ಬುಡಕಟ್ಟು ಜನಾಂಗದ ವೀರತನ ಸ್ಮರಣೀಯ: ಶಾಂತಾರಾಮ
Team Udayavani, Sep 10, 2022, 1:56 PM IST
ಕಲಬುರಗಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಧೀಜಿ ಅವರ ಅಹಿಂಸೆಯ ಹೋರಾಟದ ಜತೆಗೆ ಬುಡಕಟ್ಟು ಸಮುದಾಯ ವೀರತನ, ಶೂರತನವೂ ಇದೆ. ಆದರೆ ಇದು ಇತಿಹಾಸದಲ್ಲಿ ಮರೆಯಾಗಿದ್ದು ದುರ್ದೈವ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವನವಾಸಿ ಕಲ್ಯಾಣ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ಸಿದ್ದಿ ಹೇಳಿದರು.
ನವದೆಹಲಿಯ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಆಶ್ರಯದಡಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಅಖೀಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸಹಯೋಗದೊಂದಿಗೆ ಶುಕ್ರವಾರ ವಿ.ವಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ವೀರರು’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಲಭಿಸಿದ ಸ್ವಾತಂತ್ರ್ಯ ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಡು, ನುಡಿ, ಜಲ, ಗಡಿ ವಿವಾದ, ಜಾತಿಯತೆ ಮರೆತು ಸ್ವಾತಂತ್ರ್ಯ ಉಳಿವಿಗೆ ಒಗ್ಗಟ್ಟಿನ ಅವಶ್ಯಕತೆಯಿದೆ. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಯುವಕರು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
1857 ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳುತ್ತೆವೆ. ಆದರೆ ಬಿಹಾರದ “ತಿಲಕ್ ಮಾಂಜಿ’ ಎನ್ನುವ ಬುಡಕಟ್ಟು ಸಮುದಾಯದ ಯುವಕ 1750ರಲ್ಲಿಯೇ ಬುಡಕಟ್ಟು ಜನರ ಮೇಲೆ ಬ್ರಿಟಿಷರ ದಬ್ಟಾಳಿಕೆ ಸಹಿಸದೆ ಆಂಗ್ಲ ಅಧಿಕಾರಿಯನ್ನು ತನ್ನ ಬಿಲ್ಲಿನಿಂದ ಕೊಲ್ಲುವ ಮೂಲಕ ತೊಡೆತಟ್ಟಿದ್ದ. ರಾಮಾಯಣ-ಮಹಾಭಾರತದ ಕಥಾ ರೂಪಕದ ಪ್ರತಿ ಹಂತದಲ್ಲಿಯೂ ವನವಾಸಿ ಸಮುದಾಯ ಕಾಣುತ್ತದೆ. ರಾಮಾಯಣ ಬರೆದ ವಾಲ್ಮೀಕಿಯೂ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದರು.
ದೇಶದಲ್ಲಿ ಸುಮಾರು 11ಕೋಟಿ ಬುಡಕಟ್ಟು ಜನಾಂಗವಿದೆ. ನಾಗಲ್ಯಾಂಡ, ಅರುಣಾಚಲ ಪ್ರದೇಶ, ಮಿಜೋರಾಂನಂತ ರಾಜ್ಯಗಳಲ್ಲಿ ಆದಿವಾಸಿ ಜನರೇ ಹೆಚ್ಚಾಗಿ ಕಾಣಸಿಗುತ್ತಾರೆ. ಇವರು ಕನಿಷ್ಟ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 51ಪ್ರಕಾರದ ಬುಡಕಟ್ಟು ಸಮುದಾಯದವರು ವಾಸಿಸುತ್ತಿದ್ದಾರೆ. ಉಡುಪಿಯಲ್ಲಿನ ಕೊರಗ ಸಮುದಾಯ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಜೇನು ಕುರುಬ ವನವಾಸಿ ಸಮುದಾಯಕ್ಕೆ ಈಗಲೂ ಸುರಕ್ಷತೆಯ ಮನೆಗಳಿಲ್ಲ. ಒಂದೆರಡು ಸಾವಿರ ರೂ.ಗಳ ಪ್ಲಾಸ್ಟಿಕ್ ಟಾರ್ಪಲಿನ್ ಹೊದಿಕೆಯೊಂದಿಗೆ ಸೂರು ನಿರ್ಮಿಸಿಕೊಂಡಿದ್ದಾರೆ. ಇಂತಹ ಕಷ್ಟದ ಜೀವನ ವನವಾಸಿಗಳದ್ದಾಗಿದ್ದು, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ “ಅಮೃತ ಮಹೋತ್ಸವ’ದ ಈ ಸಂದರ್ಭದಲ್ಲಿ 100 ವಿಶ್ವವಿದ್ಯಾಲಯಗಳಲ್ಲಿ ಯುವ ಪೀಳಿಗೆಯ ಅರಿವಿಗೆ ಸ್ವಾತಂತ್ರ್ಯ ಹೋರಾಟದಲ್ಲಿ “ಬುಡಕಟ್ಟು ಜನಾಂಗದ ಪಾತ್ರ’ದ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಿದ್ದು ಔಚಿತ್ಯಪೂರ್ಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಸಲಹೆಗಾರ ರಾಘವ ಮಿತ್ತಲ್ ಅವರು, ರಾಷ್ಟ್ರೀಯ ಆಯೋಗದ ಅಧಿಕಾರ ಮತ್ತು ವ್ಯಾಪ್ತಿ ಕುರಿತು ವಿವರಿಸಿದರು.
ಶೈಕ್ಷಣಿಕ ಸಂಯೋಜಕ ಪ್ರೊ|ಗೂರು ಶ್ರೀರಾಮುಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ದಯಾನಂದ ಅಗಸರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ್, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ|ಟಿ. ಶಂಕರಪ್ಪ, ಕುಲಸಚಿವ ಪ್ರೊ|ವಿ.ಟಿ.ಕಾಂಬಳೆ, ಮುಖ್ಯ ಸಂಯೋಜಕ ಪ್ರೊ|ಚಂದ್ರಕಾಂತ ಆರ್. ಕೆಳಮನಿ, ಆಡಳಿತ ಸಂಯೋಜಕ ಪ್ರೊ| ಬಸವರಾಜ ಸಣ್ಣಕ್ಕಿ ಇದ್ದರು. ದೈಹಿಕ ಶಿಕ್ಷಣ ವಿಭಾಗದ ನಿಂಗಣ್ಣ ಕಣ್ಣೂರು ಸ್ವಾಗತಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಜೀವದ ಹಂಗು ತೊರೆದು ಹೋರಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬುಡಕಟ್ಟು ವೀರರ ಕುರಿತ ವಿಡಿಯೋ ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.