ರೈಲು ನಿಲ್ದಾಣ ಮುತ್ತಿಗೆಗೆ ಯತ್ನ
Team Udayavani, Jan 10, 2019, 9:00 AM IST
ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮತ್ತು ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ನಡೆದ ಎರಡು ದಿನಗಳ ಮುಷ್ಕರ ಬುಧವಾರ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಎರಡನೇ ದಿನ ಕಾರ್ಮಿಕರ ಪ್ರತಿಭಟನೆಗೆ ಮಾತ್ರವೇ ಮುಷ್ಕರ ಸೀಮಿತವಾಗಿತ್ತು.
ಮುಷ್ಕರದ ಹಿನ್ನೆಲೆಯಲ್ಲಿ ರೈಲ್ವೆ ಖಾಸಗೀಕರಣ ವಿರೋಧಿಸಿ ಹಾಗೂ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಒತ್ತಾಯಿಸಿ ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.
ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಅಂಗನವಾಡಿ, ಬಿಸಿಯೂಟ ಕಾಯಕರ್ತೆಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ರೈಲ್ವೆ ನಿಲ್ದಾಣದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹಾಗೂ ಹಿರಿಯ ಮುಖಂಡರಾದ ಮೌಲ್ಲಾ ಮುಲ್ಲಾ, ಅಶೋಕ ಮ್ಯಾಕೇರಿ, ಪ್ರಭುದೇವ ಯಳಸಂಗಿ, ಗೌರಮ್ಮ ಪಾಟೀಲ ಮುಂತಾದವರ ನೇತೃತ್ವದಲ್ಲಿ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ರೈಲು ತಡೆ ನಡೆಸಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು.
ಪ್ರತಿಭಟನಾಕಾರರನ್ನು ನಿಲ್ದಾಣದ ಹೊರಗಡೆಯೇ ಪೊಲೀಸರು ತಡೆದು ನಿಲ್ಲಿಸಿದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಲ್ಲದೇ, ‘ಪ್ರತಿಭಟನೆ ನಮ್ಮ ಹಕ್ಕು, ರೈಲು ತಡೆಯಲು ಬಿಡಿ’ ಹೇಳಿ ಮುಖಂಡರು ರೊಚ್ಚಿಗೆದ್ದರು. ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಲ್ಲದೇ ಪ್ರತಿಭಟನಾಕಾರರು ನೂಕ್ಕುನುಗ್ಗಲು ನಡೆಸಿದರು. ಈ ವೇಳೆ ಮತ್ತಷ್ಟು ನೂಕಾಟ, ತಳ್ಳಾಟ ಉಂಟಾಯಿತು. ಭದ್ರತೆಗೆ ನಿಯೋಜನೆಗೊಂಡಿದ್ದ ಕೆಎಸ್‌ಆರ್‌ಪಿ ಹಾಗೂ ರೈಲ್ವೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸಿದರು. ಇದರಿಂದ ಮಹಿಳೆಯರು ಸೇರಿದಂತೆ ಕೆಲವರು ನೆಲಕ್ಕೆ ಬಿದ್ದರು. ಆಗ ಪರಿಸ್ಥಿತಿ ಕೈಮೀರುವುದನ್ನರಿತ ಪೊಲೀಸರು ಮಾರುತಿ ಮಾನ್ಪಡೆ, ಮೌಲ್ಲಾ ಮುಲ್ಲಾ, ಅಶೋಕ ಮ್ಯಾಕೇರಿ ಸೇರಿದಂತೆ ಐದಾರು ಜನ ಮುಖಂಡರನ್ನು ಬಂಧಿಸಿ ಪೊಲೀಸ್ ವಾಹನಕ್ಕೆ ಹತ್ತಿಸಿದರು.
ಬಂಧನಕ್ಕೆ ಮಹಿಳೆಯರ ಪ್ರತಿರೋಧ: ಮುಖಂಡರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಮಹಿಳೆಯರು ತೀವ್ರ ಪ್ರತಿರೋಧ ತೋರಿದರು. ಮುಖಂಡರಿದ್ದ ಕೆಎಸ್‌ಆರ್‌ಪಿ ವಾಹನಕ್ಕೆ ಅಡ್ಡಲಾಗಿ ನಿಂತು ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆದರೆ, ಯಾವುದಕ್ಕೂ ಜಗ್ಗದ ಪೊಲೀಸರು ಮುಖಂಡರನ್ನು ಸ್ಥಳದಿಂದ ಕರೆಕೊಂಡು ಹೋದರು.
ಮಾನವ ಸರಪಳಿ, ರಸ್ತೆ ತಡೆ: ಹಕ್ಕು ಬದ್ಧವಾಗಿ ಪ್ರತಿಭಟಿಸುತ್ತಿದ್ದ ಮುಖಂಡರನ್ನು ಒತ್ತಾಯಪೂರ್ವವಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು. ರೈಲ್ವೆ ನಿಲ್ದಾಣದ ಎದುರು ಕೆಲ ಹೊತ್ತು ಪೊಲೀಸರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತದನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಹಳೆ ಜೇವರ್ಗಿ ರಸ್ತೆ, ಜಿಲ್ಲಾಧಿಕಾರಿ, ಪಿಡಿಎ ಕಾಲೇಜು ಮತ್ತು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಯಿತು. ಎಂದಿನಂತೆ ಸಾಗಿದ ಜನಜೀವನ: ಮುಷ್ಕರ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ, ಸಾರಿಗೆ ಬಸ್ ಸಂಚಾರ ಸ್ಥಗಿತ ಹಾಗೂ ಹಲವು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ಮುಷ್ಕರದ ಬಿಸಿ ತಟ್ಟಿತ್ತು. ಆದರೆ, ಬುಧವಾರ ದಿನ ಶಾಲಾ-ಕಾಲೇಜುಗಳು, ಬಸ್ ಸಂಚಾರ ಆರಂಭವಾಗಿದ್ದರಿಂದ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.
ಹಾಡಿನಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿ: ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಕೈಗೊಂಡು, ಧರಣಿ ಸ್ಥಳದಲ್ಲೇ ರಾತ್ರಿ ಊಟ ಹಾಗೂ ಬೆಳಗ್ಗೆ ಉಪಹಾರ ತಯಾರಿಸಿ ಸೇವಿಸಿದರು. ಜತೆಗೆ ಪ್ರತಿಭಟನಾನಿತರು ಮಹಿಳೆಯರು ಜಾನಪದ ಹಾಡು ಹಾಗೂ ಲಂಬಾಣಿ ನೃತ್ಯ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಹಾಡಿನಲ್ಲೂ ಮೋದಿ ಸರ್ಕಾರ ವಿರುದ್ಧ ಪದಗಟ್ಟುಗಳನ್ನು ಕಟ್ಟಿ ಹಾಡಿ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.