ಜೋಕುಮಾರ ಹುಟ್ಟಲಿ ಲೋಕವೆಲ್ಲ ಬೆಳಗಲಿ
ಸಮೃದ್ಧ ಮಳೆ-ಬೆಳೆಯ ಒಡೆಯ ಜೋಕುಮಾರ ಸ್ವಾಮಿ •ಗಣೇಶ ವಿಸರ್ಜನೆ ನಂತರ 11 ದಿನ ಪೂಜೆ
Team Udayavani, Sep 7, 2019, 1:06 PM IST
ಕಂಪ್ಲಿ: ರಾಮಸಾಗರ ಗ್ರಾಮದ ಹೊರವಲಯದ ಸಿದ್ಧೇಶ್ವರ ಕ್ರಾಸಿನ ಮನೆ ಮುಂದೆ ಬುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನಿಟ್ಟು ಜೋಕುಮಾರನ ಹಾಡನ್ನು ಹಾಡುತ್ತಿರುವ ಮಹಿಳೆಯರು.
•ಜಿ.ಚಂದ್ರಶೇಖರಗೌಡ
ಕಂಪ್ಲಿ: ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ…ಎಂದು ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡುವ ಹಾಡುಗಳನ್ನು ಕೇಳುವುದೇ ಚಂದ.
ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ. ಮಡಿವಾಳರ ಕೇರಿ ಹೊಕ್ಯಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ. ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುಗಳನ್ನು ಹಾಡುವ ಬಾರಿಕೇರ ಸಮುದಾಯದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆಯನ್ನು ಇಟ್ಟು ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆ ಕಂಪ್ಲಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸದ್ಯ ಕಂಡು ಬರುತ್ತಿದೆ.
ಸಮೀಪದ ರಾಮಸಾಗರ ಗ್ರಾಮದ ಬಾರಕೇರ ಅಂದರೆ ಗಂಗಾಮತಸ್ಥರ ಮನೆಯಲ್ಲಿ ವಿಘ್ಞ ನಿವಾರಕ ಗಣೇಶ್ ವಿರ್ಸಜನೆಯ ನಂತರ ಜನಿಸಿರುವ ಜೋಕುಮಾರ ಸ್ವಾಮಿಯನ್ನು ಹನ್ನೊಂದು ದಿನ ಏಳು ಗ್ರಾಮಗಳಲ್ಲಿ ಗಂಗಾಮತ ಸಮುದಾಯದ ಬಾರಿಕೇರ ಹುಲಿಗೆಮ್ಮ, ಶಂಕ್ರಮ್ಮ, ಹಂಪಮ್ಮ, ಮಲ್ಲಮ್ಮ, ಸುಜಾತಮ್ಮ, ಅನಸೂಯಮ್ಮ, ರೇಣುಕಮ್ಮ ಮತ್ತು ದುರುಗಮ್ಮ ಅವರುಗಳು ಜೋಕುಮಾರಸ್ವಾಮಿಯನ್ನು ಮೆರೆಸುತ್ತಾರೆ.
ಎಣ್ಣೆ ಮತ್ತು ಹುತ್ತಿನ ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಹೊಸ ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸಲಾಗಿರುತ್ತದೆ. ಹೀಗೆ ಬುಟ್ಟಿಯಲ್ಲಿ ಹೊತ್ತೂಯ್ಯುವ ಜೋಕುಮಾರನಿಗೆ ಮನೆ ಮಂದಿ ಅಡಿಕೆ, ಎಲೆ, ಅಕ್ಕಿ, ಜೋಳ ಇತ್ಯಾದಿ ಕಾಳುಕಡಿ, ಎಣ್ಣೆ ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು.
