ನೀರು ತಲುಪಿಸಲು ಕೆಬಿಜೆಎನ್ನೆಲ್ ವಿಫಲ
ಟಿಸಿ-ಮೋಟಾರ್ ದುರಸ್ತಿಗೆ ವಿಳಂಬ •ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ
Team Udayavani, Aug 31, 2019, 10:49 AM IST
ಕೆಂಭಾವಿ: ಕೆಟ್ಟು ಹೋಗಿರುವ ಟಿಸಿ.
•ಗುಂಡಭಟ್ಟ ಜೋಶಿ
ಕೆಂಭಾವಿ: ಶತಾಯ ಗತಾಯ ಪ್ರಯತ್ನ ಮಾಡಿ, ರೈತರಿಗೆ ಕಾಲುವೆ ಮೂಲಕ ನೀರು ತಲುಪಿಸುವುದು ಸರ್ಕಾರದ ಮಹತ್ವಾಂಕಾಕ್ಷಿ ಯೋಜನೆಯಾಗಿದೆ. ಆದರೆ ಅಧಿಕಾರಿಗಳು ಸಹಕಾರ ನೀಡದೆ ಇರುವುದರಿಂದ ಕೋಟ್ಯಂತರ ರೂ. ವೆಚ್ಚದ ಯೋಜನೆಗಳು ಹಳ್ಳ ಹಿಡಿಯುತ್ತಿವೆ.
ಯಾದಗಿರಿ ಜಿಲ್ಲೆಯ ರೈತರಿಗಲ್ಲದೇ ನೆರೆಯ ವಿಜಯಪುರ ಜಿಲ್ಲೆಯ ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ ತಾಲೂಕಿನ ಹಲವು ಗ್ರಾಮಗಳ ನೂರಾರು ರೈತರಿಗೆ ಕೃಷಿ ಜಮೀನಿಗೆ ಮತ್ತು ಕುಡಿಯಲು ನೀರೊದಗಿಸಲು ಕಳೆದ 14 ವರ್ಷಗಳ ಹಿಂದೆ ಪಟ್ಟಣದಲ್ಲಿ ಗುತ್ತಿ ಬಸವೇಶ್ವರ ಇಂಡಿ ಏತ ನೀರಾವರಿ ಯೋಜನೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಿದೆ. ಆದರೆ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆಗೆ ನೀರು ಎತ್ತುವ ಬೃಹತ್ ಪ್ರಮಾಣದ ಮೋಟರ್‌ಗಳು ಸುಟ್ಟು ಆರು ತಿಂಗಳಾಗಿವೆ. ಆದರೂ ಇನ್ನೂ ದುರಸ್ತಿ ಮಾಡಿಲ್ಲ.
ಕೆಂಭಾವಿ ಪಟ್ಟಣದ ಜಾಕ್‌ವೆಲ್ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಎಂಟು ವಿದ್ಯುತ್ ಚಾಲಿತ ಮೋಟಾರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ವಿದ್ಯುತ್ ಒದಗಿಸಲು ಹತ್ತಿಗುಡೂರ 220 ಕೆ.ವಿ ವಿದ್ಯುತ್ ಕೇಂದ್ರದಿಂದ ಪ್ರತ್ಯೇಕವಾಗಿ 110 ಕೆ.ವಿ ವಿದ್ಯುತ್ ಮಾರ್ಗ ಒದಗಿಸಿದೆ. ಪ್ರತಿ ನಾಲ್ಕು ಮೋಟಾರ್‌ಗೆ ಒಂದರಂತೆ ಸುಮಾರು 8000 ಕೆ.