಣೆಗೊಳಿಸಿದ್ದರೂ ಹೋಗಲಿಲ್ಲ ಎಂದು ದ್ವೇಷ ಮುಂದಿಟ್ಟುಕೊಂಡು ಕಿರುಕುಳ ಕೊಡಲಾಗುತ್ತಿದೆ. ಲಿಂಗಾಯತ ಎಂಬ ಕಾರಣಕ್ಕೆ ಹೀಗೆಲ್ಲ ಮಾಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು ಎಂದು ಬಳಗದ ಸಂಚಾಲಕರು ಆಗ್ರಹಿಸಿದರು.
ವಿರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳು ಬರುವಲ್ಲಿ ಲಿಂಗಾಯಿತರೇ ಕಾರಣರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹಿಂದಿನ ಅಂದರೆ 2013-18ರ ಅವಧಿಯಲ್ಲೂ ಲಿಂಗಾಯಿತರನ್ನು ಕಡೆಗಣನೆ ಮಾಡಿದ್ದಕ್ಕೆ ತದನಂತರ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಯಿತು. ಈಗಲಾದರೂ ಎಚ್ಚೆತ್ತುಕೊಂಡು ಪ್ರಮಾದ ಆಗದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಮತ್ತೆ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳ ಮರುಕಳಿಸಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ಗುಡುಗಿದರು.
ಕಲಬುರಗಿ ಮಹಾನಗರದ 14 ಇನ್ಸಪೆಕ್ಟರ್ ಹುದ್ದೆಗಳಲ್ಲಿ 04 ಲಿಂಗಾಯತ, 05 ಮುಸ್ಲಿಂ, 04 ಎಸ್ಸಿ ಹಾಗೂ ಓರ್ವ ಕಬ್ಬಲಿಗ ವರ್ಗಕ್ಕೆ ಸೇರಿದ್ದಾರೆ. ಪ್ರಮುಖವಾಗಿ ಕಲಬುರಗಿ ಮಹಾನಗರದ ನಾಲ್ಕು ಎಸಿಪಿಗಳಲ್ಲಿ ಇಬ್ಬರು ಎಸ್ಸಿ, ಓರ್ವ ಮುಸ್ಲಿಂ ಹಾಗೂ ಓರ್ವರು ಒಕ್ಕಲಿಗ ವರ್ಗಕ್ಕೆ ಸೇರಿದ್ದಾರೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ ನಾಲ್ಕು ಡಿಎಸ್ಪಿ ಹುದ್ದೆಗಳಲ್ಲಿ ಇಬ್ಬರು ಎಸ್ಸಿ, ಓರ್ವ ಎಸ್ಟಿ ಹಾಗೂ ಓರ್ವರು ಲಿಂಗಾಯತ ವರ್ಗಕ್ಕೆ ಸೇರಿದ್ದಾರೆ. ಇನ್ನುಳಿದಂತೆ ಪ್ರಮುಖ 28 ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳಲ್ಲಿ 18 ಅಧಿಕಾರಿಗಳನ್ನು ವರ್ಗವಾರು ಗುರುತಿಸಲಾಗಿದ್ದು, 06 ಲಿಂಗಾಯಿತರು, 03 ಮುಸ್ಲಿಂರು, 05 ಎಸ್ಸಿ ಹಾಗೂ 04 ಹಿಂದುಳಿದ ವರ್ಗದವರೆಂದು ಗುರುತಿಸಲಾಗಿದೆ ಎಂದು ವೀರಶೈವ ಲಿಂಗಾಯಿತ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತಾಗಿ ವಿವರಣೆ ನೀಡಿದರು.
ಸ್ವಾತಂತ್ರ್ಯ ಬಂದ 77 ವರ್ಷಗಳ ಇತಿಹಾಸದಲ್ಲಿ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಈ ಹಿಂದಿನ ಅವಧಿಯಲ್ಲಿ ಯಶ್ವಂತ ಗುರುಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಬದೋಲೆ ಅವರು ಲಿಂಗಾಯತ ವರ್ಗದ ಪ್ರಥಮ ಡಿಸಿ ಹಾಗೂ ಸಿಇಓ ಆಗಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ವರ್ಗಾವಣೆಗೊಳಿಸಲಾಯಿತು. ಹೊಸ ಸರ್ಕಾರ ಬಂದಾಗ ವರ್ಗಾವಣೆ ಸಾಮಾನ್ಯವಾದರೂ ಲಿಂಗಾಯತ ವರ್ಗವನ್ನು ನಿರ್ಲಕ್ಷ್ಯತನ ಹಾಗೂ ಕಿರುಕುಳ ರೀತಿಯಲ್ಲಿ ನಡೆದಿರುವುದು ಸಮಾಜಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ. ಡಿಸಿ,ಸಿಇಒ ಅವರ ವರ್ಗಾವಣೆಯಾದರೂ ಸುಮ್ಮನಿರಲಾಗಿತ್ತು. ಆದರೆ ತದನಂತರ ಒಂದರ ಮೇಲೆ ಒಂದು ಪ್ರಕರಣಗಳು ಲಿಂಗಾಯಿತರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೀದಿಗೆ ಬರಲಾಗುತ್ತಿದೆ. ಒಟ್ಟಾರೆ ವೀರಶೈವ ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಕಿರುಕುಳ ಮರುಕಳಿಸಿದ್ದಲ್ಲಿ ಮುಂಬರುವ ಲೋಕಸಭಾ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಘೋಷಿಸಿದರು.
ಡಿಸೆಂಬರ್‌ದಲ್ಲಿ ದಾವಣಗೆರೆಯಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧಿವೇಶನಕ್ಕೆ ಕಲಬುರಗಿ ಜಿಲ್ಲೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಕೈ ಬಲಪಡಿಸಿ ಸಮಾಜದ ಒಳಿತಿಗಾಗಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ದ ಎಂಬುದಾಗಿ ತಿಳಿಯಪಡಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್ ಪಾಟೀಲ್ ನರಿಬೋಳ ಇದೇ ಸಂದರ್ಭದಲ್ಲಿ ತಿಳಿಸಿದರು.
ವೀರಶೈವ ಲಿಂಗಾಯತ ಸ್ವಾಭಿಮಾನ ಬಳಗದ ಸಂಚಾಲಕರಾದ ಸೋಮಶೇಖರ ಟೆಂಗಳಿ, ರಾಜುಗೌಡ ನಾಗನಹಳ್ಳಿ, ಮಲ್ಲಿಕಾರ್ಜುನ ಸಾರವಾಡ, ಪ್ರಕಾಶ ಪಾಟೀಲ್ ಹೀರಾಪುರ, ಮಲ್ಲಿಕಾರ್ಜುನ ನಾಗನಹಳ್ಳಿ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.