ಖಂಡೇನಹಳ್ಳಿ ನೀರಿನ ಸಮಸ್ಯೆಗೆ ಮುಕ್ತಿ
ಗ್ರಾಮಕ್ಕೆ ಜಿಪಂ ಸಿಇಒ ಭೇಟಿ•ಕೊಳವೆಬಾವಿ ಕೊರೆಸಲು ಜಿಲ್ಲಾಡಳಿತದಿಂದ ಕ್ರಮ
Team Udayavani, May 2, 2019, 5:43 PM IST
ಚಿತ್ರದುರ್ಗ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಖಂಡೇನಹಳ್ಳಿ ಗ್ರಾಮಕ್ಕೆ ತೆರಳಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು.
ಚಿತ್ರದುರ್ಗ: ಆಂಧ್ರ ಗಡಿ ಭಾಗದ ಖಂಡೇನಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಇದ್ದು, ಅಲ್ಲಿನ ಜನರು ಪಕ್ಕದ ಆಂಧ್ರಪ್ರದೇಶಕ್ಕೆ ಹೋಗಿ ನೀರು ತರುತ್ತಾರೆ ಎಂಬ ವಿಶೇಷ ವರದಿ ‘ಉದಯವಾಣಿ’ ಪತ್ರಿಕೆಯಲ್ಲಿ ಏ. 29 ರಂದು ಪ್ರಕಟಗೊಂಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕುಡಿಯುವ ನೀರು ಪೂರೈಕೆಗೆ ಕೊಳವೆಬಾವಿ ಕೊರೆಸುವ ವ್ಯವಸ್ಥೆ ಮಾಡಿದೆ.
ಆಂಧ್ರಪ್ರದೇಶದ ಅಗ್ರಹಾರ ಸೇರಿದಂತೆ ಅಕ್ಕ ಪಕ್ಕದ ಖಂಡೇನಹಳ್ಳಿ ಪಾಳ್ಯ, ಮದ್ದಿಹಳ್ಳಿ, ಹಲಗಲದ್ದಿ, ಹೊಸಕೆರೆ ಗ್ರಾಮಗಳಿಂದಲೂ ಖಂಡೇನಹಳ್ಳಿ ಗ್ರಾಮಸ್ಥರು ಪ್ರತಿನಿತ್ಯ ನೀರು ತರುವ ಸ್ಥಿತಿ ನಿರ್ಮಾಣವಾಗಿದ್ದ ಕುರಿತು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಪತ್ರಿಕಾ ವರದಿಯನ್ನು ಗಮನಿಸಿದ ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಜಿಪಂ ಸಿಇಒ ಕಚೇರಿಗೆ ತೆರಳಿ ಪತ್ರಿಕೆಯಲ್ಲಿ ಬಂದಿರುವ ವಿಷಯವನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಶಾಸಕರು ಮತ್ತು ಸಿಇಒ ಮಧ್ಯೆ ನಡೆದ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಜಿಪಂ ಸಿಇಒ ಸಿ. ಸತ್ಯಭಾಮ ಅವರು ಏ. 30 ರಂದು ಖಂಡೇನಹಳ್ಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಅರಿತು ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು.
ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ತಾಪಂ ಇಒ ಜೊತೆ ಸಭೆ ನಡೆಸಿದ ಸಿಇಒ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚನಾದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಕ್ಕೆ ಕೊಳವೆಬಾವಿ ಕೊರೆಯುವ ವಾಹನ ತೆರಳಿತ್ತು. ಗ್ರಾಮದಲ್ಲಿರುವ ಎರಡು ಹಳೆಯ ಕೊಳವೆಬಾವಿಗಳ ಪುನಶ್ಚೇತನ ಮಾಡಲಾಗುತ್ತಿದೆ. ಅಲ್ಲದೆ ಮತ್ತೆ ಎರಡು ಹೊಸ ಕೊಳವೆಬಾವಿ ಕೊರೆಸಲಾಗುತ್ತದೆ ಎನ್ನಲಾಗಿದೆ.