ಬಿಸಿಲೂರೀಗ ಸೋಲಾರ್ ಜಿಲ್ಲೆ
Team Udayavani, Jul 6, 2018, 11:26 AM IST
ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾದ 2018-19ನೇ ಸಾಲಿನ ಮುಂಗಡ ಪತ್ರ ಈ ಭಾಗಕ್ಕೆ ಸ್ವಲ್ಪ ಸಂತಸ ತಂದಿದೆಯಾದರೂ ಹೆಚ್ಚಿನ ನಿಟ್ಟಿನಲ್ಲಿ ಅಸಮಾಧಾನ ತಂದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರೈತರ ಸಾಲ ಮನ್ನಾ ಸ್ವಾಗತಾರ್ಹ ಹಾಗೂ ಸಂತಸದ ಸಂಗತಿ. ಇದೇ ರೀತಿ ಕಲಬುರಗಿಯನ್ನು ಸೋಲಾರ ಜಿಲ್ಲೆಯನ್ನಾಗಿಸಲು ಕ್ರಮ ಕೈಗೊಂಡಿರುವುದು ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಪುನಃ ಘೋಷಣೆ ಮಾಡಿರುವುದು ಸ್ವಾಗತಾರ್ಹ ಅಂಶಗಳು. ಅದೇ ರೀತಿ ಕೃಷಿ ಸಮನ್ವಯ ಸಮಿತಿ ರಚನೆ ಕಾರ್ಯವೂ ಉತ್ತಮವಾಗಿದೆ.
ಬಿಸಿಲೂರಿಗೆ ವರ: ಸೋಲಾರ್ ಜಿಲ್ಲೆಯನ್ನಾಗಿ ಘೋಷಣೆ ಮಾಡಿರುವುದು ಬಿಸಿಲೂರಿಗೆ ವರವಾಗಿ ಪರಿಣಮಿಸಲಿದೆ. ಈಗಾಗಲೇ ರೈತರು ಬ್ಯಾಂಕ್‌ಗಳಿಂದ ಆರ್ಥಿಕ ಸೌಲಭ್ಯ ಪಡೆದು ಸೋಲಾರ್‌ನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಗೈರಾಣಿ ಭೂಮಿಯಲ್ಲಿ ಸೋಲಾರ ವಿದ್ಯುತ್ ಉತ್ಪಾದನೆ ಕ್ರಮ ಕೈಗೊಂಡಲ್ಲಿ ಜತೆಗೆ ಸೋಲಾರ್‌ಗೆ ಹೆಚ್ಚಿನ ನಿಟ್ಟಿನಲ್ಲಿ ಆರ್ಥಿಕ
ಸೌಲಭ್ಯ ಕಲ್ಪಿಸಿದಲ್ಲಿ ಯೋಜನೆ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ.
ಸಹಕಾರಿ ಸಂಘಗಳಲ್ಲದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಸಹ ಮನ್ನಾ ಮಾಡಿರುವುದು ಐತಿಹಾಸಿಕವಾಗಿದೆ. ಇದರಿಂದ ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರಿಗೆ 320 ಕೋಟಿ ರೂ. ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರಿಗೆ ಗರಿಷ್ಠ 950 ಕೋಟಿ ರೂ. ಆರ್ಥಿಕ ಸಹಾಯವಾಗಲಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
371ನೇ ಕಲಂ ಪರಿಣಾಮಕಾರಿ ಜಾರಿ, ಖಾಲಿ ಹುದ್ದೆಗಳ ಭರ್ತಿ, ಎಚ್‌ಕೆಆರ್‌ಡಿಬಿಗೆ 1500 ಕೋಟಿ ರೂ. ನೀಡಿಕೆ ಮುಂದುವರಿಕೆ, ನಷ್ಟದಿಂದ ಬಂದಾಗಿರುವ ತೊಗರಿ ಉದ್ಯಮಕ್ಕೆ ಪ್ಯಾಕೇಜ್ ಘೋಷಣೆ ಸೇರಿದಂತೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಕುರಿತಾಗಿ ಏನನ್ನೂ ಹೇಳದಿರುವುದು ಅಸಮಾಧಾನ ತಂದಿದೆ.
