ಕಲ್ಯಾಣ ಕರ್ನಾಟಕ ಹೆಸರು ಅನ್ವರ್ಥಗೊಳಿಸುವ ಸಂಕಲ್ಪ- ಸಿಎಂ ಸಿದ್ದರಾಮಯ್ಯ ವಿಶೇಷ ಲೇಖನ
Team Udayavani, Sep 17, 2023, 12:23 AM IST
ಇಂದು ( ಸೆಪ್ಟೆಂಬರ್ 17) ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ‘ಕಲ್ಯಾಣ ಕರ್ನಾಟಕ ಉತ್ಸವ’ದ ಸಂಭ್ರಮ. ಈ ಹಿನ್ನೆಲೆಯಲ್ಲಿ ‘ಉದಯವಾಣಿ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಲೇಖನ..
ಕಲ್ಯಾಣ ಕರ್ನಾಟಕ (ಹಿಂದಿನ ಹೈದರಾಬಾದ್ ಕರ್ನಾಟಕ)ದ ಪಾಲಿಗೆ ಈ ವರ್ಷ ಅತ್ಯಂತ ವಿಶೇಷವಾದುದು. ಈ ಭಾಗದ ವಿಮೋಚನೆಯ ಅಮೃತ ಮಹೋತ್ಸವ ವರ್ಷಾಚರಣೆಯ ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಸಂವಿಧಾನದ 371 (ಜೆ) ಜಾರಿಯ ದಶಮಾನೋತ್ಸವದ ವಿಶಿಷ್ಟ ಸಂದರ್ಭ ಇದಾಗಿದೆ.
ಕಲ್ಯಾಣ ಕರ್ನಾಟಕ ಸಾಮಾಜಿಕ ಕ್ರಾಂತಿ ಹಾಗೂ ಭಕ್ತಿ ಚಳವಳಿಯ ನೆಲೆಯಾಗಿ ಗುರುತಿಸಿಕೊಳ್ಳುವುದಲ್ಲದೆ, ಸೂಫಿ ಸಂತರ ನಾಡಾಗಿ, ಸಾಮರಸ್ಯದ ಮೌಲ್ಯವನ್ನು ಈ ಮಣ್ಣಿನಲ್ಲಿ ಬಿತ್ತಿ ಬೆಳೆಯುತ್ಯಲೇ ಇದೆ.
ಇಡೀ ವಿಶ್ವಕ್ಕೆ ಸಾಮಾಜಿಕ ನ್ಯಾಯದ ತಳಹದಿಯ ಸಂಸತ್ತಿನ ಪರಿಕಲ್ಪನೆಯನ್ನು ನೀಡಿದ ಹಿರಿಮೆ ಕಲ್ಯಾಣ ಕರ್ನಾಟಕದ್ದಾಗಿದೆ. 12ನೇ ಶತಮಾನದಲ್ಲೇ ನಡೆದ ಸಾಮಾಜಿಕ ಕ್ರಾಂತಿ ಇಡೀ ದೇಶಕ್ಕೆ ಮಾದರಿಯಾದುದು. ಕಳಚೂರಿ ಬಿಜ್ಜಳನ ಮುಖ್ಯಮಂತ್ರಿಯಾಗಿದ್ದ ಬಸವಣ್ಣ ಪ್ರಾಂತ್ಯಕ್ಕೆ ವಿಶ್ವಗುರುವಾಗಿ ತನ್ನ ಅನುಭವ ಮಂಟಪದ ಮೂಲಕ ಸಮಾನ ಮನಸ್ಕ ಚಿಂತಕರನ್ನು ಕಲ್ಯಾಣ ಪ್ರಾಂತ್ಯಕ್ಕೆ ಬರಮಾಡಿಕೊಂಡರು. ಆ ಮೂಲಕ ಕಲ್ಯಾಣ ಪ್ರಾಂತ್ಯವು ವೈಚಾರಿಕ ಕ್ರಾಂತಿಯ ಕೇಂದ್ರಬಿಂದುವಾಯಿತು. ಈ ಪ್ರಾಂತ್ಯವು ವಚನಕಾರ್ತಿ ಅಕ್ಕಮಹಾದೇವಿ, ಮಹಾನ್ ಯೋಗಿ ಅಲ್ಲಮ ಪ್ರಭು, ಶರಣ ಚನ್ನಬಸವಣ್ಣ ಹಾಗೂ ಇತರ ಶಿವ ಶರಣ ಸಾಹಿತ್ಯ ಕೃಷಿ ಮತ್ತು ಕಾಯಕ ತತ್ವ ಹಾಗೂ ಸಾಮಾಜಿಕ ಚಿಂತನೆಗೆ ಪ್ರೇರಣಿಯಾಗಿದೆ.
ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಲು ನಿರಾಕರಿಸಿದ್ದರು. ಅಷ್ಟರೊಳಗಾಗಲೇ ರಜಾಕಾರರ ದೌರ್ಜನ್ಯದಿಂದ ರೋಸಿ ಹೋಗಿದ್ದ ಅಂದಿನ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳ ಜನತೆ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಟಕ್ಕೆ ಅಣಿಯಾದರು.
ಆ ನಂತರ ರಮಾನಂದ ತೀರ್ಥರೊಂದಿಗೆ ಅಪ್ಪಾರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಸೇರಿಕೊಂಡು ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಿ ಹೈದರಾಬಾದ್ ಕರ್ನಾಟಕ ವಿಮೋಚನೆ ಹೊಂದಬೇಕಾದರೆ ಒಗ್ಗೂಡಿದ ಹೋರಾಟ ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಡತೊಡಗಿದರು. ರಜಾಕಾರರ ದೌರ್ಜನ್ಯದ ಸುದ್ದಿ ತಿಳಿದ ಪ್ರಧಾನಿ ಜವಾಹರಲಾಲ್ ನೆಹರು ಸಂಪುಟದ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್, ನಿಜಾಮನ ವಿರುದ್ದ ಪೊಲೀಸ್ ಕಾರ್ಯಾಚರಣೆಗೆ ನಿರ್ಧಾರ ಮಾಡಿ ಅಮಾಯಕ ಜನರ ಜೀವ ರಕ್ಷಣೆಗೆ ಮುಂದಾದರು.
ಪರಿಣಾಮವಾಗಿ ಸಪ್ಟೆಂಬರ್ 13, 1948 ರಲ್ಲಿ ಸೋಲಾಪುರ ಸೇರಿದಂತೆ ಒಟ್ಟು 5 ಕಡೆಯಿಂದ ಮೇಜರ್ ಜನರಲ್ ಜೆ ಎನ್ ಚೌಧರಿ ಅವರ ನೇತೃತ್ವದಲ್ಲಿ ನಿಜಾಮನ ವಿರುದ್ದ “ಆಪರೇಷನ್ ಪೋಲೋ” ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಯಿತು. ಸೆಪ್ಟೆಂಬರ್ 17, 1948 ರಂದು ನಿಜಾಮನು ಶರಣಾಗಿ ಹೈದರಾಬಾದ್ ಪ್ರಾಂತ್ಯವನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
ಹೈದರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಬೆಳಕು ಮೂಡಿತು. ಇಂತಹ ನಾಡಿನಲ್ಲಿ ಹಲವು ಚಾರಿತ್ರಿಕ ಕಾರಣಗಳಿಂದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿತ್ತು. ಹೈದರಾಬಾದ್ ಕರ್ನಾಟಕ ಭಾಗ ಭಾರತದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಸತತ ಬರಗಾಲಗಳ ಕಾರಣ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. ಡಾ. ನಂಜುಂಡಪ್ಪ ವರದಿಯ ಪ್ರಕಾರ ಅಂದು ಈ ಭಾಗದಲ್ಲಿದ್ದ 31 ತಾಲ್ಲೂಕುಗಳಲ್ಲಿ 28 ತಾಲ್ಲೂಕುಗಳು ಹಿಂದುಳಿದಿದ್ದವು.
ಈ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂಬ ಮತ್ತೊಂದು ಹೋರಾಟ ಪ್ರಾರಂಭವಾಯಿತು.
ಅಂದು ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಎನ್. ಧರಂಸಿಂಗ್ ಮತ್ತಿತರ ನಾಯಕರ ಸತತ ಹೋರಾಟ, ಪ್ರಯತ್ನಗಳ ಫಲವಾಗಿ 2012ರ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರವು ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು (ಜೆ) ಪರಿಚ್ಛೇದ ಸೇರಿಸುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅವಕಾಶ ಕಲ್ಪಿಸಲಾಯಿತು.
ಇದರ ಫಲವಾಗಿ ಇಂದು ಈ ಭಾಗದ ಸಾವಿರಾರು ಜನರು ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.
