ಖಾಸಗಿ ಆಸ್ಪತ್ರೆಗೆ ಶಿಫಾರಸು: ತನಿಖೆಗೆ ಆದೇಶ
Team Udayavani, Oct 20, 2017, 10:17 AM IST
ಕಲಬುರಗಿ: ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಡೆಂಘೀ ಪೀಡಿತ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ ವೈದ್ಯರು ಅಥವಾ ವ್ಯಕ್ತಿಗಳು ಯಾರು ಎನ್ನುವ ಕುರಿತು ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಜಿಲ್ಲಾಧಿಕಾರಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಘೀ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರ ನೂರಾರು ಕೋಟಿ ರೂ. ಖರ್ಚು ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿದ್ದರೂ, ಅಧಿಕಾರಿಗಳು ಸರಕಾರಿ ಆಸ್ಪತ್ರೆಗೆ ಬರುವ ಬರುವ ಡೆಂಘೀ ಪೀಡಿತ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಎಂದು ಅಧಿಕಾರಿಗಳು ಹೇಳಿದ ಕುರಿತು ನನಗೆ ದೂರು ಬಂದಿವೆ. ಈ ಕುರಿತು ವಾರದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ನೀಡಿ ಎಂದು ಸೂಚಿಸಿದರಲ್ಲದೇ, ವರದಿಯಲ್ಲಿ ತಪ್ಪಿತಸ್ಥರು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಕ್ರೋಶ: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ 820 ಡೆಂಘೀ ಪ್ರಕರಣ ಪತ್ತೆಯಾಗಿವೆ. ಇವುಗಳಲ್ಲಿ ಕೇವಲ ಮೂವರು ಸಾವನ್ನಪ್ಪಿದ್ದಾರೆ. ಆಗಸ್ಟ್ ತಿಂಗಳಲ್ಲಿ 389, ಸೆಪ್ಟೆಂಬರ್‌ನಲ್ಲಿ 150 ಮತ್ತು ಅಕ್ಟೋಬರ್‌ನ 19 ದಿನಗಳಲ್ಲಿ 47 ಪ್ರಕರಣಗಳು ವರದಿಯಾಗಿವೆ. ಇದೆಲ್ಲವೂ ಏನು ಎಂದು ಪ್ರಶ್ನಿಸಿದರು. ನನಗೆ ಈ ದಾಖಲೆಗಳ ಬಗ್ಗೆ ಅನುಮಾನವಿದೆ. ನೀವು ಸರಿಯಾದ ಅಂಕಿ-ಅಂಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನೀವೆಲ್ಲ ಕೆಲಸಗೇಡಿಗಳಿದ್ದಿರಿ, ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಳಜಿ ವಹಿಸಿ: ಐದು ವರ್ಷದೊಳಗಿನ ಮಕ್ಕಳು ಡೆಂಘೀ ಪೀಡಿತರಾಗಿದ್ದರೆ ವಿಶೇಷ ಕಾಳಜಿ ವಹಿಸಬೇಕು. ಯಾವ ಪ್ರದೇಶದಿಂದ ಹೆಚ್ಚಿನ ಡೆಂಘೀ ಪ್ರಕರಣಗಳು ವರದಿಯಾಗುವವೋ ಆ ಪ್ರದೇಶದಲ್ಲಿ ಹೆಚ್ಚಿನ ಗಮನ ನೀಡಿ ಸೊಳ್ಳೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಮಹಾನಗರ ಪಾಲಿಕೆ ಪೌರಕಾರ್ಮಿಕರನ್ನು ಒಳಗೊಂಡ ಬೂತಮಟ್ಟದ ತಂಡಗಳು ಆಗಸ್ಟ್ 10ರವರೆಗೆ ಎರಡು ಬಾರಿ ಮನೆ-ಮನೆಗೆ ತೆರಳಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸಿವೆ. ಅದೇ ರೀತಿ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ತಂಡಗಳನ್ನು ರಚಿಸಲಾಗಿದೆ ಎಂದರು.
ತಂಡ ರಚನೆ: ಸೊಳ್ಳೆ ನಾಶ ಮಾಡಲು ಇನ್ನೆರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ರಚಿಸಿದ ತಂಡಗಳ ಮೂಲಕ ಮೂರನೇ ಮತ್ತು ನಾಲ್ಕನೇ ಸುತ್ತಿನ ಸೊಳ್ಳೆ ಸಂತಾನೋತ್ಪತ್ತಿ ತಾಣ ನಾಶಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲ ತಾಲೂಕಿನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಫಾಗಿಂಗ್ ಯಂತ್ರಗಳನ್ನು ಎರಡು ದಿನದೊಳಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವಂತೆ ಡಿಸಿ ಸೂಚಿಸಿದರು.
ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎ.ಎಸ್.ರುದ್ರವಾಡಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ನಂತರ ಸಚಿವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಡೆಂಘೀ, ಮಕ್ಕಳ ವಾರ್ಡ್ ಹಾಗೂ ರಕ್ತನಿಧಿ ಪರಿಶೀಲಿಸಿದರು.
ಫಾಗಿಂಗ್‌ಗೆ ಆದ್ಯತೆ ನೀಡಲು ಸೂಚನೆ ಹೆಚ್ಚು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಫಾಗಿಂಗ್ ಯಂತ್ರಗಳನ್ನು ಕಲಬುರಗಿ ನಗರದಲ್ಲಿ ಫಾಗಿಂಗ್ ಮಾಡಲು ಬಳಕೆ ಮಾಡಿಕೊಂಡು ಸೊಳ್ಳೆಗಳ ನಿಯಂತ್ರಣ ಮಾಡಿ ಎಂದು ಸಚಿವ ಡಾ| ಶರಣಪ್ರಕಾಶ ಪಾಟೀಲ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಅವಧಿ ಮುಗಿಯಲಿರುವ ಆರೋಗ್ಯ ಕಾರ್ಯಕರ್ತರನ್ನು ಮುಂದುವರಿಸುವಂತೆ, ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ, ಸೊಳ್ಳೆಯ ನಿರ್ಮೂಲನೆ ಮಾಡಬೇಕು.
ಅಲ್ಲದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಡೆಂಘೀ ಪ್ರಕರಣಗಳನ್ನು ಕಡಿಮೆ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ ಮೂರುಗಾಲಿ ಗಾಡಿ ಇರುವ ಹಾಗೂ ಎಂಟು ಕೈ ಚಾಲಿತ ಫಾಗಿಂಗ್ ಯಂತ್ರಗಳಿವೆ. ಅದರೊಂದಿಗೆ ಜಿಲ್ಲೆಯ
ಇತೆರೆಡೆಗಳಲ್ಲಿರುವ 38 ಯಂತ್ರಗಳು ಎರಡು ದಿನಗಳಲ್ಲಿ ಮಹಾನಗರ ಪಾಲಿಕೆ ಸುಪರ್ದಿಗೆ ನೀಡಿ ನಗರದಲ್ಲಿನ ಸೊಳ್ಳೆಗಳ ನಿರ್ಮೂಲನೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.