ರಾಜಕೀಯವಾಗಿ ಗಮನ ಸೆಳೆದಿರುವ ಹಾಗೂ ವಿಭಾಗೀಯ ಕೇಂದ್ರ ಕಲಬುರಗಿಗೆ ಏನಾದರೂ ಕೊಡುಗೆ ನೀಡಬಹುದು ಎನ್ನುವುದು ಈ ಭಾಗದ ಜನರ ನಿರೀಕ್ಷೆಯಾಗಿತ್ತು. ನಿರೀಕ್ಷೆಗೆ ಬಲ ತುಂಬುವಂತಹ ಯಾವುದೇ ಘೋಷಣೆ ಮುಂಗಡ ಪತ್ರದಲ್ಲಿಲ್ಲ. ಕಲಬುರಗಿ ಪಾಲಿಕೆ ವಿಶೇಷ ಆರ್ಥಿಕ ಸೌಲಭ್ಯ, ರಸ್ತೆಗಳ ಅಭಿವೃದ್ಧಿ, ತೊಗರಿ ಬಲವರ್ಧನೆಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎನ್ನುವ ಆಶಾಭಾವನೆ ಜನರಲ್ಲಿತ್ತು.
ಬಜೆಟ್ ಘೋಷಣೆ ಸಾಕಾರಗೊಳ್ಳುವುದಿಲ್ಲವೇ?: ಕಳೆದ ನಾಲ್ಕೈದು ಮುಂಗಡ ಪತ್ರ ಅವಲೋಕಿಸಿದರೆ ಪತ್ರದಲ್ಲಿನ ಘೋಷಣೆಗಳು ಕಾರ್ಯರೂಪಕ್ಕೆಬರುವುದಿಲ್ಲವೇ ಎನ್ನುವ ನುಮಾನ ಕಾಡುತ್ತಿದೆ.
ಏಕೆಂದರೆ ಬಜೆಟ್‌ನದಲ್ಲಿನ ಹಲವಾರು ಘೋಷಣೆಗಳು ಸಾಕಾರಗೊಂಡಿಲ್ಲ. 2014-15 ಹಾಗೂ 2015-16ನೇ ಸಾಲಿನಲ್ಲಿ ಮಂಡಿಸಲಾದ ಬಜೆಟ್‌ನ ಘೋಷಣೆಗಳು ಕಾರ್ಯರೂಪಕ್ಕೆ ಬಾರದೇ ಕನ್ನಡಿಯೊಳಗಿನ ಗಂಟೆಯಂತಾಗಿವೆ. ಕಲಬುರಗಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಲಯ ಕಚೇರಿಸ್ಥಾಪನೆ, ಕಲಬುರಗಿಯಲ್ಲಿ ಸರ್ಕಾರಿ ಔಷಧ ಮಹಾವಿದ್ಯಾಲಯ ಸ್ಥಾಪನೆ ಘೋಷಣೆಯೇ ಪ್ರಮುಖ ಉದಾಹರಣೆಯಾಗಿದೆ.
ಕಲಬುರಗಿ ಆಸ್ಪತ್ರೆಗೆ ಪ್ರತ್ಯೇಕಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್, ಪ್ರವಾಸೋದ್ಯಮ ಇಲಾಖೆಯ ಕಲಾವನ, ಕಲ್ಲೂರ-ಘತ್ತರಗಾ ಬ್ಯಾರೇಜ್ ಗಳಿಗೆ ಆಧುನಿಕ ಗೇಟ್‌ಗಳ ಅಳವಡಿಕೆ, ಕಲಬುರಗಿ ಮಹಾನಗರದ ನೀರು ಸರಬರಾಜು ಉನ್ನತೀಕರಣ, ಕಲಬುರಗಿ ಮಹಾನಗರಕ್ಕೆ ಪೊಲೀಸ್ ಆಯುಕ್ತಾಲಯ ಸ್ಥಾಪನೆ, ತೊಗರಿ, ಜೋಳ ಸಂಶೋಧನೆಗೆ ಒತ್ತು ನೀಡುವ ಕಾರ್ಯ ಸೇರಿದಂತೆ ಇತರ ಘೋಷಣೆಗಳನ್ನು ಉದಾಹರಿಸಬಹುದಾಗಿದೆ.
