ರಾಜಕೀಯದಲ್ಲಿ ಅರ್ಹತೆಗಿಂತ ಅದೃಷ್ಟವೇ ಮೇಲು: ಬಸವರಾಜ ರಾಯರೆಡ್ಡಿ ಮಾರ್ಮಿಕ ಮಾತು
Team Udayavani, Aug 3, 2023, 3:04 PM IST
ಕಲಬುರಗಿ: ಸಚಿವರು ಹಾಗೂ ಶಾಸಕರ ನಡುವೆ ಒಮ್ಮತಾಭಿಪ್ರಾಯ ಮೂಡಿಸುವ ನಿಟ್ಟಿನ ಸಮನ್ವಯ ಸಮಿತಿ ಇದ್ದರೆ ತಪ್ಪೇನು? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಸಮನ್ವಯ ಸಮಿತಿ ಮಾಡುವ ಕೆಲಸವನ್ನೇ ಮಾಡಲು ಪ್ರತಿ ಎರಡು ತಿಂಗಳಿಗೊಮ್ಮೆ ಸಚಿವರೊಂದಿಗೆ ಆಯಾ ಜಿಲ್ಲಾ ಶಾಸಕರನ್ನು ಒಳಗೊಂಡ ಪ್ರತ್ಯೇಕ ಸಭೆ ನಡೆಸಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಎರಡು ತಿಂಗಳಿಗೊಮ್ಮೆ ಸಚಿವರೊಂದಿಗೆ ಶಾಸಕರೊಂದಿಗೆ ಮಹತ್ವದ ಸಭೆ ಮಾಡಿದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ. ಸಭೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆಸಲಾದ ಶಾಸಕಾಂಗ ಸಭೆಯಲ್ಲಿ ಒಪ್ಪಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಿಎಂ ಅವರು ಕಡ್ಡಾಯವಾಗಿ ಸಭೆ ನಡೆಸಬೇಕೆಂದರು.
ಮಂತ್ರಿಗಳ ಹಾಗೂ ಶಾಸಕರ ನಡುವೆ ಅಸಮಾಧಾನವಿಲ್ಲ. ಆದರೆ ಕಾರ್ಯವೈಖರಿ ಬಗ್ಗೆ ಹೇಳಲು ಶಾಸಕಾಂಗ ಸಭೆ ಕರೆಯುವಂತೆ ಪತ್ರ ಬರೆಯಲಾಗಿತ್ತು. ಸಭೆ ನಡೆದರೆ ಇಬ್ಬರ ನಡುವೆ ಸೌಹಾರ್ದತೆ ಮೂಡಲು ಸಾಧ್ಯವಾಗುತ್ತದೆ ಎಂದರು.
ಅರ್ಹತೆಗಿಂತ ಅದೃಷ್ಟವೇ ಮೇಲು: ರಾಜಕೀಯದಲ್ಲಿ ಅರ್ಹತೆಗಿಂತ ಅದೃಷ್ಟವೇ ಮೇಲು ಎಂಬುದನ್ನು ನಾವು ಅನುಭವಕ್ಕೆ ಕಂಡುಕೊಳ್ಳಬಹುದಾಗಿದೆ. ಹಿರಿತನ ಎಂಬುದು ಮಾನದಂಡವೇ ಇಲ್ಲ. ಬಿಜೆಪಿ ಪಕ್ಷ ಎಲ್. ಕೆ.ಆದ್ವಾನಿ ಕಟ್ಟಿದರು. ಆದರೆ ನರೇಂದ್ರ ಮೋದಿ ಪ್ರಧಾನಿಯಾದರು. ಸಿದ್ದರಾಮಯ್ಯ ಹೊರಗಿನಿಂದ ಬಂದವರಾದರೂ ಎರಡು ಸಲ ಸಿಎಂಯಾದರು. ಇಲ್ಲಿ ಸಿದ್ದರಾಮಯ್ಯ ಅವರಿಗೆ ಅರ್ಹತೆ ಜತೆಗೆ ಅದೃಷ್ಟ ಕೈ ಜೋಡಿಸಿತು. ತಾವು ಎಸ್. ಆರ್. ಬೊಮ್ಮಾಯಿ, ಎಚ್. ಡಿ. ದೇವೇಗೌಡ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಎಸ್. ಆರ್ ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಹಾಗೂ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರು. ಇದನ್ನು ಅದೃಷ್ಟ ಎಂದೇ ಹೇಳಬಹುದು ಎಂದು ರಾಯರೆಡ್ಡಿ ಮಾರ್ಮಿಕವಾಗಿ ಹೇಳಿದರು.