ವಿ ಸಾಮರ್ಥ್ಯದ ಎರಡು ಬೃಹತ್ ಪ್ರಮಾಣದ ವಿದ್ಯುತ್ ಪರಿವರ್ತಕ ಅಳವಡಿಸಿದ್ದು, ಇದರಲ್ಲಿ ಒಂದು ವಿದ್ಯುತ್ ಪರಿವರ್ತಕ ಸಂಪೂರ್ಣ ಸುಟ್ಟು ಆರು ತಿಂಗಳು ಗತಿಸಿದೆ. ಆದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇತ್ತೀಚೆಗೆ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ನೇತೃತ್ವದಲ್ಲಿ ನೂರಾರು ರೈತರು ಪಟ್ಟಣದ ಕೆಬಿಜೆಎನ್ನೆಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಟಿಸಿಗಳ ದುರಸ್ತಿ ಕಾರ್ಯವನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಇಲಾಖೆ ವಹಿಸಿಕೊಟ್ಟಿದೆ. ಈಗ ಕೇವಲ ನಾಲ್ಕು ಮೋಟಾರ್ ಮಾತ್ರ ಚಾಲನೆ ಇದ್ದು, 200 ಕ್ಯೂಸೆಕ್ ನೀರು ಮಾತ್ರ ಕಾಲುವೆಗೆ ಹರಿಯಲು ಸಾಧ್ಯವಾಗುತ್ತಿದೆ. ಇದು ಕೇವಲ ಯಾದಗಿರಿ ಹಾಗೂ ಸಿಂದಗಿ ತಾಲೂಕಿನ ಕೆಲವು ರೈತರ ಜಮೀನುಗಳಿಗೆ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರೊದಗಿಸಲು ಸಾಧ್ಯವಾಗುತ್ತದೆ ಎಂಬುದು ತಾಂತ್ರಿಕ ತಜ್ಞರ ಅಭಿಪ್ರಾಯವಾಗಿದೆ.
ಹಲವು ತೊಂದರೆ: ಕೆಟ್ಟು ಹೋಗಿರುವ ಟಿಸಿ ದುರಸ್ತಿ ಕಾರ್ಯಕ್ಕೆ ಬಂದಿರುವ ಬೆಳಗಾವಿ ಮೂಲದ ತಾಂತ್ರಿಕ ತಜ್ಞರು ಸ್ಥಳದಲ್ಲೇ ದುರಸ್ತಿ ಕಾರ್ಯ ಪ್ರಾರಂಭ ಮಾಡಿದರೂ ಸಂಪೂರ್ಣ ಸುಟ್ಟು ಹೋಗಿದ್ದರ ಪರಿಣಾಮ ಬೆಂಗಳೂರಿನ ಕಂಪನಿಗೆ ಸಾಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸುಮಾರು 60 ಟನ್ ಭಾರದ ಇದನ್ನು ಸಾಗಿಸಲು ಬೃಹತ್ ಗಾತ್ರದ ಲಾರಿ ಸಜ್ಜಾಗಿದ್ದು, ಮಳೆ ಬಂದ ಹಿನ್ನೆಲೆಯಲ್ಲಿ ಟಿಸಿ ಇದ್ದ ಸ್ಥಳಕ್ಕೆ ಬರಲು ಲಾರಿ ಹೆಣಗಾಡುತ್ತಿದೆ. ಇದರಿಂದ ನಿಯಮದ ಪ್ರಕಾರ ಕಳೆದ ವಾರ ಬೆಂಗಳೂರಿಗೆ ಹೊರಟು ಎರಡು ಮೂರು ದಿನಗಳಲ್ಲಿ ಈ ಟಿಸಿಗಳು ಮತ್ತೆ ಜೋಡಣೆ ಆಗಬೇಕಿತ್ತು. ಆದರೆ ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಇನ್ನೂ 15 ದಿನಗಳ ಕಾಲ ವಿಳಂಬವಾಗುವ ಲಕ್ಷಣಗಳು ಕಾಣುತ್ತಿದೆ. ಇಂತಹ ಹಲವು ತಾಂತ್ರಿಕ ಕಾರಣಗಳು ಅಡೆತಡೆ ಉಂಟು ಮಾಡುತ್ತಿದ್ದು, ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇದಕ್ಕೆಲ್ಲ ಕೆಬಿಜೆಎನ್ನೆಲ್ ಇಲಾಖೆ ಉತ್ತರ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.