ಹೈ.ಕ. ನಿರ್ಲಕ್ಷ್ಯಕ್ಕೆ ಖಂಡನೆ
ಬೀದರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಭರದಲ್ಲಿ, ಯಾವುದೇ ಲೆಕ್ಕಾಚಾರವಿಲ್ಲದೆ, ಹಣ ಕ್ರೋಢಿಕರಣ ಬಗ್ಗೆ ಮಾಹಿತಿ ನೀಡದೆ ಸೂತ್ರವಿಲ್ಲದ ಗಾಳಿಪಟದಂತೆ ಬಜೆಟ್ ಮಂಡಿಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಈ ಬಜೆಟ್ ಅನ್ನು ಕೇವಲ ಮೂರು ಜಿಲ್ಲೆಗಳಿಗೆ ಸೀಮಿತಗೊಳಿಸಿ, ಹೈದ್ರಾಬಾದ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಖಂಡನೀಯ. ರಾಜ್ಯದ ಜನ ಸಾಮಾನ್ಯರಿಗೆ ಹೊರೆ ಹೊರಿಸಿ ಬೊಕ್ಕಸ ತುಂಬಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದು ವಿಷಾದನೀಯ.
ಚುನಾವಣೆಯಲ್ಲಿ ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣಾ ಭತ್ಯೆಯನ್ನು ತಿಂಗಳಿಗೆ ಎರಡು ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಸಣ್ಣ ಟ್ಯಾಕ್ಟರ್‌ಗಳ ಖರೀದಿಗೆ ಶೇ.75 ಮತ್ತು ಇನ್ನಿತರ ಸಲಕರಣೆಗಳ ಖರೀದಿಗೆ ಶೇ. 90 ಸಬ್ಸಿಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಬಲವರ್ಧನೆ, ಗರ್ಭಿಣಿಯರಿಗೆ 6 ತಿಂಗಳ ಕಾಲ ಮಾಸಿಕ 6000 ರೂ. ಸಹಾಯಧನ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 6000 ರೂ. 80 ವರ್ಷ ಮೇಲ್ಪಟ್ಟವರಿಗೆ 8,000 ರೂ. ಮಾಸಾಶನ, ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು 3500 ರೂ.ಗಳಿಂದ 5000 ರೂ.ಗಳಿಗೆ ಏರಿಸುವ ಭರವಸೆಗಳನ್ನು ಈಡೇರಿಸುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ.
ಸಾಲ ಮರುಪಾವತಿಗೆ ಪ್ರೋತ್ಸಾಹ ರೈತರ ಸಾಲ ಮನ್ನಾ ಮಾಡಿರುವುದು ಆಶಾದಾಯಕವಾಗಿದೆ. ಪ್ರಮುಖವಾಗಿ ಸುಸ್ತಿಸಾಲ ಮನ್ನಾ ಮಾಡುವ ಮೂಲಕ ರೈತ ಸಮುದಾಯ ಹಿತ ಕಾಪಾಡಲಾಗಿದೆ. ರೆಗ್ಯೂಲರ್ ಸಾಲ ಮರುಪಾವತಿ ಮಾಡಿದ ರೈತರ ಕುಟುಂಬಕ್ಕೆ 25 ಸಾವಿರ ರೂ. ಪ್ರೋತ್ಸಾಹಧನ ನೀಡುವುದು ಪ್ರೋತ್ಸಾಹದಾಯಕವಾಗಿದೆ. ಮುಂಬರುವ ದಿನಗಳಲ್ಲಿ ಉಳಿದ ರೈತರ ಸಾಲ ಮನ್ನಾ ಮಾಡಬೇಕು. ವಿವಿಧ ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಲಾಗಿದೆ. ಹೊಸ ಸಾಲ ವಿತರಣೆಗೂ ಮುಂದಾಗಿರುವುದು ಸ್ವಾಗತಾರ್ಹ.
