ಚಿಂಚೋಳಿ: ತಾಲೂಕಿನ ಕೊಟಗಾ ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಕಾಮಗಾರಿ ಕಳಪೆಮಟ್ಟದ್ದಾಗಿದೆ ಎಂದು ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಎಂಜಿನಿಯರ್‌ನ್ನು ತರಾಟೆ ತೆಗೆದುಕೊಂಡರು.
17ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಕಟ್ಟಡದ ಗೋಡೆ, ಲಿಂಟಲ್, ಛತ್ತು ಮತ್ತು ಕಾಲಂಗಳು ಅವೈಜ್ಞಾನಿಕವಾಗಿವೆ. ಈ ಕುರಿತು ತಾವು 2018ರಲ್ಲಿ ಶಾಸಕರಾಗಿದ್ದಾಗಲೇ ತಿಳಿಸಿದ್ದೆವು ಎಂದು ಸಂಸದರು ಕಿಡಿಕಾರಿದರು.
ಕಟ್ಟಡ ಕಾಮಗಾರಿಯಲ್ಲಿ ಸಿಮೆಂಟ್, ಕಬ್ಬಿಣ, ಉಸುಕು ಬಳಕೆ, ದಿನನಿತ್ಯ ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ. ಕಾಮಗಾರಿಯಲ್ಲಿ ಹಣ ಲೂಟಿ ಮಾಡುವ ಉದ್ದೇಶವಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಕೊಟಗಾ ಗ್ರಾಮಸ್ಥರು, ಕಾಮಗಾರಿ ಕಳಪೆಯಾದ ಕುರಿತು ಹೇಳಿದರೇ ಗುತ್ತಿಗೆದಾರರು ನಮಗೆ ಬೆದರಿಸುತ್ತಾರೆ. ಕಾಲಂಗಳು ಓರೆಯಾಗಿದ್ದಾಗ ಜೆಸಿಬಿ ಯಂತ್ರದ ಮೂಲಕ ನೇರವಾಗಿ ಮಾಡಿದ್ದಾರೆ ಎಂದು ದೂರಿದರು.
ಸಂಸದರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕರಿಗೆ ಹಾಗೂ ಕ್ರೈಸ್ ಎಸ್.ಇ ಅವರಿಗೆ ಕರೆ ಮಾಡಿ ಕಾಮಗಾರಿ ಕಳಪೆಮಟ್ಟದಿಂದ ನಡೆಯುತ್ತಿದೆ. ಕೂಡಲೇ ಕೆಲಸ ನಿಲ್ಲಿಸಬೇಕು. ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಸೂಚಿಸಿದರು. ರಮೇಶ ಪಡಶೆಟ್ಟಿ ಐನಾಪುರ ಹಾಗೂ ಇನ್ನಿತರರು ಈ ಸಂದಂರ್ಭದಲ್ಲಿದ್ದರು.