ಕಾರವಾರದ ಸೊಸೆ ಮುಂಬೈ ಪಾಲಿಕೆ ಮೇಯರ್
Team Udayavani, Nov 21, 2019, 3:58 PM IST
ಕಾರವಾರ: ಮಂಬಯಿ ವರ್ಲಿ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿರುವ ಕಾರವಾರ ಮೂಲದ ಶಿವಸೇನೆ ಪಕ್ಷದ ಕಿಶೋರಿ ಪೆಡ್ನೇಕರ್ ಇದೀಗ ಮುಂಬಯಿ ಮಹಾನಗರ ಪಾಲಿಕೆ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಕಾರವಾರ ತಾಲೂಕು ಅಂಬೇಜೂಗ್ ಪಂಡರಿರಾಯ ಪೆಡ್ನೇಕರರ ಮೊಮ್ಮಗನ ಪತ್ನಿ, ಕಾರವಾರದ ಸೊಸೆಯಾಗಿರುವುದು ವಿಶೇಷ. ಮುಂಬಯಿ ಮಹಾನಗರ ಪಾಲಿಕೆಯ 88 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಅಭ್ಯರ್ಥಿ ಅವಿರೋಧ ಆಯ್ಕೆ ನಡೆದಿದ್ದು, 77ನೇ ಮೇಯರ್ ಆಗಿ ಕಿಶೋರಿ ಪೆಡ್ನೇಕರ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಸಂಖ್ಯಾಬಲದ ಕೊರತೆ ಕಾರಣದಿಂದ ಮೇಯರ್ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಹಿಂದೆ ಸರಿದಿದ್ದವು. ಇದರಿಂದ ಶಿವಸೇನೆಯ ಕಿಶೋರಿ ಪೆಡ್ನೇಕರ್ ಮೇಯರ್ ಹುದ್ದೆ ಸುಗಮವಾಗಿತ್ತು. ಕಿಶೋರಿ ಶಿವಸೇನೆಯಲ್ಲಿ ವರ್ಚಸ್ವಿ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಪ್ರಮುಖ ಪ್ರಚಾರಕಿಯಾಗಿ ಮುಂಚೂಣಿಯಲ್ಲಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟಿನ ಮಧ್ಯೆ ರಾಜಕೀಯ ವಲಯದಲ್ಲಿ ಮೇಯರ್ ಹುದ್ದೆಯ ಆಯ್ಕೆ ತೀವ್ರ ಕುತೂಹಲ ತಂದಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ, ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಅ.24 ರಂದು ಫಲಿತಾಂಶ ಪ್ರಕಟವಾದ ನಂತರ ಮೈತ್ರಿ ಮುರಿದುಕೊಂಡವು. ಈ ನಡುವೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸರ್ಕಾರ ರಚಿಸಲು ಶಿವಸೇನೆ ಪ್ರಯತ್ನ ಮುಂದುವರಿದಿದೆ.
ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಲ್ಲಿದೆ. ಇದರ ಹೊರತಾಗಿಯೂ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚನೆ ಸಂಬಂಧ ಕಸರತ್ತು ನಡೆಸುತ್ತಿವೆ. ಈ ವಿದ್ಯಮಾನಗಳ ಹೊರತಾಗಿಯೂ ಮೇಯರ್ ಹುದ್ದೆ ಆಯ್ಕೆ ಬಗ್ಗೆಯೂ ತೀವ್ರ ಚರ್ಚೆ ಎದ್ದಿದ್ದವು. ಹಾಲಿ ಮೇಯರ್ ವಿಶ್ವನಾಥ್ ಮಹಾದೇಶ್ವರ ಅವರ ಅವಧಿ ಗುರುವಾರ ಮುಕ್ತಾಯವಾಗಲಿದೆ. ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಚುನಾವಣೆ ಶುಕ್ರವಾರ ನಡೆಯಬೇಕಿತ್ತು. ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಶಿವಸೇನೆ ವರ್ಲಿ ಕಾರ್ಪೊರೇಟರ್ ಕಿಶೋರಿ ಪೆಡ್ನೇಕರ್ ಅವರನ್ನು ಮೇಯರ್ ಮತ್ತು ಮಲಾಡ್ ಕಾರ್ಪೊರೇಟರ್ ಸುಹಾಸ್ ವಾಡ್ಕರ್ ಅವರನ್ನು ಉಪಮೇಯರ್ ಹುದ್ದೆಗೆ ನಾಮನಿರ್ದೇಶನ ಮಾಡಿತ್ತು.
ಬಿಜೆಪಿ ಮುಖಂಡ ಆಶಿಶ್ ಶೆಲಾರ್ ಸೋಮವಾರ ಟ್ವೀಟ್‌ನಲ್ಲಿ ತಮ್ಮ ಪಕ್ಷವು ಮೇಯರ್ ಹುದ್ದೆ ಹಿಡಿಯುವಷ್ಟು ಸಂಖ್ಯೆ ಹೊಂದಿರದ ಕಾರಣ ಯಾರನ್ನೂ ಕಣಕ್ಕಿಳಿಸುವುದಿಲ್ಲ ಎಂದಿದ್ದರು. ಆದರೆ 2022ರಲ್ಲಿ ಈ ಹುದ್ದೆ ವಶಪಡಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ. ನಮ್ಮಲ್ಲಿ ಸಂಖ್ಯಾ ಬಲವಿಲ್ಲ. ಆದ್ದರಿಂದ ನಾವು ಯಾವುದೇ ಅಭ್ಯರ್ಥಿಯನ್ನು ಬಿಎಂಸಿಯಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರವಿ ರಾಜಾ ಹೇಳಿಕೆ ನೀಡಿದ್ದರು. ಇದರರ್ಥ ನಾವು ಯಾವುದೇ ಪಕ್ಷವನ್ನು ಬೆಂಬಲಿಸಿದ್ದೇವೆ ಎಂದಲ್ಲ, ಆದರೆ ನಮ್ಮಲ್ಲಿ ಸಂಖ್ಯಾ ಬಲವಿಲ್ಲದ ಕಾರಣ ನಾವು ಅಭ್ಯರ್ಥಿಗಳನ್ನು ಹಾಕಲಿಲ್ಲ ಎಂದಿದ್ದರು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ರಾಖೀ ಜಾಧವ್ ಕೂಡ ಇದೇ ನಿಲುವು ಪ್ರಕಟಿಸಿದ್ದಾರೆ. ಇದರಿಂದ ಶಿವಸೇನೆ ಮಹಿಳಾ ಅಭ್ಯರ್ಥಿ ಕಾರವಾರದ ಹೆಮ್ಮೆಯ ಸೊಸೆ ಕಿಶೋರಿ ಪೆಡ್ನೇಕರ್‌ಗೆ ಮುಂಬಯಿ ಮೇಯರ್
ಪದವಿ ಅನಾಯಾಸವಾಗಿ ದಕ್ಕಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.