ಸೋಮಶೇಖರ ಗೋನಾಯಕ, ಮಾಜಿ ಅಧ್ಯಕ್ಷರು ಡಿಸಿಸಿ ಬ್ಯಾಂಕ್
ಹಳೇ ಯೋಜನೆ ಮುಂದುವರಿಕೆ ಸ್ವಾಗತಾರ್ಹ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರೀಯ ಯೋಜನೆ ಹಾಗೂ ಕಾರ್ಯಕ್ರಮಗಳ ಮುಂದುವರಿಕೆ ಘೋಷಣೆ ಸ್ವಾಗತಾರ್ಹವಾಗಿದೆ. ನೀಡಿರುವ ವಾಗ್ಧಾನದಂತೆ ನಡೆದುಕೊಳ್ಳಲಾಗಿದೆ. ಜಿಲ್ಲೆಗೆ ಸೋಲಾರ ಪಾರ್ಕ್ ಘೋಷಣೆ ಸೇರಿದಂತೆ ಇತರ ಕಾರ್ಯಗಳು ಬಂದಿವೆ. ಸಮಾಜ ಕಲ್ಯಾಣ
ಇಲಾಖೆಗೆ ಅನುದಾನ ಮತ್ತಷ್ಟು ಹೆಚ್ಚಿಸಲಾಗಿದೆ.
ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವರು
ಹೈಕಕ್ಕೆ ಶೂನ್ಯ ಕೊಡುಗೆ
ಒಬ್ಬ ಮುಖ್ಯಮಂತ್ರಿಯಾಗಿ ನಾಡಿನ ಸಮಗ್ರತೆ ಕಾಪಾಡಬೇಕಿತ್ತು. ಅದನ್ನು ಬಿಟ್ಟುಸ್ವಕ್ಷೇತ್ರ ಸ್ವಭಾಗ ಪ್ರೇಮ ಮೆರೆದಿದ್ದಾರೆ. ಹೈಕ ಭಾಗ ಕುರಿತು ಕಿಂಚಿತ್ತೂ ಕಾಳಜಿ ತೋರಿಲ್ಲ. ಶೂನ್ಯ ಕೊಡುಗೆ ನೀಡಿದ್ದಾರೆ. ಸಾಲಮನ್ನಾ ಯೋಜನೆ ಕನ್ನಡಿಯೊಳಗಿನ ಗಂಟೆಯಂತೆ ತೋರಿಸಲಾಗಿದೆ. ಒಟ್ಟಾರೆ ಇದು ನಿರಾಶಾದಾಯಕ ಬಜೆಟ್. ಸಮಸ್ಯೆ ನಿವಾರಿಸಬೇಕಾದವರೆ ಪ್ರತ್ಯೇಕತೆ ಕೂಗಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ.
ರಾಜಕುಮಾರ ಪಾಟೀಲ ತೇಲ್ಕೂರ, ಸೇಡಂ ಶಾಸಕ
ಹಗಲಿನಲ್ಲಿ ನಕ್ಷತ್ರ ತೋರಿಸುವ ಕೆಲಸ
ರೈತರ 34000 ಕೋಟಿ ರೂ. ಸಾಲ ಮನ್ನಾ ಎಂದು ಘೋಷಿಸಿ ಈ ವರ್ಷ ಬರೀ 6500 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಹಳೆಯ ಬಾಕಿ ಮೊತ್ತ 8165 ಕೋಟಿ ರೂ. ಕೂಡಾ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ ಅದರ ಪೈಕಿ 4165 ಕೋಟಿ ರೂ. ಕೊಡಲಾಗಿದೆ. ಉಳಿದ 4000 ಕೋಟಿ ರೂ. ಮನ್ನಾ ಮಾಡಿದರೆ ಉಳಿಯುವುದು 2500 ಕೋಟಿ ರೂ. ಹೀಗಿರುವಾಗ 34000 ಕೋಟಿ ರೂ. ಎಲ್ಲಿಂದ ಬರುತ್ತೆ? ಜನರಿಗೆ ಹಗಲಲ್ಲೆ ನಕ್ಷತ್ರ ತೋರಿಸುವ ಕೆಲಸ ಮಾಡಲಾಗಿದೆ. ಕಲಬುರಗಿ ಜಿಲ್ಲೆಯನ್ನು ಸೋಲಾರ ಜಿಲ್ಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಸ್ವಾಗತ. ಆದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಅಕ್ಕಿಯ ಪ್ರಮಾಣವನ್ನು 7 ಕೆ.ಜಿ ಇಂದ 5 ಕೆ.ಜೆ ಗೆ ಇಳಿಸಿರುವುದು ಬಡ ಜನರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.
