ಸ್ಮಶಾನ ಮೌನ
Team Udayavani, Mar 26, 2019, 2:33 PM IST
ಧಾರವಾಡ: ಹೊಸ ಬಸ್ ನಿಲ್ದಾಣದಿಂದ ಬೆಳಗಾವಿಯತ್ತ ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಕಣ್ಣಿಗೆ ದೊಡ್ಡದಾಗಿ ರಾರಾಜಿಸುತ್ತಿದ್ದ ದೈತ್ಯ ಕಟ್ಟಡ ಇದೀಗ ಅವಶೇಷಗಳಾಗಿ ಬಿದ್ದಿದ್ದು, ಸಾವು, ನೋವು, ಹಾನಿ, ದುಃಖ, ವಿಷಾದದಲ್ಲಿಯೇ ಈ ಕಟ್ಟಡದ ಕಥೆ ಮುಗಿದು ಹೋಗಿದಂತಾಗಿದೆ.
ಸಾವಿರಾರು ಜನರಿಗೆ ಮೂರು ವರ್ಷ ಉದ್ಯೋಗ ಕೊಟ್ಟ ಈ ಕಟ್ಟಡ ಯಾರೋ ಮಾಡಿದ ತಪ್ಪಿಗೆ 19 ಜನರನ್ನು ಬಲಿ ಪಡೆದುಕೊಂಡು ಧಾರಾನಗರಿಯ ಜನರಿಂದ ವಿಲನ್ ಎನಿಸಿಕೊಂಡಿತು. ಸುಂದರ ವಿನ್ಯಾಸ, ಒಳ್ಳೆಯ ವಸ್ತುಗಳ ಬಳಕೆಯಲ್ಲಿಯೇ ಕಟ್ಟಡ ನಿರ್ಮಾಣಗೊಂಡಿದ್ದರೂ, ಪಿಲ್ಲರ್‌ಗಳ
ಶಕ್ತಿಯನ್ನು ಹೆಚ್ಚಿಸಲು ಹೋಗಿ ಆಗಿರುವ ಎಡವಟ್ಟಿನಿಂದಾಗಿ ಕಟ್ಟಡ ತಿರುಗಿ ಬಿದ್ದು, ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿ ಒಗೆದಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದವರನ್ನೇ ಆಹುತಿ ಪಡೆದು ಅವಶೇಷವಾಗಿ ಹೋಗಿದೆ.
ಹಣ ಹಾಕಿದವನಿಗೆ ಅಯ್ಯೋ ಏನು ಮಾಡುವುದು ಎನ್ನುವ ಪ್ರಶ್ನೆಯಾದರೆ, ಕುಟುಂಬಕ್ಕೆ ಆಧಾರವಾಗಿದ್ದವನನ್ನು ಕಳೆದುಕೊಂಡವನ ದುಃಖದ ಕಣ್ಣೀರು ಒರೆಸುವವರು ಯಾರು? ನಾಲ್ಕು ದಿನ ಮುಖ್ಯಮಂತ್ರಿ, ಮಂತ್ರಿ, ಅಧಿಕಾರಿಗಳು ಎಲ್ಲರೂ ಬಂದು ಹೋದರು, ಫೋಟೋಗಳಿಗೆ ಫೋಸು ಕೊಟ್ಟರು. ಹೃದಯವಂತರು ಹೃದಯ ಮಿಡಿದು ಸಹಾಯಕ್ಕೆ ನಿಂತರು.
ಇದೀಗ ಯಾರೂ ಇಲ್ಲ. ಇಲ್ಲಿ ನೀರವ ಮೌನವೊಂದೇ ಆವರಿಸಿಕೊಂಡಿದೆ. ಈ ಸ್ಥಳವೆಲ್ಲ ಸ್ಮಶಾನದ ಕುರುಹಿನಂತೆ ಕಾಣುತ್ತಿದೆ. ಏಳು ದಿನಗಳಿಂದ ಹಗಲು-ರಾತ್ರಿ ಜೆಸಿಬಿಗಳ ಅಬ್ಬರ, ಪ್ರಕಾಶಮಾನವಾದ ಬೆಳಕು, ಜನರ ಕೂಗಾಟ, ಅವಶೇಷಗಳಡಿ ಸಿಲುಕಿದವರ ಕುಟುಂಬಸ್ಥರ ಆಕ್ರಂದನ, ಸತ್ತವರ ಮನೆಯವರ ಚೀರಾಟ, ಗೋಳಾಟ. ಸದ್ಯಕ್ಕೆ ಎಲ್ಲದಕ್ಕೂ ಕೊನೆ ಬಿದ್ದಿದೆ. ಸೋಮವಾರ ಮಧ್ಯಾಹ್ನ ಕಾರ್ಯಾಚರಣೆ ಮುಗಿಯುತ್ತಿದ್ದಂತೆಯೇ ವರುಣದೇವ ಆಗಮಿಸಿ ಎಲ್ಲವನ್ನೂ ಸ್ವತ್ಛಗೊಳಿಸಿದ.
