ಕಂಪ್ಲಿ: ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ (ಆರ್‌ಬಿಎಲ್ಎಲ್ಸಿ) ಜು. 30ರಿಂದ ಕುಡಿಯುವ ಉದ್ದೇಶದಿಂದ ನೀರನ್ನು ಬಿಡಲಾಗಿದ್ದು, ಗುರುವಾರ ಕಂಪ್ಲಿ ಕಾಲುವೆ ಭಾಗದಲ್ಲಿ ನೀರು ಬಂದಿದ್ದು, ನೀರನ್ನು ಕೃಷಿ ಚಟುವಟಿಕೆಗೆ ಬಳಸದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಜಿಲ್ಲೆಯ ನಾಲ್ಕು ನಗರಗಳು, 56 ಗ್ರಾಮಗಳು ಸೇರಿದಂತೆ ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆಗೆ ಕುಡಿಯುವ ಉದ್ದೇಶದಿಂದ ಕಾಲುವೆ ಮೂಲಕ ನೀರನ್ನು ಹರಿಸಲಾಗುತ್ತಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಎರೆಡು ಭಾಗದಿಂದ ಕುಡಿಯುವ ನೀರಿಗಾಗಿ ಮನವಿಗಳು ಬಂದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ತುಂಗಭದ್ರಾ ಆಡಳಿತ ಮಂಡಳಿ ನೀರು ಹರಿಸುತ್ತಿದೆ.
ಪ್ರತಿನಿತ್ಯ 800 ಕ್ಯೂಸೆಕ್ ನೀರನ್ನು ಹರಿಸಲು ನಿರ್ಧರಿಸಲಾಗಿದ್ದು, ಸದ್ಯ 200 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ನಂತರ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಕೃಷಿಗೆ ಬಳಸುವಂತಿಲ್ಲ: ಎಲ್ಎಲ್ಸಿ ಮೂಲಕ ಹರಿಸುತ್ತಿರುವ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಬಿಡಲಾಗುತ್ತಿದೆ. ಕೃಷಿ ಜಮೀನುಗಳಿಗೆ ಹರಿಸುವಂತಿಲ್ಲ ಎಂದು ಕಂಪ್ಲಿಯಲ್ಲಿ ನಡೆದ ಕಂಪ್ಲಿ ತಾಲೂಕು ರೈತ ಮುಖಂಡರ ಸಭೆಯಲ್ಲಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಪಿ.ಎನ್. ಲೋಕೇಶ್ ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಹತ್ತು ದಿನಗಳವರೆಗೆ ನೀರನ್ನು ಹರಿಸಲಾಗುತ್ತಿದೆ. 10 ದಿನಗಳ ಕಾಲ ಸುಮಾರು 1 ಟಿಎಂಸಿಯಷ್ಟು ನೀರನ್ನು ಬಿಡಲಾಗುವುದು. ಸದ್ಯ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿಲ್ಲ, ನೀರಿನ ಸಂಗ್ರಹ ಉತ್ತಮಗೊಂಡರೆ ಅಂದರೆ ಜಲಾಶಯದಲ್ಲಿ ಅಂದಾಜು 50 ಟಿಎಂಸಿಯಷ್ಟು ನೀರು ಸಂಗ್ರಹವಾದರೆ ಕೃಷಿ ಚಟುವಟಿಕೆಗೆ ನೀರನ್ನು ಬಿಡುವ ಬಗ್ಗೆ ಯೋಚಿಸಲಾಗುವುದು. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಲಾಗುತ್ತಿದ್ದು ರೈತರು ಸಹಕರಿಸಬೇಕು ಎಂದರು. ಗುರುವಾರ ದೇವಸಮುದ್ರ ಗ್ರಾಮದ ಹತ್ತಿರ ಕಾಲುವೆಯಲ್ಲಿ ನೀರು ಬಂದಿದ್ದು, ಕಾಲುವೆಗುಂಟಾ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ.