ವಿವೇಕ ಸಂದೇಶ ಪಾಲಿಸಿ: ಶರಣಪ್ರಕಾಶ
Team Udayavani, Jan 13, 2018, 10:20 AM IST
ಕಲಬುರಗಿ: ಯುವ ಜನಾಂಗ ತಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರು ತಿಳಿಸಿರುವ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ರಾಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನಾಚರಣೆ ಮತ್ತು ಯುವ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ಮುಖ್ಯ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಛಲ ಸಾಧಿಸಬೇಕು. ಬೇರೆಯವರೊಂದಿಗೆ ಅನ್ಯೋನ್ಯತೆ,
ಗೌರವದಿಂದ ನಡೆದುಕೊಂಡು ಸಾಮರಸ್ಯದ ಜೀವನ ಸಾಗಿಸಬೇಕು ಎಂದರು.
ಸ್ವಾಮಿ ವಿವೇಕಾನಂದರ ಆದರ್ಶಗಳು ಹಾಗೂ ಅವರ ಸಂದೇಶ ಇಡೀ ಮಾನವ ಕುಲಕ್ಕೆ ಮಾದರಿಯಾಗಿವೆ. ಯುವ ಜನಾಂಗ ಅವುಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ನಾಗರಿಕರಾಗಿ ಬಾಳಬೇಕು. ಹುಟ್ಟಿನಿಂದಲೇ ಯಾರೂ ಮಹಾನ್ ವ್ಯಕ್ತಿಗಳಾಗಿ ಹುಟ್ಟುವುದಿಲ್ಲ. ಜೀವನದಲ್ಲಿನ ಅನುಭವ ಮತ್ತು ಮಹಾನ್ ಪುರುಷರ ಮಾರ್ಗದರ್ಶನದಿಂದ ಮಹಾನ್ ವ್ಯಕ್ತಿಗಳಾಗಲು ಸಾಧ್ಯ. ಸ್ವಾಮಿ ವಿವೇಕಾನಂದರು ತಮ್ಮ ಜೀವನ ಪರ್ಯಂತ ಅನೇಕ ಸಂದೇಶಗಳನ್ನು ನೀಡಿ
ರಾಜಮಾರ್ಗ, ಮೈ ಮೆಜೆಸ್ಟಿ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳನ್ನು ಓದಬೇಕು ಎಂದರು.
ಮಾನವನ ಉದ್ಧಾರಕ್ಕಾಗಿ ಧರ್ಮ ಸ್ಥಾಪನೆಯಾಗಿದೆ. ಜೀವನದಲ್ಲಿ ಸರಿಯಾದ ಮಾರ್ಗದ ಮೇಲೆ ನಡೆಯುವ ಸಂಕಲ್ಪ ಮಾಡಬೇಕು. ಸ್ವಾಭಿಮಾನ, ನೆಮ್ಮದಿ, ಸುಖ, ಶಾಂತಿ ತರಲು ವಿವೇಕಾನಂದ ಅವರಂತಹ ಮಹಾನ್
ವ್ಯಕ್ತಿಗಳ ಜೀವನ ಚರಿತ್ರೆ ಅರಿಯಬೇಕು. ಎಲ್ಲರೂ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್ ಮಾತನಾಡಿ, ದೇಶದಲ್ಲಿರುವ ಸ್ವಾಮಿ ವಿವೇಕಾನಂದರ ಮತ್ತು ರಾಮಕೃಷ್ಣ ಆಶ್ರಮಗಳು ಮಾನವೀಯ ಮೌಲ್ಯಗಳನ್ನು ತಿಳಿಸುತ್ತವೆ. ಸ್ವಾಮಿ ವಿವೇಕಾನಂದರು ಯುವ ಶಕ್ತಿಯ ಮೇಲೆ ಅಪಾರ ಆಶಯ ಹೊಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಯುವ ಸಪ್ತಾಹದಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ರಾಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದಜಿ ಮಹಾರಾಜ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ| ಸಿ.ಪಿ. ಬಹ್ಮನಪಾಡ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ನಾಡಿಗೇರ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.