Team Udayavani, Mar 30, 2019, 5:18 PM IST
ಕಾರವಾರ: ಮತದಾನಕ್ಕೆ ಶಾಲಾ ಕೋಣೆಗಳನ್ನು ಬಳಸಲಾಗುತ್ತಿದ್ದು, ಮತದಾನದ ಕೊಠಡಿಗಳಿಗೆ ನಿರ್ದಿಷ್ಟ ಬಣ್ಣ ಬಳಿಯಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಆದೇಶ. ಶಾಲಾ ಸಿಬ್ಬಂದಿ ಕೋಣೆಗೆ ಬಣ್ಣ ಬೇಡ ಎನ್ನುವಂತಿಲ್ಲ. ಆದರೆ ಆತಂಕದ ಸಂಗತಿಯೆಂದರೆ, ಮತದಾನಕ್ಕೆ ಮೊದಲೇ ನಿಗದಿಯಾದ ಶಾಲೆಯ ಕೋಣೆಗಳಲ್ಲಿ ನಲಿಕಲಿ ಚಿತ್ರಗಳಿಗೆ ಈಗ ಸಂಚಕಾರ ಬಂದಿದೆ.
ಇಲ್ಲಿನ ಬಝಾರ್ ಶಾಲೆಯ ಸ್ಮಾರ್ಟ್‌ಕ್ಲಾಸ್ ಇದ್ದ ಕೋಣೆಯನ್ನು ಮತದಾನಕ್ಕಾಗಿ ಬಿಟ್ಟುಕೊಡಬೇಕಿದೆ. ಸ್ಮಾರ್ಟ್ ಕ್ಲಾಸ್‌ನ್ನು ಮೊದಲಿನಂತೆ ಹೊಂದಿಸಿಕೊಳ್ಳಬೇಕಲ್ಲ ಎಂಬ ಚಿಂತೆ ಶಾಲೆಯವರದ್ದು. ದಾನಿಗಳ, ಪೋಷಕರ ಮತ್ತು ಶಿಕ್ಷಕರೇ ಸ್ವಂತ ಖರ್ಚಿನಿಂದ ಸಾವಿರಾರು ರೂ. ವೆಚ್ಚ ಮಾಡಿ ರೂಪಿಸಿಕೊಂಡ ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್ ಹೊರತುಪಡಿಸಿ ಪಕ್ಕದ ಕೋಣೆ ಪಡೆಯಲು ಅಧಿಕಾರಿಗಳು ಒಪ್ಪಲಿಲ್ಲ. ಒಮ್ಮೆ ನಿಗದಿಯಾದ ಕೋಣೆಯನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವೇ ಇಲ್ಲ ಎಂದು ನಿರಾಕರಿಸಿದ ಘಟನೆ ಶುಕ್ರವಾರ ನಡೆಯಿತು. ಸ್ಮಾರ್ಟ್‌ಕ್ಲಾಸ್‌ನಲ್ಲಿನ ಕಂಪ್ಯೂಟರ್ ಮತ್ತು ಡೆಸ್ಕ್ ತೆಗೆದಿಟ್ಟುಕೊಳ್ಳುವಂತೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದರು.
ಈ ಬಝಾರ್ ಶಾಲೆ 1927ರಲ್ಲಿ ಪ್ರಾರಂಭವಾಗಿದ್ದು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಚಲ ಭಾರತಿ ರೂಪಿಸಿರುವ ಸಾಫ್ಟವೇರ್ ನ್ನು ಸ್ಮಾರ್ಟ್‌ಕ್ಲಾಸ್‌ಗೆ ಬಳಸಲಾಗಿದೆ. ಗಣಿತ ಮತ್ತು ಇಂಗ್ಲಿಷ್ ಕಲಿಕೆ ಇದರಿಂದ ಸುಲಭವಾಗಿದ್ದು, ಮಕ್ಕಳ ಐಕ್ಯೂ ಹೆಚ್ಚಿದೆ. ಆದರೆ ಆ ಕ್ಲಾಸ್ ಈಗ ಮತದಾನಕ್ಕೆ ಬಳಕೆಯಾಗುತ್ತಿದ್ದು, ಅಲ್ಲಿನ ಕಂಪ್ಯೂಟರ್ ಡೆಸ್ಕನ್ನು ಪಕ್ಕದ ಕೋಣೆಗೆ ಸ್ಥಳಾಂತರಿಸಬೇಕಿದೆ. ನಲಿಕಲಿ ಕೋಣೆಯ ಚಿತ್ರಗಳು ಮತ್ತು ಆ ಕೋಣೆಯ ಹೊರ ಆವರಣದ ಚಿತ್ರಗಳನ್ನು ಚುನಾವಣಾ ಆಯೋಗ ಸೂಚಿಸಿರುವ ಐವರಿ ವೈಟ್ ಮತ್ತು ನೀಲಿ ಬಣ್ಣ ಕಿತ್ತುಕೊಳ್ಳಲಿದೆ.