ಶಶೀಲ್ ಜಿ. ನಮೋಶಿ, ಮಾಜಿ ಶಾಸಕರು
ಬಜೆಟ್‌ನಲ್ಲೂ ಅನ್ಯಾಯ
ಅನ್ಯಾಯವಾಗಿರುವಂತೆ ಸಿಎಂ ಕುಮಾರಸ್ವಾಮಿ ಮಂಡಿಸಿದ 2018-19ನೇ ಸಾಲಿನ ಮುಂಗಡ ಪತ್ರದಲ್ಲೂ ಮುಂದುವರಿದಿದೆ. ಏಕೆಂದರೆ ಈ ಭಾಗಕ್ಕೆ ಸಂಬಂಧಿಸಿದಂತೆ ಸೋಲಾರ್ ಪಾರ್ಕ್‌ವೊಂದು ಬಿಟ್ಟರೆ ಉಳಿದ್ಯಾವ ಯೋಜನೆ ಕುರಿತಾಗಿ ಒಂದು ಅಕ್ಷರವೂ ಪ್ರಸ್ತಾಪವಿಲ್ಲ. 371ನೇ ಕಲಂ ಪರಿಣಾಮಕಾರಿ ಜಾರಿ, ಖಾಲಿ ಹುದ್ದೆಗಳ ಭರ್ತಿ, 371ನೇ ವಿಧಿ ಜಾರಿಗೆ ಪ್ರತ್ಯೇಕ ಮಂತ್ರಾಲಯ, ಕಲಬುರಗಿಯಲ್ಲಿ 371ನೇ ಕಲಂ ಅಭಿವೃದ್ಧಿ ಕೋಶದ ಕಚೇರಿ ಕಾರ್ಯಾರಂಭ ಕುರಿತಾಗಿ ಚಕಾರವೆತ್ತಿಲ್ಲ. ಒಟ್ಟಾರೆ ಈ ಬಜೆಟ್ ಹೈ.ಕ ಭಾಗಕ್ಕೆ ನಿರಾಶಾಯದಾಯಕ ಬಜೆಟ್.
ಲಕ್ಷ್ಮಣ ದಸ್ತಿ, ಅಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಸಂಘರ್ಷ ಸಮಿತಿ
ಸಾಲಮನ್ನಾ ಸ್ವಾಗತಾರ್ಹ
ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಇತಿ ಮಿತಿಯೊಳಗೆ ಸಹಕಾರಿ ಹಾಗೂ ರಾಷ್ಟ್ರೀಕೃತ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಸ್ವಲ್ಪ ಖಾಸಗಿ ಸಾಲ ಮನ್ನಾ ಕುರಿತಾಗಿ ಮನಸ್ಸು ಮಾಡಿದ್ದರೆ ಮತ್ತಷ್ಟು ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರದ ಬೆಂಬಲ ಬೆಲೆಗೆ ಪೂರಕವಾಗಿ ಪರ್ಯಾಯ ಕೃಷಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಭರವಸೆ ಸಹ ಮಾದರಿಯಾಗಿದೆ. ಕೃಷಿ ಕೂಲಿ ಕಾರ್ಮಿಕರ 2 ಕೆಜಿ ಅಕ್ಕಿ, ಅರ್ಧ ಕೆಜಿ ಬೇಳೆ ಕಸಿದುಕೊಂಡಿರುವುದು ಸರಿಯಲ್ಲ.
ಮಾರುತಿ ಮಾನ್ಪಡೆ, ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ
ಹೈ.ಕ ಭಾಗ ಕಡೆಗಣನೆ
ಇದೊಂದು ಹೊಂದಾಣಿಕೆ ಬಜೆಟ್. ಡಿಸೈಲ್, ಪೆಟ್ರೋಲ್, ವಿದ್ಯುತ್ ದರ ಏರಿಕೆ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿ ರೈತರ ಸಾಲ ಮನ್ನಾ ಮಾಡಲಾಗಿದೆ. ಇದು ಪ್ರಗತಿಪರ ಬಜೆಟ್ ಅಲ್ಲ, ಬಹು ಮುಖ್ಯವಾಗಿ ಹೈ.ಕ.ಪ್ರದೇಶ ಸಂಪೂರ್ಣ ಕಡೆಗಣಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಯೋಜನೆ ಇಲ್ಲ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿಲ್ಲ. ಹೈ.ಕ ಭಾಗದ ಖಾಲಿ ಹುದ್ದೆ ಗಳ ಭರ್ತಿ ಕುರಿತಾಗಿ ಯಾವುದೇ ಪ್ರಸ್ತಾಪ ಮಾಡಿಲ್ಲ.
