“15 ನೂತನ ಗ್ರಾಮೀಣ ಬಸ್ ಮಾರ್ಗಕ್ಕೆ ಪ್ರಸ್ತಾವ’
Team Udayavani, Apr 2, 2017, 5:20 PM IST
ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಡಗಿನ ಗ್ರಾಮೀಣ ಜನರ ಅನುಕೂಲಕ್ಕಾಗಿ ನೂತನ ಮಾರ್ಗಗಳ ಮೂಲಕ ಬಸ್‌ಗಳ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ. ರಮೇಶ್ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಪ್ರಯಾಣಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಡಿಕೇರಿ- ಮೈಸೂರು ಮಾರ್ಗದ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಕುಗ್ರಾಮಗಳು ಸೇರಿದಂತೆ ಇತರ ಗ್ರಾಮೀಣ ಭಾಗಗಳ ಜನರ ಅನುಕೂಲತೆಗಾಗಿ 15 ನೂತನ ಬಸ್ ಮಾರ್ಗಗಳನ್ನು ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಕೆಎಸ್‌ಆರ್‌ಟಿಸಿ ಸ್ಪಂದಿಸಿದೆ ಎಂದರು.
ಕೆಎಸ್‌ಆರ್‌ಟಿಸಿ ನಿರ್ದೇಶಕರಾದ ಎಂ.ಎ. ಶೌಕತ್ ಆಲಿ ಮಾತನಾಡಿ, ಮುಂದಿನ ವಾರ ಕಕ್ಕಬ್ಬೆಯಿಂದ ಬೆಂಗಳೂರು ಮತ್ತು ಸೋಮವಾರಪೇಟೆಯಿಂದ ಬೆಂಗಳೂರಿಗೆ ತೆರಳುವ ಬಸ್‌ಗಳಿಗೆ ಚಾಲನೆ ನೀಡಲಾಗುವುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕುಮುದಾ ಧರ್ಮಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಮಾದಾಪುರ ಗ್ರಾಮ ಪಂಚಾಯ್ತಿ ಸದಸ್ಯರಾದ ಇಬ್ರಾಹಿಂ, ಸೋಮವಾರಪೇಟೆ ತಾಲ್ಲೂಕು ಹಿಂದುಳಿದ ವರ್ಗದ ಅಧ್ಯಕ್ಷರಾದ ಕೆ.ಎಸ್. ಸುಂದರ್, ಕಾಂಗ್ರೆಸ್ ಪ್ರಮುಖರಾದ ರಘು ಮಾದಪ್ಪ, ಎಂ.ಕೆ. ರಾಘವ, ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಕರಾದ ಈರಪ್ಪ ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ನೂತನ ಬಸ್ ಮಾರ್ಗ: ಬೆಳಗ್ಗೆ 8 ಗಂಟೆಗೆ ಮಡಿಕೇರಿಯಿಂದ ಮಾದಾಪುರ, ಸುಂಟಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹಾಗೂ ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಡುವ ಬಸ್ ಗರಗಂದೂರು, ಮಾದಾಪುರ, ಮಕ್ಕಂದೂರು ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸಲಿದೆ.