ಕವಿತಾಳ ಪಪಂ ಆಡಳಿತ ನಿಷ್ಕ್ರಿಯ
•ಕಾರ್ಯವೈಖರಿಗೆ ಬೇಸತ್ತ ಜನರು•ಪೈಪ್ ಒಡೆದು ನೀರು ಪೋಲಾದರೂ ಕೇಳ್ಳೋರಿಲ್ಲ
Team Udayavani, Aug 21, 2019, 11:18 AM IST
ಕವಿತಾಳ: ಮುಖ್ಯ ಪೈಪ್ ಗಳು ಒಡೆದು ನೀರು ಪೋಲಾಗಿ ಕಲುಷಿತವಾಗಿದೆ.
ಶೇಖರಪ್ಪ ಕೋಟಿ
ಕವಿತಾಳ: ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಟ್ಟಣ ಅಭಿವೃದ್ಧಿ ಅಯೋಮಯವಾಗಿದ್ದು, ಪಟ್ಟಣ ಪಂಚಾಯಿತಿ ಆಡಳಿತದ ಕಾರ್ಯವೈಖರಿಗೆ ಜನರು ಬೇಸತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪಟ್ಟಣ ಪಂಚಾಯಿತಿ ಗ್ರಾಪಂ ಆಡಳಿತಕ್ಕಿಂತಲೂ ಕಡೆಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ ಗಗನ ಕುಸುಮವಾಗಿದೆ. ಚರಂಡಿ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಹಾವಳಿ ನೋಡಿದರೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಸ್ಕಿ ಕ್ರಾಸ್‌ನಿಂದ ಜೆಸ್ಕಾಂ ಕಚೇರಿ ವರೆಗೆ ನೀರು ಸರಬರಾಜು ಪೈಪ್‌ಗ್ಳು 10-15ಕ್ಕೂ ಹೆಚ್ಚಿನ ಕಡೆ ಒಡೆದು ನೀರು ಪೋಲಾಗುತ್ತಿರುವುದು ಮತ್ತು ಕಲುಷಿತ ನೀರು ಪೂರೈಕೆ ಆಗುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.
ನಗರೋತ್ಥಾನ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಕರೆದು ಅಂದಿನ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಭೂಮಿ ಪೂಜೆ ನೆರವೇರಿಸಿದ್ದರೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಮೂವರು ಮುಖ್ಯಾಧಿಕಾರಿಗಳು ಬದಲಾಗಿದ್ದರೂ ಅಭಿವೃದ್ಧಿ ಬಗ್ಗೆ ಗಮನಹರಿಸದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಕಿಸಾನ್ ಸಭಾ ಅಧ್ಯಕ್ಷ ಎಂ.ಡಿ. ಮೆಹಬೂಬ್ ಆರೋಪಿಸುತ್ತಾರೆ.
ಪಟ್ಟಣ ಪಂಚಾಯಿತಿ ಆದ ನಂತರ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತವಾಗಿದೆ. ಗ್ರಾಮೀಣ ಕೃಪಾಂಕ ವ್ಯವಸ್ಥೆ ಇಲ್ಲದಂತಾಗಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಮನೆ, ನಿವೇಶನ ಮತ್ತು ನೀರಿನ ಕರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಯಾಕಾದರೂ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೇಗೆ ಏರಿತು ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಗಳ ಅಗಲೀಕರಣ ಕುರಿತು ಮೌನ ವಹಿಸಿರುವ ಅಧಿಕಾರಗಳ ನಡೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡುತ್ತಿದ್ದು, ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎನ್ನುವ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಏರಿಕೆ ಪರಿಣಾಮ ಸಾರ್ವಜನಿಕರು ಕರ ಪಾವತಿಗೆ ಹಿಂದೇಟು ಹಾಕುತ್ತಿದ್ದು, ತಾಲೂಕು ಕೇಂದ್ರಗಳಿಗಿಂತ ಕವಿತಾಳದಲ್ಲಿನ ತೆರಿಗೆ ಏಕೆ ಹೆಚ್ಚು ಎಂದು ಪ್ರಶ್ನಿಸುತ್ತಿದ್ದಾರೆ.
ಪಟ್ಟಣ ಪಂಚಾಯತಿ ಕಾರ್ಮಿಕರಿಗೆ ಕಳೆದ 10 ತಿಂಗಳ ಸಂಬಳ ನೀಡದ ಕಾರಣ ಈಗಾಗಲೇ ಕಾರ್ಮಿಕರು ಪ್ರತಿಭಟನೆ ಧರಣಿ ನಡೆಸಿದ್ದಾರೆ. ಇನ್ನೊಂದೆಡೆ ಸ್ವಚ್ಚತೆ ಕೈಗೊಳ್ಳುವ ಕಾರ್ಮಿಕರಿಗೆ ಕೈಗವಚ, ಕಸ ತೆಗೆಯಲು ಪುಟ್ಟಿ, ಕಸ ಸಾಗಿಸಲು ವಾಹನ ವ್ಯವಸ್ಥೆ ಮಾಡದಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ನಗರೋತ್ಥಾನ ಯೋಜನೆ ಕಾಮಗಾರಿ ಆರಂಭ ಮಾಡಬೇಕು. ಓಣಿಗಳಲ್ಲಿ ಮತ್ತು ಮುಖ್ಯ ರಸ್ತೆಯಲ್ಲಿ ಸ್ವಚ್ಚತೆ ಕಾಪಾಡಬೇಕು. ಒಡೆದ ನೀರಿನ ಪೈಪ್ ದುರಸ್ತಿ ಮಾಡಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ವಿವಿಧೆಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ತೆರಿಗೆ ಸ್ವರೂಪದಂತೆ ತೆರಿಗೆ ಪ್ರಮಾಣ ತಗ್ಗಿಸಬೇಕು ಮತ್ತು ತೆರಿಗೆ ಪಾವತಿಸಲು ಉಂಟಾಗುತ್ತಿರುವ ಅಡ್ಡಿ ಆತಂಕ ನಿವಾರಿಸಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.