ಬಸವರಾಜ ಕುಮ್ನುರ್, ನಿವೃತ್ತ ಪ್ರಾಚಾರ್ಯರು
ಸಾಲ ಮನ್ನಾ ಐತಿಹಾಸಿಕ
2007ರಲ್ಲೂ ಸಹಕಾರಿ ಸಂಘಗಳಲ್ಲಿನ ಎಲ್ಲ ರೈತರ 25 ಸಾವಿರ ರೂ. ಮನ್ನಾ ಮಾಡಿರುವುದು ಈಗ ಸಹಕಾರಿ ಜತೆಗೆ
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವುದು ಸಾಮಾನ್ಯವಾದುದ್ದಲ್ಲ. ಸಿಎಂ ಕುಮಾರಸ್ವಾಮಿ ಅವರ ಹೆಸರು
ಚರಿತ್ರಾರ್ಹದಲ್ಲಿ ದಾಖಲೆಯಾಗಿ ಮುಂದುವರಿಯಲಿದೆ.
ಬಸವರಾಜ ತಡಕಲ್, ಅಧ್ಯಕ್ಷರು ಜೆಡಿಎಸ್
ಚೀನಾ ವಸ್ತುಗಳಿಗೆ ಕೊಕ್ಕೆ ಚೀನಾ ವಸ್ತುಗಳ ಬಳಕೆಗೆ ವಿರುದ್ಧ ಸಮರದ ಘೋಷಣೆ ಸ್ವಾಗತಾರ್ಹವಾಗಿದೆ. ಅದರಲ್ಲೂ ಸ್ಥಳೀಯವಾಗಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಒಲವು ಹೊಂದಿರುವುದು ಶ್ಲಾಘನೀಯವಾಗಿದೆ. ಆದರೆ ಬರ ಶಾಶ್ವತ ಪರಿಹಾರಕ್ಕೆ ಚಿಂತನೆ ಇಲ್ಲ. ತೊಗರಿ ಸೇರಿ ಯಾವ ಬೆಳೆಗೂ ಪ್ರೋತ್ಸಾಹ ಕಾಣಿಸಿಲ್ಲ. ಎಲ್ಲ ನಗರ ಹಾಗೂ ಜಿಲ್ಲೆಗಳನ್ನು ಏಕರೂಪದಲ್ಲಿ ಕಾಣಬೇಕಿತ್ತು.
ಮಹಾದೇವಯ್ಯ ಕರದಳ್ಳಿ, ಚಿಂತಕರು
ಬೇಳೆ ಕಾರ್ಖಾನೆ ಪುನಶ್ಚೇತನಕ್ಕಿಲ್ಲ ಪ್ಯಾಕೇಜ್
ಕೃಷಿ ಹಾಗೂ ಕೈಗಾರಿಕೆಗೆ ಆಯವ್ಯದಲ್ಲಿ ಒತ್ತು ನೀಡಿರುವುದು, 2 ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಿರುವುದು, ಕಲಬುರಗಿಯಲ್ಲಿ ಸುಪರ ಸ್ಪೇಷಾಲಿಸಿ ಆಸ್ಪತ್ರೆ ಸ್ಥಾಪನೆ, ಕೊಪ್ಪಳದಲ್ಲಿ ವಿನೂತನ ಆಸ್ಪತ್ರೆ, ಆಟಿಕೆಗಳ ತಯಾರಿಕಾ ಕ್ಲಸ್ಟರ್ ಸ್ಥಾಪನೆ, ಬೀದರ್‌ದಲ್ಲಿ ಕೃಷಿ ಉತ್ಪನ್ನ ಸಂರಕ್ಷಣೆ ಘಟಕ ಸ್ಥಾಪನೆ, ಯಾದಗಿರಿ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಬೇಸಾಯ ಕ್ರಮ ಅಳವಡಿಸಿರುವುದು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಬಂಡವಾಳ ಹೂಡಿಕೆಗೆ ಹಣ ಒದಗಿಸುವ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸುವ ಮಧ್ಯಪ್ರದೇಶ ಮಾದರಿಯ ಭಾವಾಂತರ ಯೋಜನೆ ಜಾರಿ, ಜೇವರ್ಗಿ ಫುಡ್ ಪಾರ್ಕ್‌ಗೆ ಅನುದಾನ ನೀಡುವ, ಬೇಳೆ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್, ಎ.ಪಿ.ಎಂ.ಸಿ ಸುಂಕವನ್ನು ಶೇ. 1.5 ರಿಂದ 1ಕ್ಕೆ ಇಳಿಸುವ ಕುರಿತಾಗಿ ಸ್ತಾಪಿಸದಿರುವುದು ನಿರಾಸೆ ತಂದಿದೆ. ಅದೇ ರೀತಿ ತೈಲದ ಮೇಲಿನ ಸುಂಕ ಹೆಚ್ಚಳ ಮಾಡಿರುವುದು, ವಾಹನ ತೆರಿಗೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ ಪ್ರಸ್ತಾಪ ತೀವ್ರವಾಗಿ ವಿರೋಧಿಸುವುದಾಗಿದೆ.
