ರೈಲ್ವೆ ವಿಭಾಗೀಯ ಕಚೇರಿಗಾಗಿ ಬೃಹತ್ ಪ್ರತಿಭಟನೆ
Team Udayavani, Dec 6, 2018, 10:40 AM IST
ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ವಿಭಾಗೀಯ ಕಚೇರಿ ಆರಂಭಿಸದೇ ಇರುವುದನ್ನು ಖಂಡಿಸಿ ಗಣರಾಜ್ಯೋತ್ಸವ ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿ ಹೈದ್ರಾಬಾದ-ಕರ್ನಾಟಕ ಜನಪರ ಸಂಘರ್ಷಸಮಿತಿ ಸದಸ್ಯರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಹೈ.ಕ ಜನಪರ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ನೂರಾರು ಕಾಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ರೈಲು ನಿಲ್ದಾಣದ ಎದುರು ಧರಣಿ ಹಮ್ಮಿಕೊಂಡು ಕಲಬುರಗಿ ವಿಭಾಗೀಯ ಕಚೇರಿ ಆರಂಭಕ್ಕೆ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಪ್ರಧಾನಿ, ರೈಲ್ವೆ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಿದರು.
1984-85ರ ಸರೀನ್ ಕಮಿಟಿಯು ನಗರದಲ್ಲಿ ರೈಲ್ವೆ ವಿಭಾಗ ಸ್ಥಾಪಿಸಲು ಶಿಫಾರಸು ಮಾಡಿತ್ತು. ನಂತರ 2014ರಲ್ಲಿ ವಿಭಾಗೀಯ ಕೇಂದ್ರವನ್ನು ಮಂಜೂರು ಮಾಡಲಾಗಿದೆ. ಆದರೆ, ಇದುವರೆಗೂ ವಿಭಾಗೀಯ ಕಚೇರಿ ಸ್ಥಾಪನೆಯನ್ನೇ ಮಾಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈದ್ರಾಬಾದ ಕರ್ನಾಟಕ ಭಾಗದಲ್ಲಿ 371(ಜೆ)ನೇ ಕಲಂ ಜಾರಿಯಾಗಿದ್ದರೂ ರೈಲ್ವೆಗೆ ಸಂಬಂಧಿಸಿದ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಹೈಕ ಭಾಗದ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನು ಹೊಂದಿದ್ದು, ಸಿಕಿಂದ್ರಾಬಾದ್, ಮುಂಬೈ, ಹುಬ್ಬಳ್ಳಿ ರೈಲ್ವೆ ವಲಯಗಳಲ್ಲಿ ಹೈಕ ಭಾಗದ ಆರು ಜಿಲ್ಲೆಗಳು ಹಂಚಿ ಹೋಗಿವೆ. ಇದರಿಂದಾಗಿ ರೈಲ್ವೆ ಸೌಲಭ್ಯಗಳು ಈ ಭಾಗದವರಿಗೆ ಸಿಗದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಎಸಿಸಿ, ರಾಜಶ್ರೀ, ವಾಸವದತ್ತ ಸೇರಿದಂತೆ 12ಕ್ಕೂ ಹೆಚ್ಚು ಸಿಮೆಂಟ್ ಕಾರ್ಖಾನೆಗಳಿದ್ದು, ಕಲಬುರಗಿ ಹಾಗೂ ವಾಡಿ ನಿಲ್ದಾಣಗಳಿಂದ ಸೊಲ್ಲಾಪುರ ವಿಭಾಗಕ್ಕೆ ಶೇ.50ರಷ್ಟು ಆದಾಯ ಸಂದಾಯವಾಗುತ್ತಿದೆ. ಕರ್ನಾಟಕದ ಅತಿ ಹೆಚ್ಚು ಆದಾಯ ಗಳಿಕೆಯಲ್ಲಿ ಕಲಬುರಗಿ ನಾಲ್ಕನೇ ರೈಲ್ವೆ ನಿಲ್ದಾಣವಾಗಿದೆ. ಅಲ್ಲದೇ, ಕಲಬುರಗಿ ಜಿಲ್ಲೆಯೊಂದರಿಂದಲೇ ಪ್ರತಿ ವರ್ಷ ಸುಮಾರು 1800 ಕೋಟಿ ರೂ. ಆದಾಯ ಮಧ್ಯ ಮತ್ತು ದಕ್ಕಿಣ ಮಧ್ಯ ರೈಲ್ವೆ ವಲಯಕ್ಕೆ ಹೋಗುತ್ತಿದೆ.
ಆದರೂ, ಈ ಭಾಗದ ಜನತೆಗೆ ರೈಲ್ವೆ ಸೌಕರ್ಯಗಳನ್ನು ಒದಗಿಸದೆ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು. ಬೀದರ್-ಕಲಬುರಗಿ (112 ಕಿ.ಮೀ) ನಡುವೆ ಹೊಸ ರೈಲು ಮಾರ್ಗ ಪೂರ್ಣಗೊಂಡಿದೆ. ರಾಯಚೂರು-ಗಿಣಿಗೇರ (125 ಕಿ.ಮೀ) ಮತ್ತು ಗದಗ-ವಾಡಿ (252 ಕಿ.ಮೀ) ರೈಲು
ಮಾರ್ಗಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ವಿಜಯಪುರ-ಶಹಾಬಾದ (140 ಕಿ.ಮೀ), ಕಲಬುರಗಿ-ಲಾತೂರ್ (150 ಕಿ.ಮೀ) ಹೊಸ ರೈಲು ಮಾರ್ಗದ ಪ್ರಸ್ತಾಪವಿದೆ. ಇವೆಲ್ಲವೂ ಪೂರ್ಣಗೊಳ್ಳಲು ರೈಲ್ವೆ ವಿಭಾಗ ಆರಂಭ ಅವಶ್ಯವಾಗಿದೆ ಎಂದರು.
