6ನೇ ಚಿತ್ರಸಂತೆಯಲ್ಲಿ ಕಲಾಕೃತಿಗಳ ಕಲರವ
Team Udayavani, Jan 14, 2019, 6:59 AM IST
ಕಲಬುರಗಿ: ಕಳೆದ ಆರು ವರ್ಷಗಳಿಂದ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ಚಿತ್ರಸಂತೆ ರವಿವಾರ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ನಡೆದು ಕಲಾಕೃತಿಗಳ ಕಲರವ ಮೆರಗು ತಂದಿತು. ಸಾರ್ವಜನಿಕ ಉದ್ಯಾನವನದಲ್ಲಿ ರವಿವಾರ ಬೆಳಗ್ಗೆ 10ರಿಂದ ರಾತ್ರಿ 7:30ರ ವರೆಗೆ ನಡೆದ 6ನೇ ಚಿತ್ರಸಂತೆಯಲ್ಲಿ ನೂರಾರು ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಆಸಕ್ತಿಯಿಂದ ಭಾಗವಹಿಸಿದ್ದರು.
ಚಿತ್ರರಸಿಕರು ಆಸಕ್ತಿಯಿಂದ ವೀಕ್ಷಿಸಿದರಲ್ಲದೇ ಕಲಾಕೃತಿಗಳನ್ನು ಖರೀದಿ ಮಾಡಿ ಕಲಾವಿದರಿಗೆ ಸಹಾಯ ಮಾಡಿದರು. ಆದರೆ ಈ ವರ್ಷ ಮೂರು ಲಕ್ಷ ರೂ. ಮೌಲ್ಯದಷ್ಟು ಕಲಾಕೃತಿಗಳು ಮಾರಾಟವಾದವು ಎನ್ನಲಾಗಿದೆ. ಆದರೆ ಹಿಂದಿನ ವರ್ಷ 6 ರಿಂದ 7ಲಕ್ಷ ರೂ. ಮೌಲ್ಯದಷ್ಟು ಕಲಾಕೃತಿಗಳು ಮಾರಾಟವಾಗಿದ್ದವು.
ಕಲಾ ಗ್ಯಾಲರಿ ಸ್ಥಾಪನೆಯಾಗಲಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಎಚ್ಕೆಸಿಸಿಐ, ಗುಲ್ಬರ್ಗ ವಿವಿ , ಕೇಂದ್ರೀಯ ವಿವಿ, ವಿಕಾಸ ಅಕಾಡೆಮಿ, ಹೈ.ಕ ಶಿಕ್ಷಣ ಸಂಸ್ಥೆ, ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಚೈತನ್ಯಮಯಿ ಆರ್ಟ್ ಗ್ಯಾಲರಿ ಹಾಗೂ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ 6ನೇ ಚಿತ್ರ ಸಂತೆಗೆ ಚಾಲನೆ ನೀಡಿದ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಗಳಾದ ಪ್ರೊ| ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಜಗದ್ವಿಖ್ಯಾತ ಚಿತ್ರಕಲಾವಿದ ಡಾ| ಎಸ್.ಎಂ. ಪಂಡಿತ, ನಾಡೋಜ ಜೆ.ಎಸ್. ಖಂಡೇರಾವ್, ಡಾ| ಎ.ಎಸ್. ಪಾಟೀಲ ಮುಂತಾದ ಶ್ರೇಷ್ಠ ಕಲಾವಿದರ ನಾಡಾದ ಕಲಬುರಗಿಯಲ್ಲಿ 20 ಎಕರೆ ಭೂ ಪ್ರದೇಶದಲ್ಲಿ ಒಂದು ಶ್ರೇಷ್ಠ ಕಲಾ ಗ್ಯಾಲರಿ ನಿರ್ಮಾಣವಾಗುವುದು ಅಗತ್ಯವಾಗಿದೆ. ಇದು ಸಾಕಾರಗೊಂಡಲ್ಲಿ ಕಲಾಕೃತಿಗಳನ್ನು ವೀಕ್ಷಿಸಲು ಕಲಾಸಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆಗೆ 2 ಕೋಟಿ ರೂ. ಬಿಡುಗಡೆ ಮಾಡುವ ಸರ್ಕಾರ ಕಲಬುರಗಿಯಲ್ಲಿ ಐದು ವರ್ಷಗಳಿಂದ ನಡೆಯುತ್ತಿರುವ ಚಿತ್ರಸಂತೆಗೆ ಬಿಡಿಗಾಸು ನೀಡದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ಕುಲಪತಿಗಳು ನುಡಿದರು.