ಅಮರನಾಥ ಸಿ. ಪಾಟೀಲ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಸೋಲಾರ ಉದ್ಯಮಕ್ಕೆ ಪ್ರೋತ್ಸಾಹ
ಕಲಬುರಗಿಯಲ್ಲಿ ಸೋಲಾರ ಉದ್ಯಮಕ್ಕೆ ಸಂಬಂಧಿಸಿದಂತೆ ಅಗತ್ಯ ವಿರುವ ಸೋಲಾರ ಪ್ಯಾನಲ್, ಇನ್ವರ್ಟರ್, ಕೆಪ್ಯಾಸಿಟರ್‌ಗಳನ್ನು ಹಾಗೂ ಲುಮಿನೇಟರ್‌ಗಳನ್ನು ಕಲಬುರಗಿಯಲ್ಲಿಯೇ ಉತ್ಪಾದಿಸುವುದಾಗಿ ಘೋಷಿಸಿರುವುದು ಹಾಗೂ ರೈತರ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹವಾಗಿದೆ. ಉಳಿದಂತೆ ಹೈದ್ರಾಬಾದ್ ಕರ್ನಾಟಕ
ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ.
ಅಭಿಷೇಕ ಬಾಲಾಜಿ, ಕರವೇ ಮುಖಂಡ
ಎಚ್‌ಕೆಡಿಬಿ ಅನುದಾನ ಪ್ರಸ್ತಾಪವಿಲ್ಲ
ಇದು ಜನಪರ ಬಜೆಟ್‌ಯಾಗಿದೆ. ಕಲಬುರಗಿ ಸೋಲಾರ್ ಜಿಲ್ಲೆ, ಯಾದಗಿರಿ ಇಸ್ರೇಲ್ ಮಾದರಿ ಕೃಷಿ, ಕೊಪ್ಪಳ ಆಟಿಕೆ ತಯಾರಿಕೆ ಕ್ಲಸ್ಟರ್ ಹೀಗೆ ಹೈ.ಕ.ಭಾಗಕ್ಕೂ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ಹೈ. ಕ.ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಪ್ರಸ್ತಾಪ ಇಲ್ಲ. ಮೂಲಸೌಲಭ್ಯ ಅಭವೃದ್ಧಿಗೆ ಆದ್ಯತೆ ನೀಡಲಾಗಿದೆ. ಹಿಂದಿನ ಸರ್ಕಾರದ ಬಜೆಟ್‌ನ ಬಹುತೇಕ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ.