ಆಳಿತದಲ್ಲಿ ಅನುಭವವಿದ್ದರೆ ಮಂತ್ರಿಯಾದರೆ ಒಳ್ಳೆಯದು: ಆಡಳಿತದಲ್ಲಿ ಅನುಭವ ಇದ್ದವರು ಮಂತ್ರಿಯಾದರೆ ಒಳ್ಳೆಯದು ಎಂದು ಶಾಸಕ ಬಸವರಾಜ ರಾಯರೆಡ್ಡಿ ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಹಿರಿಯರೇ ಸಚಿವರಾಗಬೇಕೆಂಬುದಿಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರಾದವರೂ ಮಂತ್ರಿಯಾಗಬಹುದು. ಕಿರಿಯರು ಸಚಿವರಾಗಿದ್ದಕ್ಕೆ ತಮ್ಮ ಟೀಕೆ ಏನು ಇಲ್ಲ. ಅನುಭವ ಇದ್ದವರು ಮಂತ್ರಿಯಾದರೆ ಒಳ್ಳೆಯದು ಎಂಬುದು ತಮ್ಮ ಅನಿಸಿಕೆಯಾಗಿದೆ ಎಂದರು.
ಸಚಿವರ ಮೌಲ್ಯಮಾಪನ ನಡೆಯಲಿ: ವರ್ಷಕೊಮ್ಮೆ ಸಚಿವರ ಮೌಲ್ಯಮಾಪನ ನಡೆಯಲಿ. ಐಎಎಸ್ – ಐಪಿಎಸ್ ಅಧಿಕಾರಿಗಳಿಗೆ ವರ್ಷಕ್ಕೊಮ್ಮೆ ಸೇವಾ ಮೌಲ್ಯ ಮಾಪನ ನಡೆಯುತ್ತದೆ ಎಂದಾದ ಮೇಲೆ ಸಚಿವರ ಮೌಲ್ಯ ಮಾಪನ ನಡೆಯುವುದರಲ್ಲಿ ಯಾವ ತಪ್ಪಿಲ್ಲ ಎಂದು ಶಾಸಕ ರಾಯರೆಡ್ಡಿ ಹೇಳಿದರು
ಮಂತ್ರಿಯೇ ಕೆಕೆಆರ್ ಡಿಬಿ ಅಧ್ಯಕ್ಷರಾಗಲಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷ ಸ್ಥಾನ ಶಾಸಕರ ಬದಲು ಸಚಿವರೇ ಅಧ್ಯಕ್ಷರಾಗುವುದು ಸೂಕ್ತ. ನನ್ನ ಪ್ರಕಾರ ಮುಖ್ಯಮಂತ್ರಿ ಗಳೇ ಅಧ್ಯಕ್ಷರಾಗಲಿ ಎಂಬುದು ತಮ್ಮ ಒತ್ತಾಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಕೆಆರ್ ಡಿಬಿ ಯಿಂದ ಪರಿಣಾಮಕಾರಿ ಕೆಲಸ ಆಗಿಲ್ಲ. ಹೀಗಾಗಿ ಅನುಭವದವರೇ ಅಧ್ಯಕ್ಷರಾಗಲಿ. ತಾವಂತು ಅಧ್ಯಕ್ಷ ಸ್ಥಾನದ ಬಗ್ಗೆ ಆಸ್ತಕ್ತಿ ಹೊಂದಿಲ್ಲ ಎಂದು ರಾಯರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.