ಜೆಸಿಬಿಗೆ ಜೀವವಿದ್ದರೆ ಕಣ್ಣೀರು ಹಾಕುತ್ತಿದ್ದವು! ಏ ಇರಪ್ಪ ಅಲ್ಲೇನೋ ಕಾಣಿಸ್ತಿದೆ, ನನ್ನ ಸೊಂಡಿಲಿನಿಂದ ಅದನ್ನ ಎಳೆದು ನೋಡ್ತೇನೆ, ಅತ್ತ ಯಾಕೆ ತಳ್ಳತಿಯಾ ಇಲ್ಲಿ ಬಾ..ಈ ಕಡೆಗೆ ಅವನು ಇನ್ನು ಜೀವಂತ ಇದ್ದಾನೆ ನೋಡು… ನೀವು ಅತ್ತ ಕೆದರಿ ನಾನು ಇತ್ತ ಕೆದರುತ್ತೇನೆ…, ದೈತ್ಯ ಜೆಸಿಬಿಗಳು ಮಾತನಾಡಿಕೊಳ್ಳುತ್ತಲೇ ಕಾರ್ಯಾಚರಣೆ ನಡೆಸುತ್ತಿವೆಯೇನೋ ಎನ್ನುವ ಭಾವ ಬರುವಂತಿತ್ತು ಕಟ್ಟಡ ಕುಸಿದ ಸ್ಥಳದಲ್ಲಿ. ಸತತ ಏಳು ದಿನಗಳ ಕಾಲ ಈ ಜೆಸಿಬಿಗಳು ಏನನ್ನು ನೋಡಿಲ್ಲ. ರಕ್ತಸಿಕ್ತವಾಗಿ ಕಟ್ಟಡದ ಬುಡದಲ್ಲಿ ಸಿಲುಕಿದವರಿಂದ ಹಿಡಿದು ಬದುಕಿದೆಯಾ ಬಡ ಜೀವವೇ ಎಂದು ಜೀವಂತವಾಗಿ ಎದ್ದು ಬಂದವರವರೆಗೂ ಎಲ್ಲರ ಕಷ್ಟ-ನಷ್ಟಗಳನ್ನು ನೋಡಿ ಮರುಗಿದವಂತೆ. ಬಹುಶಃ ನಮ್ಮ ಜೆಸಿಬಿಗಳಿಗೆ ಜೀವ ಇದ್ದಿದ್ದರೆ ಇವು ಕೂಡ ಕಣ್ಣೀರು ಹಾಕುತ್ತಿದ್ದವು ಎಂದು ದುರಂತ ಸ್ಥಳದಲ್ಲಿನ ಕಾರ್ಯಾಚರಣೆ ಬಗ್ಗೆ ವಿವರಿಸುತ್ತಾರೆ ಜೆಸಿಬಿ ಡ್ರೈವರ್ ಮಂಜುನಾಥ.
ಧಾರವಾಡ ಇತಿಹಾಸದಲ್ಲಿಯೇ ದೊಡ್ಡ ದುರಂತ ಕಟ್ಟಡ ದುರಂತ ಇಡೀ ಧಾರಾನಗರಿಯನ್ನೇ ತಲ್ಲಣಗೊಳಿಸಿದ್ದು ಸತ್ಯ. 1989ರಲ್ಲಿ ಲೈನ್‌ಬಜಾರ್ ನಲ್ಲಿ ಮಳೆಗಾಲದಲ್ಲಿ ಹಳೆಯ ಅಂಗಡಿಯೊಂದು ಕುಸಿದುಬಿದ್ದು ಇಬ್ಬರು ಸಾವನ್ನಪ್ಪಿ, ಹತ್ತು ಜನರು ಗಾಯಗೊಂಡಿದ್ದರು. ಅದನ್ನು ಬಿಟ್ಟರೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿ ಮಳಿಗೆಗಳಲ್ಲಿ ನಡೆದ ದುರಂತಗಳಿಗೆ ಉದಾಹರಣೆ ಕೂಡ ಇಲ್ಲ. ಇದೀಗ ಬರೋಬ್ಬರಿ 19 ಜನರನ್ನು ಒಂದೇ ಕಟ್ಟಡ ಬಲಿ ಪಡೆದುಕೊಂಡಿದ್ದನ್ನು ನೋಡಿ ಜನರು ಆತಂಕಗೊಂಡಿದ್ದಾರೆ.