ಡಾ| ಸಂಗೀತಾ ಕಟ್ಟಿಮನಿ, ಆರ್ಥಿಕ ತಜ್ಞರು
2018-19ನೇ ಸಾಲಿನ ಪ್ರಮುಖ ಘೋಷಣೆ
ಜಿಲ್ಲೆಯ ನೀರಾವರಿ ಯೋಜನೆಗಳ ಕಾಲುವೆ ಸುಧಾರಣೆಗೆ ಹಣ ನಿಗದಿ
ಕಲಬುರಗಿ ಆಸ್ಪತ್ರೆಗೆ ಪ್ರತ್ಯೇಕಸುಟ್ಟ ಗಾಯಗಳ ಚಿಕಿತ್ಸಾ ವಾರ್ಡ್
ಪ್ರವಾಸೋದ್ಯಮ ಇಲಾಖೆಯಿಂದ ಕಲಾವನ ನಿರ್ಮಾಣ
2017ರ ಮಾರ್ಚ್ 15ರ ಬಜೆಟ್
ಎಚ್‌ಕೆಆರ್‌ಡಿಬಿಗೆ 1500 ಕೋಟಿ ರೂ. ಅನುದಾನ ಕಲಬುರಗಿ ಮಹಾನಗರಕ್ಕೆ ಪೊಲೀಸ್ ಆಯುಕ್ತಾಲಯ ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ
250 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಆಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ
ಕಲ್ಲೂರ-ಘತ್ತರಗಾ ಬ್ಯಾರೇಜ್‌ಗಳಿಗೆ ಅಧುನಿಕ ಗೇಟ್‌ಗಳ ಅಳವಡಿಕೆ
ಗಂಡೋರಿ ನಾಲಾ-ಮುಲ್ಲಾಮಾರಿ ಯೋಜನೆ ಆಧುನಿಕರಣ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಸೌರ ಛಾವಣಿ ಅಳವಡಿಕೆ 10 ಕೋಟಿ ರೂ. ವೆಚ್ಚದಲ್ಲಿ ನೆಪ್ರೋ-ಯುರಾಲಾಜಿ ಘಟಕ
2016 ಮಾರ್ಚ್ 18ರ ಮುಂಗಡ ಪತ್ರ
ಕಲಬುರಗಿ ವಿಮಾನ ನಿಲ್ದಾಣ ಪ್ರಸಕ್ತ ವರ್ಷ ಪೂರ್ಣ
ಕಾಗಿಣಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್
ಚಿಂಚೋಳಿಯಲ್ಲಿ ಆಯುಷಾ ಇಂಟಿಗ್ರೇಟೆಡ್ ಆಸ್ಪತ್ರೆ ಸ್ಥಾಪನೆ
ಪೆರಿಪೆರ್ ಕ್ಯಾನ್ಸರ್ ಆಸ್ಪತ್ರೆ ಮೇಲ್ದರ್ಜೆಗೆ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಸಹ ಮೇಲ್ದರ್ಜೆಗೆ
ಎಚ್‌ಕೆಡಿಬಿಗೆ 1000 ಕೋಟಿ ರೂ. 371ನೇ ವಿಧಿ ಅಡಿ 12000 ಹುದ್ದೆಗಳ ಭರ್ತಿ ಪ್ರಸ್ತಾಪ
2015ರ ಮಾರ್ಚ್ 13ರ ಘೋಷಣೆ
ಕಲಬುರಗಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಲಯ ಕಚೇರಿ ಸ್ಥಾಪನೆ 371ನೇ ಜೆ ವಿಧಿ ಅಡಿಯ ಪ್ರಮಾಣ ಪತ್ರ ವಿತರಣೆಗೆ ಸುಧಾರಣಾ ಕ್ರಮ ವಿಮಾನ ನಿಲ್ದಾಣ ಭಾರತೀಯ ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸುವ ಪ್ರಸ್ತಾಪ ದೇವಲಗಾಣಗಾಪುರ ಸಮಗ್ರ ಅಭಿವೃದ್ಧಿಗೆ ಕ್ರಮ
ಮಲ್ಲಾಬಾದ ಏತ ನೀರಾವರಿ ಯೋಜನಾ ಕಾಮಗಾರಿ ವೇಗಗೊಳಿಸುವುದು
ಕಲಬುರಗಿಗೆ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ
ತೊಗರಿ, ಜೋಳ ಸಂಶೋಧನೆಗೆ ಒತು
2014-15ನೇ ಸಾಲಿನ ಪ್ರಮುಖ ಘೋಷಣೆ
ಕಲಬುರ್ಗಿಯಲ್ಲಿ ಸರ್ಕಾರಿ ಔಷಧ ಮಹಾವಿದ್ಯಾಲಯ ಸ್ಥಾಪನೆ
ಕಲಬುರಗಿ ಮಹಾನಗರದ ನೀರು ಸರಬರಾಜು ಉನ್ನತೀಕರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.