ವಿಕಾಸ ಅಕಾಡೆಮಿ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಿ, ಕಲೆಗೆ ಸೂಕ್ತ ಪ್ರೋತ್ಸಾಹ ಸಿಕ್ಕಾಗ ಅದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಚಿತ್ರಸಂತೆ ಪ್ರಧಾನ ಸಂಯೋಜಕ ಡಾ| ಎ.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ಚಿತ್ರಸಂತೆ ನಡೆಸಲಾಗುತ್ತಿದೆ. ಕಲಬುರಗಿಯಲ್ಲಿ ಐದು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. 50 ಸಾವಿರಕ್ಕಿಂತಲೂ ಹೆಚ್ಚಿನ ಕಲಾಸಕ್ತರು ಕಲಾಕೃತಿಗಳನ್ನು ವೀಕ್ಷಿಸಿದ್ದಾರೆ. ಸುಮಾರು 25 ಲಕ್ಷ ರೂ.ಗೂ ಹೆಚ್ಚು ಕಲಾಕೃತಿಗಳು ಮಾರಾಟವಾಗಿವೆ ಎಂದರು.
ಶಾಸಕಿ ಖನೀಜ್ ಫಾತೀಮಾ, ಎಚ್ಕೆಸಿಸಿಐ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗುಲ್ಬರ್ಗ ವಿವಿ ದೃಶ್ಯ ವಿಭಾಗದ ಡಾ| ಪರಿಮಳಾ ಅಂಬೇಕರ, ಆನಂದ ಟೆಕ್ಸ್ ಟೈಲ್‌ನ ಆನಂದ ದಂಡೋತಿ, ಎಸಿಸಿ ಸಿಮೆಂಟ್ ಕಂಪನಿಯ ವ್ಯವಸ್ಥಾಪಕ ಅಭಿನಂದನ್ ಕಿರಣಗಿ, ಚಿತ್ರಸಂತೆಯ ಸಂಯೋಜಕ ಡಾ| ಪರಶುರಾಮ ಪಿ. ಹಾಗೂ ಇತರರು ಇದ್ದರು. ಎಂ.ಎಚ್. ಬೆಳಮಗಿ ಸ್ವಾಗತಿಸಿದರು, ಡಾ| ಸುಜಾತಾ ಪಾಟೀಲ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್, ಭಾರತೀಯ ಹಬ್ಬಗಳು, ನಮ್ಮೂರ ಉದ್ಯಾನವನ ಕುರಿತು ಮಕ್ಕಳ ಚಿತ್ರಕಲಾ ಸ್ಪರ್ಧೆಯೂ ಜರುಗಿತು. ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಶಸ್ತಿಗಳನ್ನು ಹಾಗೂ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.
ಮನರಂಜಿಸಿದ ಕಲಾಕೃತಿಗಳು: ಚಿತ್ರಸಂತೆಗೆ ಮಹಾನಗರದ ನಾಗರಿಕರು ಕುಟುಂಬ ಸಮೇತ ಆಗಮಿಸಿ ಕಲಾಕೃತಿಗಳನ್ನು ವೀಕ್ಷಿಸುತ್ತಿರುವುದು ಕಂಡು ಬಂತು. ಮೂರ್ತ ಚಿತ್ರ, ಭಾವಚಿತ್ರ, ನಿಸರ್ಗ ಚಿತ್ರ, ಪಕ್ಷಿ, ಪ್ರಾಣಿಗಳ ಚಿತ್ರಗಳು, ಐತಿಹಾಸಿಕ ಸ್ಮಾರಕಗಳು, ರಾಷ್ಟ್ರೀಯ ನಾಯಕರು, ದೇವಾನುದೇವತೆಗಳು, ಶರಣರ, ಜನಪದ ಸಂಸ್ಕೃತಿ, ರೇಖಾ ಚಿತ್ರಗಳು, ಮಧುಬನಿಯಂತಹ ಜನಪದ ಶೈಲಿಯ ಚಿತ್ರ, ಮೈಸೂರು ತಂಜಾವೂರು ಶೈಲಿಯ ಸಾಂಪ್ರಾದಾಯಿಕ ಚಿತ್ರಕಲೆ ಸೇರಿದಂತೆ ನೂರಾರು ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.