371ಜೆ ಕಾಯ್ದೆ ಜಾರಿಗೆ ರಾಷ್ಟ್ರಪತಿಗಳು ಅಂಕಿತ ನೀಡಿದ ಕೂಡಲೆ ಅಂದು 2013ರಲ್ಲಿ ರಾಜ್ಯದಲ್ಲಿದ್ದ ನಮ್ಮ ಸರ್ಕಾರ ಕೂಡಲೆ ಪ್ರದೇಶ ಮಂಡಳಿ ರಚಿಸಿದಲ್ಲದೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರನ್ನು ಮೀಸಲಾತಿ ಸೌಲಭ್ಯ ಒದಗಿಸುವ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಯ ಹೊಸ ಶಕೆಗೆ ಚಾಲನೆ ನೀಡಲಾಗಿತ್ತು.
371ಜೆ ಕಾಯ್ದೆ ಜಾರಿಯಾಗಿ ಇದೀಗ 10 ವರ್ಷ ತುಂಬಿದೆ. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2013 14 ರಿಂದ 2023 24ರ ವರೆಗೆ ಸರ್ಕಾರದಿಂದ ಒಟ್ಟಾರೆ 14,878.33 ಕೋಟಿ ರೂ. ಅನುದಾನ ಹಂಚಿಕೆ ಮಾಡಿ 10,228.80 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 8,520.74 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಶೇ.83ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 29,215 ಕಾಮಗಾರಿಗಳು ಕೈಗೆತ್ತಿಕೊಂಡು 24,563 ಕಾಮಗಾರಿ ಪೂರ್ಣಗೊಳಿಸಿದ್ದು, 4,652 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಪ್ರದೇಶದ ಚಿತ್ರ ಬದಲಿಸಿದ ಹೆಮ್ಮೆ ನಮ್ಮದು.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕಚೇರಿ, ಸಂಸ್ಥೆ, ವಿಶ್ವವಿದ್ಯಾಲಯ, ನಿಗಮ ಮಂಡಳಿಗಳಲ್ಲಿ ಗ್ರೂಪ್ ‘ಎ’ (ಜೂನಿಯರ್ ಸ್ಕೇಲ್) ಮತ್ತು ಗ್ರೂಪ್ ‘ಬಿ’ ಹುದ್ದೆಗಳಲ್ಲಿ ಶೇ.75 ರಷ್ಟು, ಗ್ರೂಪ್ ‘ಸಿ’ ಹುದ್ದೆಗಳಲ್ಲಿ ಶೇ.80 ರಷ್ಟು ಹಾಗೂ ಗ್ರೂಪ್ ‘ಡಿ’ ಹುದ್ದೆಗಳಲ್ಲಿ ಶೇ.85 ರಷ್ಟು ಹುದ್ದೆಗಳನ್ನು ಹಾಗೂ ರಾಜ್ಯದ ರಾಜಧಾನಿಯಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಶೇ.8 ರಷ್ಟು ಹುದ್ದೆಗಳನ್ನು ಕಲ್ಯಾಣ ಕರ್ನಾಟಕದ ಭಾಗದ ಸ್ಥಳೀಯರಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಿದೆ.
ಕಾಯ್ದೆ ಆರಂಭದಿಂದ ಕಳೆದ ಆಗಸ್ಟ್ ಅಂತ್ಯಕ್ಕೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 98,889 ಹುದ್ದೆ ನೇರ ನೇಮಕಾತಿಗೆ ಗುರುತಿಸಿದ್ದು, 70,738 ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 33,371 ಹುದ್ದೆಗಳ ಪೈಕಿ 23,101 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ಹುದ್ದೆಗಳ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಹಂತ ಹಂತವಾಗಿ ಕ್ರಮ ವಹಿಸಲಾಗುವುದು.
ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗಗದಲ್ಲಿ ಶೇ.8ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014 15 ರಿಂದ 2022 23ನೇ ಶೈಕ್ಷಣಿಕ ಸಾಲಿನ ವರೆಗೆ 6,795 ಅಭ್ಯರ್ಥಿಗಳು ವೈದ್ಯಕೀಯ, 1,388 ಅಭ್ಯರ್ಥಿಗಳು ದಂತ ವೈದ್ಯಕೀಯ, 3448 ಅಭ್ಯರ್ಥಿಗಳು ಹೋಮಿಯೋಪತಿ, 22,219 ಅಭ್ಯರ್ಥಿಗಳು ಇಂಜಿನೀಯರಿಂಗ್, 3,808 ಅಭ್ಯರ್ಥಿಗಳು ಕೃಷಿ ಸಂಬಂಧಿತ, 1,593 ಅಭ್ಯರ್ಥಿಗಳು ಬಿ.ಫಾರ್ಮಸಿ/ ಡಿ.ಫಾರ್ಮಸಿ ಸೇರಿದಂತೆ ಒಟ್ಟಾರೆ 10 ವರ್ಷದಲ್ಲಿ ಪ್ರದೇಶದ 39,251 ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಚಿತ್ರಣ ಬದಲಿಸಿರುವುದಂತೂ ನಿಜ. ಅಭಿವೃದ್ಧಿಯೆಂದರೆ ಕೇವಲ ಕಟ್ಟಡ ಕಚೇರಿಗಳ ನಿರ್ಮಾಣವಲ್ಲ. ಇದರೊಂದಿಗೆ ಮಾನವ ಅಭಿವೃದ್ಧಿ ಸೂಚ್ಯಂಕ ಸುಧಾರಣೆಯೂ ಅತ್ಯಂತ ಪ್ರಮುಖವಾದುದು. ಈ ನಿಟ್ಟಿನಲ್ಲಿ ಈ ಭಾಗದ ಶಿಕ್ಷಣ, ಉದ್ಯೋಗಾವಕಾಶಗಳ ಹೆಚ್ಚಳ, ಕೌಶಲ್ಯಾಭಿವೃದ್ಧಿ ಆರೋಗ್ಯ ಸೇವೆಗಳ ಸುಧಾರಣೆ, ಅಪೌಷ್ಟಿಕತೆ ನಿವಾರಣೆಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ನಮ್ಮ ಸರ್ಕಾರ ಜಾರಿಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು ಸಹ ಈ ಭಾಗದ ಜನರ ಜೀವನ ಉತ್ತಮ ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುವುದು ಎಂಬ ವಿಶ್ವಾಸ ನನ್ನದು.
ಈ ಭಾಗದ ಆರ್ಥಿಕತೆ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕೆಗಳಿಗೆ ಉತ್ತೇಜನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಕಲಬುರಗಿ ಹಾಗೂ ಬಳ್ಳಾರಿ ನಗರಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ಟೌನ್‌ಷಿಪ್‌ಗಳು, ಪ್ರವಾಸಿ ತಾಣಗಳಾದ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ ಮತ್ತು ಮಳಖೇಡ, ಬೀದರ್, ರಾಯಚೂರು ಹಾಗೂ ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ಧಿ, ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್, ಸುಟ್ಟಗಾಯಗಳ ವಿಭಾಗ, ತಾಯಿ ಮಕ್ಕಳ ಆಸ್ಪತ್ರೆ, ಕೊಪ್ಪಳ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಮತ್ತಿತರ ಸೌಲಭ್ಯಗಳಿಗೆ ಪ್ರಸಕ್ತ ಆಯವ್ಯಯದಲ್ಲಿ ಆದ್ಯತೆ ನೀಡಿದ್ದು, ಈ ಭಾಗದ ಆರೋಗ್ಯ ಸೇವೆಗಳನ್ನು ಉತ್ತಮ ಪಡಿಸಲು ಪೂರಕವಾಗಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಈ ಬಗ್ಗೆ ಕೇಂದ್ರದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ.ಕಲಬುರಗಿಯ ವಿಮಾನ ನಿಲ್ದಾಣ ಹಾಗೂ ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳು ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಇನ್ನಷ್ಟು ಚುರುಕುಗೊಳಿಸಲಿವೆ.
ಕೆ.ಕೆ.ಆರ್.ಡಿ.ಬಿ.ಯ ಯೋಜನೆಗಳನ್ನು ಸಕಾಲದಲ್ಲಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.
ಕಲ್ಯಾಣ ಕರ್ನಾಟಕ ಹೆಸರಿಗೆ ತಕ್ಕಂತೆ ಕಲ್ಯಾಣ ರಾಜ್ಯವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ.
ಸಂವಿಧಾನದ 371 (ಜೆ) ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಅವರನ್ನು ಈಗ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿಸಿದೆ. ಹಿರಿಯ ಪೀಳಿಗೆ ಈ ಭಾಗದ ಅಭಿವೃದ್ಧಿಗಾಗಿ ನಡೆಸಿದ ಹೋರಾಟಕ್ಕೆ ಸಾರ್ಥಕತೆಯನ್ನು ತಂದುಕೊಡುವಂತೆ ಅವರು ಕಾರ್ಯನಿರ್ವಹಿಸುವರೆಂಬ ವಿಶ್ವಾಸ ನನಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.