![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 7, 2020, 9:26 AM IST
ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿಗೊಂಡು ಜಾರಿಗೆ ಬಂದಿರುವ ಸಂವಿಧಾನದ 371ಜೆ ವಿಧಿ ಅಡಿಯ ನೇಮಕಾತಿಗೆ ರಾಜ್ಯ ಸರ್ಕಾರ ಕೊಕ್ಕೆ ಹಾಕಿದೆ.
ಪ್ರಸಕ್ತ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳ ಭರ್ತಿ ಮಾಡದಿರುವಂತೆ ಸೋಮವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ನೇಮಕಾತಿ ತಡೆ ಹಿಡಿಯಲಾಗಿದೆ. ಗಾಯದ ಮೇಲೆ ಬರೆ ಎಳೆಯುವಂತೆ ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ತಡೆ ಹಿಡಿಯಲಾಗಿದೆ. ರಾಜ್ಯ ಸರ್ಕಾರದ ಸಚಿವಾಲಯ ಈ ಕುರಿತು ಸುತ್ತೋಲೆ ಹೊರಡಿಸಿದೆ. ಕೋವಿಡ್-19ನಿಂದ ಉಂಟಾದ ಆರ್ಥಿಕ ಪರಿಸ್ಥಿತಿ ಸುಸ್ಥಿತಿ ತರುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
371ನೇ ಜೆ ವಿಧಿ ತಿದ್ದುಪಡಿಯಾಗಿ ಏಳು ವರ್ಷಗಳಾಗುತ್ತಿವೆ. ಆ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಅಂದಾಜು 50 ಸಾವಿರ ಹುದ್ದೆಗಳನ್ನು ವರ್ಷದೊಳಗೆ ಭರ್ತಿ ಮಾಡುವ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಂದಿನ ದಿನದವರೆಗೆ ಕೇವಲ 14 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಏಳೆಂಟು ಸಾವಿರ ಹುದ್ದೆಗಳಿಗೆ ನೇಮಕಾತಿಯಾಗಿದ್ದರೂ ವಿವಿಧ ಕಾರಣಗಳಿಂದ ಇನ್ನೂ ಸೇವೆಗೆ ಹಾಜರಾಗಿಲ್ಲ. ಆಶ್ಚರ್ಯಕರ ಸಂಗತಿ ಏನೆಂದರೆ ಕಳೆದೆರಡು ವರ್ಷಗಳ ಅವಧಿಯಲ್ಲೇ ಈ ಭಾಗದಲ್ಲಿ 20 ಸಾವಿರಕ್ಕೂ ಅಧಿಕ ನೌಕರರು ನಿವೃತ್ತಿಯಾಗಿದ್ದಾರೆ. ಹೀಗೆ ಒಂದರ ಮೇಲೆ ಒಂದು ಅನ್ಯಾಯ ನಡೆಯುತ್ತಲೇ ಬರುತ್ತಿದೆ. ಕುಂಟುತ್ತಾ ಹುದ್ದೆಗಳ ಭರ್ತಿ ನಡೆದಿತ್ತು. ಈಗ ಸಂಪೂರ್ಣ ಕಾಲು ಮುರಿದಂತಾಗಿದೆ.
ಸಚಿವ ಸಂಪುಟ ಉಪ ಸಮಿತಿ ಏಲ್ಲಿ?: 371ನೇ ಜಾರಿಯಲ್ಲಿನ ಲೋಪ ದೋಷಗಳನ್ನು ನಿವಾರಿಸಿಲು ಹಾಗೂ ಸಣ್ಣ-ಪುಟ್ಟ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಹಿರಿಯ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ಉಪ ಸಮಿತಿ ಮಾತೇ ಇಲ್ಲ. ಇದು ಈ ಭಾಗದ ಬಗ್ಗೆ ಸರ್ಕಾರ ಹೊಂದಿರುವ ಕಾಳಜಿ ನಿರೂಪಿಸುತ್ತದೆ.