ವಾಡಿ-ವಿಕಾರಾಬಾದ್, ವಾಡಿ-ರಾಯಚೂರು ಮಾರ್ಗಗಳ ವಿದ್ಯುತ್ತೀಕರಣ, ವಾಡಿ-ಹೊಟಗಿ ಹಾಗೂ ಹೊಟಗಿ ಬಾಗಲಕೋಟೆ ಮಾರ್ಗದಲ್ಲಿ ಡಬ್ಲಿಂಗ್ ಮಾರ್ಗ ಸ್ಥಾಪನೆ ಸೇರಿದಂತೆ ಹಲವು ರೈಲ್ವೆ ಕಾಮಗಾರಿಗಳು ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಪ್ರಸ್ತಾವನೆಯಲ್ಲಿ ಇವೆ.
ಕಲಬುರಗಿ-ಬೆಂಗಳೂರು ಪ್ರತಿದಿನ ಎಕ್ಸ್‌ಪ್ರೆಸ್ ರೈಲು, ಬೀದರ್-ಕಲಬುರಗಿ-ಬಳ್ಳಾರಿ ಮಾರ್ಗದಲ್ಲಿ ಇಂಟರ್ ಸಿಟಿ ರೈಲು, ಕಲಬುರಗಿ-ಮುಂಬೈ ಎಕ್ಸ್‌ಪ್ರೆಸ್ ರೈಲು ಹಾಗೂ ಬೀದರ್-ಬೆಂಗಳೂರು (ಕಲಬುರಗಿ-ವಾಡಿ ವಾಯಾ) ಅಂತೋದಯ ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.
ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಮುಂದಿನ ಜನವರಿ 1ರೊಳಗೆ ಆರಂಭಿಸಬೇಕು. ಇಲ್ಲವಾದಲ್ಲಿ ಹೈ.ಕ ಭಾಗವನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಜ.26ರ ಗಣರಾಜ್ಯೋತ್ಸವ ಆಚರಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಆಕಾಶ ರಾಠೊಡ, ಮನೀಷ್ ಜಾಜು, ರಾಹುಲ್ ಹೊನ್ನಳ್ಳಿ, ಬಸವರಾಜ ಅನ್ವರ, ಸುರೇಶ ಪೂಜಾರಿ, ಸುನೀಲ ಕುಲಕರ್ಣಿ, ಶಿವಲಿಂಗಪ್ಪ ಬಂಡಕ, ಬಸವರಾಜ್ ಚಿಡಗುಂಪಿ, ಅಸ್ಲಂ ಚೌಂಗೆ, ಮೊಹ್ಮದ್ ಮಿರಾಜೋದ್ದೀನ್, ಶಾಂತಪ್ಪ ಕಾರಭಾಸಗಿ, ಬಾಬಾ ಫಕ್ರೋದ್ದೀನ್, ಸಂತೋಷ ಬಿ, ವೀರೇಶ ಪುರಾಣಿಕ, ಜ್ಞಾನಮಿತ್ರ, ಮಾರುತಿ ಪಾಟೀಲ ಮುಂತಾದವರು ಭಾಗವಹಿಸಿದ್ದರು.
ಕಲಬುರಗಿಯಲ್ಲಿ ವಿಭಾಗೀಯ ಕಚೇರಿ ಆರಂಭಿಸದೇ ಕೇಂದ್ರ ಸರ್ಕಾರ ಹೈಕ ಭಾಗದ ಜನತೆಯನ್ನು ವಂಚಿಸುತ್ತಿದೆ. ರೈಲ್ವೆ ವಿಭಾಗ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ಕಚೇರಿ ಸ್ಥಾಪಿಸಲು ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಹೈ.ಕ ಭಾಗದಿಂದ ಕೋಟ್ಯಂತರ ರೂ. ಆದಾಯ ಮಧ್ಯ ಮತ್ತು ದಕ್ಷಿಣ ಮಧ್ಯ ವಲಯಕ್ಕೆ ಸಂದಾಯವಾಗುತ್ತಿದೆ. ಕಲಬುರಗಿ ವಿಭಾಗೀಯ ಕೇಂದ್ರ ಸ್ಥಾಪನೆಯಾದಲ್ಲಿ ಆದಾಯ ಸ್ಥಗಿತವಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ಕೇಂದ್ರ ಸರ್ಕಾರ ಜನವರಿ ತಿಂಗಳೊಳಗೆ ಕಲಬುರಗಿ ವಿಭಾಗೀಯ ಕಚೇರಿ ಶುರು ಮಾಡಬೇಕು. ಇಲ್ಲವಾದರೆ ಗಣರಾಜ್ಯೋತ್ಸವ ಬಹಿಷ್ಕಾರ ಮಾಡಲಾಗುವುದು.
ಲಕ್ಷ್ಮಣ ದಸ್ತಿ, ಅಧ್ಯಕ್ಷ ಹೈ.ಕ ಜನಪರ ಹೋರಾಟ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.