ಕಿಲ್ಲರ್ ಕಟ್ಟಡದ ಜೊತೆ ಜೊತೆಯಲ್ಲೇ ನಗರದ ಆಯಕಟ್ಟಿನ ಪ್ರದೇಶದಲ್ಲಿ ಇನ್ನಷ್ಟು ವಾಣಿಜ್ಯ ಮಳಿಗೆಗಳು ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳು ಹುಟ್ಟಿಕೊಂಡಿವೆ. ಇದೀಗ ಅವುಗಳಲ್ಲಿ ಮನೆ ಮತ್ತು ಮಳಿಗೆ ಕೊಳ್ಳುವುದಕ್ಕೆ ಜನ ಹಿಂದೇಟು ಹಾಕುವಂತಾಗಿದೆ. ಜಯನಗರ, ಶ್ರೀನಗರ, ಹೊಸ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತ, ಕಲ್ಯಾಣ ನಗರ, ಶಿವಗಿರಿ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹುದೇ ಮಾದರಿಯ ದೈತ್ಯ ಕಟ್ಟಡಗಳು ತಲೆ ಎತ್ತುತ್ತಿದ್ದು, ಕಟ್ಟಡ ಮಾಲೀಕರು ಮತ್ತು ಎಂಜಿನಿಯರ್‌ಗಳು ಈ ದುರಂತದಿಂದ ಪಾಠ ಕಲಿಯಬೇಕಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
17 ಜನರನ್ನು ಉಳಿಸಿದ ತ್ರಿಮೂರ್ತಿಗಳು ಮೊದಲ ದಿನದ ಗೋಲ್ಡನ್ ಅವರ್‌ನಲ್ಲಿಯೇ ಧಾರವಾಡದ ಮೂವರು ಯುವಕರು 17 ಜನರನ್ನು ರಕ್ಷಣೆ ಮಾಡಿದ್ದಾರೆ. ಧಾರವಾಡದ ಬಸವರಾಜ ಜಾಧವ, ಸದ್ದಾಂ ತಹಶೀಲ್ದಾರ್ ಮತ್ತು ಕಿರಣ ಕಣವಿ ಒಂದೇ ಸಮಯಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ಕುಸಿದ ಕಟ್ಟಡದ ಪ್ಯಾಸೇಜ್ ಒಳಗಡೆ ನುಗ್ಗಿ, ಕಿಂಡಿಯೊಂದನ್ನು ಕೊರೆದುಕೊಂಡು ಅಲ್ಲಿಂದಲೇ 17 ಜನರನ್ನು ಪಾರು ಮಾಡಿದ್ದರು. ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯದಲ್ಲಿದ್ದ ಸಿಬ್ಬಂದಿ ಸಹ ಅವರನ್ನು ಅಭಿನಂದಿಸಿದ್ದಾರೆ.
ಮಾನವೀಯತೆ ಸ್ಪಂದನೆ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆದಿದ್ದು ಎಷ್ಟು ಸತ್ಯವೋ, ಅವರಿಗೆ ಪೂರಕವಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದು ಅಷ್ಟೇ ಸತ್ಯ. ಕಟ್ಟಡ ಕುಸಿತದಲ್ಲಿ ಸಿಲುಕಿದವರ ರಕ್ಷಣೆಗೆ ನಿಂತವರಿಗೆ ಅನ್ನ, ಆಹಾರ, ಹಣ್ಣು, ಮಜ್ಜಿಗೆ, ನೀರನ್ನು ತಂದು ಕೊಟ್ಟವರು ಸಾರ್ವಜನಿಕರು. ಅವರು ತೋರಿದ ಮಾನವೀಯತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕಾಗಿ ನಡೆಯಿತು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಪ್ರತಿದಿನ ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಿ ನೆರವಿನ ಹಸ್ತ ಚಾಚಿತು.