ಕಾರವಾರ ತಾಲೂಕಿನಲ್ಲಿ 90: ಕಾರವಾರ ನಗರ ಸೇರಿದಂತೆ ಗ್ರಾಮೀಣ ಭಾಗದ 90 ಶಾಲೆಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ. 90 ಶಾಲೆಗಳ ಒಂದರೆಡು ಮತ್ತು ಕೆಲವು ಕಡೆ ಮೂರು ಕೋಣೆಗಳನ್ನು ಮತದಾನ ಕೇಂದ್ರ (ಬೂತ್)ಗಳಾಗಿವೆ. ಈಗ ಆ ಕೋಣೆಗಳಿಗೆ ಚುನಾವಣಾ ಆಯೋಗ ಸೂಚಿಸಿದ ಬಣ್ಣ ಬಳಿಯುವ ಕಾರ್ಯ ಪ್ರಾರಂಭವಾಗಿದೆ. ನಿರ್ಮಿತಿ ಕೇಂದ್ರ ಅಡಿ ಬಣ್ಣ ಬಳಿಯುವ ಗುತ್ತಿಗೆದಾರರಿಗೆ ಈ ಜವಾಬ್ದಾರಿ ನೀಡಿದ್ದು, 5 ತಂಡಗಳು ಕೆಲಸ ಪ್ರಾರಂಭಿಸಿವೆ.
ನಲಿ ಕಲಿ ಕೋಣೆಯ ಚಿತ್ರಗಳು ಬಣ್ಣದಲ್ಲಿ ಮುಳುಗಿ ಹೋಗಲಿವೆ ಎಂದು ಅಲ್ಲಿನ ಶಿಕ್ಷಕರು ಆತಂಕದ ದೂರನ್ನು ಅಪರ ಜಿಲ್ಲಾಧಿ ಕಾರಿ ಹಾಗೂ ತಹಶೀಲ್ದಾರ್ ಗೆ ಲಿಖೀತವಾಗಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ತಹಶೀಲ್ದಾರರು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಸೂಚನೆಯನ್ನು ಶಿಕ್ಷಕರಿಗೆ, ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಮಸ್ಯೆ ಜಿಪಂ ಸಿಇಒ ಮೊಹಮ್ಮದ್ ರೋಶನ್‌ರಿಗೂ ತಲುಪಿಸಲಾಯಿತು. ತಕ್ಷಣ ಶಿಕ್ಷಣ ಇಲಾಖೆ ಅಧಿ ಕಾರಿಗಳನ್ನು ಕರೆದು ಶಾಲಾ ಕೋಣೆಗಳಲ್ಲಿ ಇದ್ದ ಚಿತ್ರಗಳನ್ನು ಪುನಃ ಬಿಡಿಸಿಕೊಡಲು ತಗುಲುವ ವೆಚ್ಚದ ಅಂದಾಜು ವೆಚ್ಚ ನೀಡಿ. ಅವುಗಳನ್ನು ಮೊದಲಿದ್ದ ಹಾಗೆ ರೂಪಿಸಿಕೊಡೋಣ ಎಂದು ಸಲಹೆ ನೀಡಿದ್ದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.
ಅಂತೂ ಚುನಾವಣಾ ಆಯೋಗ ಮತಗಟ್ಟೆಗಳಿರುವ ಶಾಲೆಗಳಲ್ಲಿ ಮತದಾನದ ಕೋಣೆಗಳನ್ನು ವಿಶೇಷ ಬಣ್ಣದಿಂದ ಅಲಂಕರಿಸಿ, ಮತದಾರರು ತಕ್ಷಣ ಗುರುತಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಅಲ್ಲಿನ ವಿದ್ಯುತ್ ವ್ಯವಸ್ಥೆ ರಿಪೇರಿ ಸಹ ಕೈಗೆತ್ತಿಕೊಂಡಿದೆ. ಶೌಚಾಲಯಗಳನ್ನು ಸಹ ಬಣ್ಣದಿಂದ ಅಲಂಕರಿಸಲು ಸೂಚಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ಯಾವುದೇ ತೊಂದರೆ ಆಗಬಾರದು. ಅವರಿಗೆ ಶಾಲೆಯಲ್ಲಿ ವಸತಿ ವ್ಯವಸ್ಥೆ ಸಹ ಸರಿ ಇರಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನಲಿಕಲಿ ಕೋಣೆಯ ಚಿತ್ರಗಳನ್ನು ಮತ್ತು ಹೊರ ಗೋಡೆಯ ಚಿತ್ರಗಳನ್ನು ಮತದಾನದ ನಂತರ ಪುನಃ ರೂಪಿಸಿ ಕೊಡಲಾಗುವುದು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಲೇಬೇಕಿದೆ. ಬಣ್ಣ ಹೊಡೆಯುವ ಗುತ್ತಿಗೆದಾರರಿಗೆ ಶಾಲೆಯ ಕೋಣೆಯ ಚಿತ್ರಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದಿಡಿ. ಮತದಾನದ ನಂತರ ಶಾಲಾ ಕೋಣೆ ಮೊದಲಿನಂತೆ ಇರಬೇಕು ಎಂದು ಸೂಚಿಸಲಾಗಿದೆ.
ಆರ್.ವಿ. ಕಟ್ಟಿ, ತಹಶೀಲ್ದಾರ್
ನಾಗರಾಜ್ ಹರಪನಹಳ್ಳಿ