ಕಲ್ಯಾಣ ಕರ್ನಾಟಕ ನಾಮಾಂಕಿತದ ಕೊಡುಗೆ: ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ಇದ್ದಿರುವುದನ್ನು ಕಲ್ಯಾಣ ಕರ್ನಾಟಕವೆಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಸಚಿವಾಲಯ ತೆರೆಯುವುದಾಗಿ ಹೇಳಿದ್ದರು. ಆದರೆ ಮಾರ್ಚ್ ಅಂತ್ಯದವರೆಗೂ ಮಾಡಲೇ ಇಲ್ಲ. ಈಗ ಕೋವಿಡ್ ಎದುರಾಗಿದೆ ಎಂದು ಹೇಳಿ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿಗೆ ತಡೆ ನೀಡಿರುವುದು ಎಷ್ಟು ಸಮಂಜಸ ಎಂದು ಈ ಭಾಗದ ಪ್ರಜ್ಞಾವಂತ ನಾಗರಿಕರ ಪ್ರಶ್ನೆಗೆ ಸರ್ಕಾರದ ಬಳಿ ಯಾವುದೇ ಉತ್ತರ ಇಲ್ಲ
ಕೆಕೆಆರ್‌ಡಿಬಿಗೆ ಅಧ್ಯಕ್ಷರ ನೇಮಕ ಮರೆತ ಸರ್ಕಾರ : ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ವರ್ಷವಾಗುತ್ತದೆ. ಸರ್ಕಾರ ಬಂದು ವರ್ಷವಾಗುತ್ತಿದ್ದರೂ 371ಜೆ ವಿಧಿ ಅಡಿ ಅಸ್ತಿತ್ವಕ್ಕೆ ಬಂದಿರುವ ಇಲ್ಲಿನ ಪ್ರಮುಖ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಗೆ ಅಧ್ಯಕ್ಷರ ನೇಮಕಕ್ಕೆ ಮುಂದಾಗದಿರುವುದು ಸರ್ಕಾರ ಈ ಭಾಗದ ಬಗ್ಗೆ ಹೊಂದಿರುವ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ.
ಪ್ರತ್ಯೇಕ ಸಚಿವಾಲಯವೂ ಮೂಲೆಗುಂಪು : ಕಳೆದ 2019ರ ಸೆ.17ರಂದು ಹೈ.ಕ ಭಾಗದ ಹೆಸರನ್ನು ಕಲ್ಯಾಣ ಕರ್ನಾಟಕವೆಂದು ನಾಮಾಂಕಿತಗೊಳಿಸಲು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಲು ಸಿಎಂ ಯಡಿಯೂರಪ್ಪ ಆಗಮಿಸಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಇಂದಿನ ದಿನದವರೆಗೂ ಅಸ್ತಿತ್ವಕ್ಕೆ ಬಂದಿಲ್ಲ.
ಪಿಯು ಉಪನ್ಯಾಸಕರು, ಶಿಕ್ಷಕರು ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್ ಜತೆಗೆ ಪೊಲೀಸ್ ಸಿಬ್ಬಂದಿ ಸೇರಿ ಇತರ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಲ್ಕು ಸಾವಿರ ಹುದ್ದೆಗಳನ್ನಾದರೂ ಸಿಗುತ್ತವೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಈಗ ಕೊಕ್ಕೆ ಹಾಕಿದೆ. ಮೊದಲೇ ಖಾಲಿ ಹುದ್ದೆಗಳಿಂದ ಭಾಗ ನರಳುತ್ತಿದೆ. ಸರ್ಕಾರ ಈಗ ಬರೆಯೊಂದನ್ನು ಎಳೆದಿದೆ. ಇದು ಕಲ್ಯಾಣ ಕರ್ನಾಟಕ ನಾಮಾಂಕಿತದ ಕೊಡುಗೆ ಎನ್ನಲಾಗುತ್ತಿದೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.