132 ಗಂಟೆ ಕಾರ್ಯಾಚರಣೆ
ಮಾ.19ರಂದು ಸಂಜೆಯಿಂದಲೇ ಆರಂಭಗೊಂಡು 132 ಗಂಟೆ ಕಾಲ ಜರುಗಿದ ರಕ್ಷಣಾ ಕಾರ್ಯಾಚರಣೆ ಕೂಡ ಅತೀ ದೀರ್ಘ ಸಮಯದ ಕಾರ್ಯಾಚರಣೆಯಾಗಿದೆ. ಇಡೀ ರಾಜ್ಯದಲ್ಲಿ 1980ರ ದಶಕದಲ್ಲಿ ಬೆಂಗಳೂರಿನ ಗಂಗಾರಾಮ ಕಟ್ಟಡ ದುರಂತ ಸಂಭವಿಸಿದ್ದನ್ನು ಬಿಟ್ಟರೆ, ಈ ರೀತಿ ಕಟ್ಟಡ ದುರಂತ ಮತ್ತೆಲ್ಲಿಯೂ ಸಂಭವಿಸಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್ ಎಫ್ ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ತೋರಿದ ಧೈರ್ಯ ಮತ್ತು ಸತತ ಕಾರ್ಯಾಚರಣೆ ಪರಿಣಾಮ 57 ಜನರು ರಕ್ಷಣೆಯಾಗಿದ್ದಾರೆ. ಅಷ್ಟೇಯಲ್ಲ, ಕಟ್ಟಡ ಬೀಳುತ್ತಿದ್ದಂತೆಯೇ ಸಾರ್ವಜನಿಕರು ಮಾಡಿದ ಕೆಲಸವನ್ನು ಇಡೀ ನಗರವೇ ಕೊಂಡಾಡುತ್ತಿದೆ. ಕಟ್ಟಡ ಕುಸಿದ ನಂತರ ಮೊದಲ ಮೂರು ತಾಸಿನ ಚಿನ್ನದ ಸಮಯ (ಗೋಲ್ಡನ್ ಅವರ್)ದಲ್ಲಿಯೇ 37ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಯಿತು. ಇದಕ್ಕೆ
ಸಾರ್ವಜನಿಕರು ತೋರಿದ ಸಹಕಾರವೇ ಕಾರಣ ಎನ್ನುತ್ತಿದ್ದಾರೆ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ.
ಥೂ.. ಇಲ್ಲೂ ರಾಜಕೀಯವೇ
ಕಟ್ಟಡ ಕುಸಿತ ದುರಂತ ಕೈ-ಕಮಲ ಪಡೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೂ ವೇದಿಕೆಯಾಗಿದ್ದು
ದುರ್ದೈವ. ಕಟ್ಟಡದ ಪಾಲುದಾರರಲ್ಲಿ ನಾಲ್ಕು ಜನರು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.
ಗಂಗಾಧರ್ ಶಿಂತ್ರಿ, ಬಸವರಾಜ ನಿಗದಿ, ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಈ ಎಲ್ಲರೂ ಸವದತ್ತಿ ಮೂಲದವರು ಮತ್ತು ಎಲ್ಲರೂ ಬಿಜೆಪಿ ಪಕ್ಷದ ಕಟ್ಟಾಳುಗಳು. ಆದರೆ, ಗಂಗಾಧರ್ ಶಿಂತ್ರಿ ಅವರು
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾವ. ಇನ್ನು ಸಂಸದ ಪ್ರಹ್ಲಾದ ಜೋಶಿ ಸಂಬಂಧಿ ಮುಕುಂದ ಜೋಶಿ ಕಟ್ಟಡಕ್ಕೆ ಸಿಸಿ ಪರವಾನಗಿ ಕೊಟ್ಟವರು. ಈ ವಿಚಾರವನ್ನು ಬಿಜೆಪಿಯೇ ಮೊದಲು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಯಿತು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿತು. ಒಟ್ಟಿನಲ್ಲಿ ಕಟ್ಟಡ ದುರಂತದಲ್ಲಿ ಕೈ-ಕಮಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದರೂ ಹೆಚ್ಚು ಫಲಕಾರಿಯಾಗಲಿಲ್ಲ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.