ಶರಣಬಸವೇಶ್ವರ ಮಹಾರಥೋತ್ಸವ
Team Udayavani, Mar 26, 2019, 2:00 PM IST
ಕಲಬುರಗಿ: ಕಲ್ಯಾಣ ನಾಡಿನ ಈ ಭಾಗದ ಆರಾಧ್ಯದೈವ, ಮಹಾದಾಸೋಹಿ ಭಂಡಾರಿ ಶರಣಬಸವೇಶ್ವರ 197ನೇ ದಾಸೋಹ ಯಾತ್ರೆಯ ಮಹಾರಥೋತ್ಸವ ಸೋಮವಾರ
ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆಯಿಂದಲದೇ ಕಲಬುರಗಿ ಜಿಲ್ಲೆ ಹಾಗೂ ರಾಜ್ಯದ ಇತರ ಭಾಗಗಳಲ್ಲದೇ ಮಹಾರಾಷ್ಟ್ರ ಹಾಗೂ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೇಶದ ಇತರೆ ಸ್ಥಳಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತ ಸಮೂಹ ಭವ್ಯ ರಥೋತ್ಸವಕ್ಕೆ ಸಾಕ್ಷಿಯಾದರು.
ಸಂಜೆ 6.24ಕ್ಕೆ ಸರಿಯಾಗಿ ಐತಿಹಾಸಿಕ ರಥೋತ್ಸವಕ್ಕೆ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರು ಶಂಖನಾದ ಮೊಳಗಿಸಿ, ಪರುಷ ಬಟ್ಟಲು ಭಕ್ತರಿಗೆ ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಡಾ| ಅಪ್ಪ ಅವರು ಪರುಷ ಪ್ರಸಾದ ಬಟ್ಟಲು ತೋರಿಸಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿ, ಮಹಾದಾಸೋಹಿ ಶರಣಬಸವೇಶ್ವರರು ನಮ್ಮೆಲ್ಲರ ಹಾಗೆ ಮನುಷ್ಯರಾಗಿದ್ದರು. ಆದರೆ ಅವರು ನಡೆ-ನುಡಿಗಳಿಂದ ಶರಣರಾದರು. ಕಾಯಕ ನಿಷ್ಠೆಯಿಂದ ಪವಾಡ ಪುರುಷರೆನಿಸಿಕೊಂಡರು.
ಶರಣರು ಲಿಂಗೈಕ್ಯರಾಗಿದ್ದಾಗ ಐದು ದಿನ ಕಾಲ ಭಕ್ತರಿಗೆ ದರ್ಶನ ಅವಕಾಶ ನೀಡಲಾಗಿತ್ತಲ್ಲದೇ ದಿನಾಲು ಆಗಿನ ಕಾಲದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಇದು ಅವರಲ್ಲಿನ ಪವಾಡತ್ವ-ದೈವತ್ವ ನಿರೂಪಿಸುತ್ತದೆ. ಆದ್ದರಿಂದ ನಾವೆಲ್ಲರೂ ಕೂಡಾ ಶರಣಬಸವೇಶ್ವರರ ತತ್ವಗಳನ್ನು ಮೈಗೂಡಿಸಿಕೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳುವುದು ಹಾಗೂ ಶರಣರ ಕಾಯಕ ಹಾಗೂ ದಾಸೋಹ ತತ್ವ ಮೈಗೂಢಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು.
ಡಾ| ಅಪ್ಪ ಅವರು ಶಂಖನಾದ ಮೊಳಗಿಸಿದಾಗ ದೇವಸ್ಥಾನ ಆವರಣದಲ್ಲಿ ಶೃಂಗಾರಗೊಂಡು ನಿಂತಿದ್ದ ರಥವನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಎಳೆದರು. ರಥವು ದೇವಸ್ಥಾನದ ಮುಂಭಾಗದ ದ್ವಾರದವರೆಗೆ ಹೋಗಿ, ಮರಳಿ ಸ್ವಸ್ಥಳಕ್ಕೆ ಸರಾಗವಾಗಿ ಬಂದು ನಿಂತಿತು.
ಜಾತ್ರೆಗೆ ಆಗಮಿಸಿದ ಭಕ್ತರು ಉತ್ತತ್ತಿ, ಕಾರೀಕು, ಬಾಳೆಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು. ರಥೋತ್ಸವ ಸಂದರ್ಭದಲ್ಲಿ ನೆರೆದ ಭಕ್ತರು “ಶರಣಬಸವೇಶ್ವರ ಮಹಾರಾಜ್ ಕೀ ಜೈ’ ಎಂದು ಮುಗಿಲು ಮುಟ್ಟುವ ಹಾಗೆ ಘೋಷಣೆಗಳನ್ನು ಕೂಗಿ ಧನ್ಯತೆ ಮೆರೆದರು.
ಈ ಭಾಗದಲ್ಲಿಯೇ ದೊಡ್ಡ ಜಾತ್ರೆಯಾಗಿರುವ ಈ ಶರಣಬಸವೇಶ್ವರ ಜಾತ್ರೆ ಯುಗಾದಿ ಹಬ್ಬದವರೆಗೂ ಅಂದರೆ 11 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. ರಥೋತ್ಸವ ನಂತರ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳು ನಿಲ್ಲಲ್ಲು ಸ್ಥಳವಿರಲಿಲ್ಲ. ಅಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಅಪ್ಪನ ಜಾತ್ರೆಗೆ ಆಗಮಿಸಿದ್ದರು.
ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದು, ಹೊಲಗಳಲ್ಲಿನ ಕೃಷಿ ಚಟುವಟಿಕೆಗಳಿಗೆ ಸದ್ಯ ಸ್ವಲ್ಪ ವಿರಾಮ ಇರುವುದರಿಂದ ರೈತಾಪಿ ವರ್ಗದವರೇ ಜಾಸ್ತಿಯಾಗಿ ಭಾಗವಹಿಸುತ್ತಾರೆ. ಜಾತ್ರೆ ಮುಗಿಸಿಕೊಂಡೆ ಮುಂದಿನ ವರ್ಷದ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದು ಈ ಭಾಗದ ಸಂಪ್ರದಾಯ.
ರಥೋತ್ಸವಕ್ಕೆ ನಾಡಿನ ವಿವಿಧ ಮೂಲೆ, ಮೂಲೆಗಳಿಂದ ಮಹಿಳೆಯರು, ಮಕ್ಕಳು, ಮಹನೀಯರು ಉತ್ಸಾಹದಿಂದ ದೇವಸ್ಥಾನ ಆವರಣ ಹಾಗೂ ಸುತ್ತಮುತ್ತಲು ನೂಕು ನುಗ್ಗಲಿನಲ್ಲಿ ಸೇರಿದ್ದರು.
ಡಾ| ಶಿವರಾಜ ಪಾಟೀಲ ಅವರು ವರ್ಷಂಪ್ರತಿ ತಪ್ಪದೇ ಕಳೆದ 56 ವರ್ಷಗಳಿಂದ ಶರಣಬಸವೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗೆ ಅನೇಕರು ರಥೋತ್ಸವಕ್ಕೆ ವರ್ಷಂಪ್ರತಿ ತಪ್ಪದೇ ಬರುವ ನಡೆಯನ್ನು ರೂಪಿಸಿಕೊಂಡಿದ್ದಾರೆ.
11 ದಿನಗಳ ಅಪ್ಪನ ಜಾತ್ರೆ ಐತಿಹಾಸಿಕ, ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರ ಮಹಾರಥೋತ್ಸವ ಸೋಮವಾರ ಸಂಜೆ ಜರುಗಿದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ರಥೋತ್ಸವಕ್ಕೆ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು ಪರುಷ ಬಟ್ಟಲು ಭಕ್ತರಿಗೆ ಪ್ರದರ್ಶಿಸಿ ಚಾಲನೆ ನೀಡಿದರು. ಜಾತ್ರೆಯು ಯುಗಾದಿ ಹಬ್ಬದವರೆಗೂ 11 ದಿನಗಳ ಸಂಭ್ರಮದಿಂದ ಜರುಗಲಿದೆ.
ರಥೋತ್ಸವ ಬಳಿಕ ಸುರಿದ ಮಳೆ
ಮಹಾದಾಸೋಹಿ ಶರಣಬಸವೇಶ್ವರ ರಥೋತ್ಸವ ಜರುಗಿದ ನಂತರ ಕಲಬುರಗಿ ಮಹಾನಗರಾದ್ಯಂತ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನತೆಗೆ ಈ ಮಳೆ ತಂಪಾದ ವಾತಾವರಣ ಮೂಡಿಸಿತು. ಶರಣನ ಜಾತ್ರೆಗೆ ನಾಡಿನ ಮೂಲೆ-ಮೂಲೆಗಳಿಂದ ಸಹಸ್ರಾರು ಭಕ್ತರು
ಬೇಸಿಗೆ ಬಿಸಿಲಿನ ನಡುವೆ ಆಗಮಿಸಿದ್ದರು. ಕಳೆದ ವಾರದಿಂದ ವಿಪರೀತ ಬಿಸಿಲು ವಾತಾವರಣವಿತ್ತು. ಊಸ್ಸಪ್ ಎಂದು ಉಸಿರು ಬಿಡುತ್ತಿದ್ದರು. ಆದರೆ ಈ ಮಳೆ ಕಾದು ಹಂಚಿನಂತಾಗಿದ್ದ ಭೂಮಿ ಸ್ವಲ್ಪ ಸಣ್ಣಗಾಯಿತು. ಇದೆಲ್ಲ ಶರಣನ ಮಹಿಮೆ ಎಂದು ಭಕ್ತರು ಕೊಂಡಾಡಿದರು.
ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಹಿಂದಿನ ಲೋಕಾಯುಕ್ತ ಡಾ| ಶಿವರಾಜ ಪಾಟೀಲ್, ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ನಿಷ್ಠಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಡಾ| ಲಿಂಗರಾಜ ಶಾಸ್ತ್ರಿ, ಡಾ| ಶಿವದತ್ತ ಹೊನ್ನಳ್ಳಿ, ಡಾ| ಲಕ್ಷ್ಮಿಮಾಕಾ, ಡಾ| ಶಿವರಾಜಶಾಸ್ತ್ರಿ ಹೇರೂರ, ಡಾ| ನೀಲಾಂಬಿಕಾ ಶೇರಿಕಾರ ಸೇರಿದಂತೆ ಅನೇಕ ಗಣ್ಯ ಮಾನ್ಯ ಜತೆಗೆ ಸಹಸ್ರಾರು ಭಕ್ತರು ಶರಣಬಸವೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮತದಾನ ಜಾಗೃತಿ
ವಿಶೇಷವೆಂದರೆ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗ ಹಾಗೂ ಕಮಲ ಟ್ರೆಡರ್ಸ್ ವತಿಯಿಂದ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ತಂಪು ಪಾನೀಯ ವಿತರಿಸಿ ಮತದಾನ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು. ಜತೆಗೆ ಇತರರಿಗೂ ಮತದಾನ ಮಾಡುವಂತೆ ತಿಳಿ ಹೇಳಬೇಕೆಂದು ಭಕ್ತರಿಗೆ ಕರೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.