ಸೆ. 14ರಂದು (ಜೊಕುಮಾರನ ಹುಣ್ಣಿಮೆ) ರಾತ್ರಿ ಅಗಸರ ಮನೆಗೆ ತೆರಳಿ ಬಿಳಿ ಬಟ್ಟೆ ಪಡೆದು ಜೋಕುಮಾರನ ಮೂರ್ತಿಗೆ ಸುತ್ತಿದ ನಂತರ ಗ್ರಾಮದ ಬ್ಯಾಗರು ಸಮಾಜದವರು ಸಶ್ಮಾನದಲ್ಲಿ ಅಂತ್ಯಕ್ರಿಯೆ ವಿಧಿವಿಧಾನವನ್ನು ನೆರವೇರಿಸುತ್ತಾರೆ. ತಾವು ಹನ್ನೊಂದು ದಿನ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧವಸ ಧಾನ್ಯಗಳಿಂದ ಅಡುಗೆ ಮಾಡಿ ಜೋಕುಮಾರಸ್ವಾಮಿಗೆ ನೈವೇದ್ಯ ಅರ್ಪಿಸಿದ ನಂತರ ಸಾಮೂಹಿಕ ಭೋಜನ ಮಾಡುತ್ತಾರೆ.
ಜೋಕುಮಾರಸ್ವಾಮಿಯ ಜನಪದ ಕಥೆ: ಗಣೇಶ ಹಬ್ಬದ ಮರುದಿನ ಆರಂಭವಾಗುವ ಜೋಕುಮಾರಸ್ವಾಮಿ ಆಚರಣೆ ಹಿಂದೆಯೂ ಒಂದು ಜಾನಪದ ಕಥೆಯಿದೆ. ಈ ಕುರಿತಂತೆ ಈ ಭಾಗದ ಮಹಿಳೆಯರು ಹೇಳುವುದು ಹೀಗೆ.
‘ಜೋಕ ಮತ್ತು ಎಳೆಗೌರಿ’ ದಂಪತಿಗೆ ಬಹುಕಾಲ ಮಕ್ಕಳಾಗದ ಕಾರಣ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಕರುಣಿಸುತ್ತಾನೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳೆ ದಿನಗಳ ಆಯಸ್ಸು ಇರುತ್ತದೆ. ಹೀಗಿರಬೇಕಾದರೆ, ಒಮ್ಮೆ ನಾಡಿನಲ್ಲಿ ಮಳೆ ಹೋಗಿ ಬೆಳೆಗಳೆಲ್ಲಾ ಒಣಗಿ ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಹೊಲಗದ್ದೆಗಳಲ್ಲಿ ಸಂಚರಿಸತೊಡಗುತ್ತಾನೆ. ಅವನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ. ಯಥೇಚ್ಛವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆ ಕುಂಟೆಗಳು ತುಂಬಿತುಳುಕುತ್ತವೆ.
ಇದರಿಂದ ಸಂತಸಗೊಂಡು ಜೋಕುಮಾರನು ಹಾಗೆ ಹೊಲ ಗದ್ದೆಗಳಲ್ಲಿ ಸಂಚರಿಸುತ್ತಿರುವಾಗ ಸುಂದರಿಯಾದ ಅಗಸರ ಸಮುದಾಯದ ಯುವತಿಯನ್ನು ನೋಡಿ ಇಷ್ಟಪಡುತ್ತಾನೆ. ಇದನ್ನು ಸಹಿಸದ ಆ ಯುವತಿಯ ತಂದೆ ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆಯುತ್ತಾನೆ. ಆ ತಲೆಯು ಒಬ್ಬ ಬೆಸ್ತರನಿಗೆ ದೊರಕುತ್ತದೆ. ಆತನು ಇದು ಜೋಕುಮಾರನ ತಲೆ ಎಂದು ಗುರುತಿಸುತ್ತಾನೆ.
ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಿದ್ದಂತೆ ಊರವರೆಲ್ಲಾ ಸೇರಿ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಜೋಕುಮಾರನ ಪೂಜೆ ಆಚರಣೆಗೆ ಬಂದಿದೆ ಎಂದು ಮಹಿಳೆಯರು ಜೋಕುಮಾರನ ಕಥೆಯನ್ನು ವಿವರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.