ಲೆ| ಜ| ಕೊಡಗಿನ ಬಿ.ಸಿ. ನಂದ ನಿಧನ
Team Udayavani, Dec 13, 2018, 10:11 AM IST
ಮಡಿಕೇರಿ: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೊಡಗಿನ ಬಿ.ಸಿ. ನಂದ ಖ್ಯಾತಿಯ ಬಿದ್ದಂಡ ಚೆಂಗಪ್ಪ ನಂದ (87) ಡಿ. 12ರಂದು ನಿಧನ ಹೊಂದಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬುಧವಾರ ಮಧ್ಯಾಹ್ನ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಮೇರಿಯಂಡ ಲೀಲಾ ಹಾಗೂ ನಾಲ್ವರು ಪುತ್ರಿಯ ರನ್ನು ಅವರು ಅಗಲಿದ್ದಾರೆ.
ನಂದ ನಿಧನಕ್ಕೆ ಸೇನಾಧಿಕಾರಿಗಳು, ಮಾಜಿ ಸೈನಿಕರು ಹಾಗೂ ಜನಪ್ರತಿನಿಧಿ ಗಳು ಸಂತಾಪ ಸೂಚಿಸಿದ್ದಾರೆ. ಅಂತ್ಯ
ಕ್ರಿಯೆ ಅಬ್ಬಿ ಫಾಲ್ಸ್ ರಸ್ತೆಯ ನಿವೇಶನ ದಲ್ಲಿ ಗುರುವಾರ ನಡೆಯಲಿದೆ. ಸೇನಾ ತುಕಡಿ, ಅಧಿಕಾರಿಗಳು, ಜನಪ್ರತಿನಿಧಿಗಳು ಗೌರವ ನಮನ ಸಲ್ಲಿಸಲಿದ್ದಾರೆ.
ಸೇನಾ ಕ್ಷೇತ್ರದ ಹೆಜ್ಜೆ ಗುರುತು
ನಾಲ್ಕು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಲೆಫ್ಟಿನೆಂಟ್ ಜನರಲ್ ಉನ್ನತ ಪದವಿಯನ್ನು ಅಲಂಕರಿಸಿದ ಬಿ.ಸಿ. ನಂದ ಭೂ ಸೇನೆ ಉತ್ತರ ವಲಯದ ಮುಖ್ಯಸ್ಥರಾಗಿದ್ದರು. ಪರಮ ವಿಶಿಷ್ಟ ಸೇವಾ ಮೆಡಲ್ ಮತ್ತು ಅತೀ ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತರಾದವರು. ನಿವೃತ್ತಿಯ ಬಳಿಕ ಕೊಡಗು ವನ್ಯಜೀವಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್‌ನ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು.
ಡೆಹ್ರಾಡೂನ್‌ನಲ್ಲಿ ಕಲಿಯುವಾಗ ಮನೆ ಸಮೀಪವೇ ಇದ್ದ ಇಂಡಿಯನ್ ಮಿಲಿಟರಿ ಅಕಾಡೆಮಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಪಾಯಿಗಳು ಹಾಗೂ ತಮ್ಮ ಸಮೀಪದ ಬಂಧುವೇ ಆಗಿದ್ದ ಜನರಲ್ ತಿಮ್ಮಯ್ಯ ಅವರ ಸಮವಸ್ತ್ರದೊಂದಿಗಿನ ಶಿಸ್ತುಬದ್ಧ ಜೀವನ ನಂದ ಅವರನ್ನು ಆಕರ್ಷಿಸಿತು.
ರಾಜ್ಯೋತ್ಸವ ಪ್ರಶಸ್ತಿ
ಸೇನಾಧಿಕಾರಿಯಾಗಿ ನಂದ ಅವರ ಸಾಧನೆ ಗಳನ್ನು ಸರಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಥಮ ಸೇನಾಧಿಕಾರಿ ಎಂಬುದು ನಂದ ಅವರ ಹೆಗ್ಗಳಿಕೆ. ಲೆ| ಜ| ಬಿ.ಸಿ. ನಂದ ಮಹರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದವರು. ಸಿಪಾಯಿಗಳು, ಸೇನಾಧಿಕಾರಿಗಳ ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದರು.
ಅರಣ್ಯಾಧಿಕಾರಿಯ ಪುತ್ರ
ನಂದ 1931ರ ಮೇ 12ರಂದು ಮಡಿಕೇರಿಯಲ್ಲಿ ಜನಿಸಿ ದ್ದರು. ಪ್ರಸಿದ್ಧ ಅರಣ್ಯಾಧಿಕಾರಿ ಬಿದ್ದಂಡ ಚೆಂಗಪ್ಪ ಮತ್ತು ಬೊಳ್ಳವ್ವ ದಂಪತಿ ಅವರ ಹೆತ್ತವರು. ತಾಯಿ ಬೊಳ್ಳವ್ವ ಅವರು ಸ್ವತಂತ್ರ ಭಾರತದ ಪ್ರಥಮ ಮಹಾದಂಡ ನಾಯಕ ಫೀ| ಮಾ| ಕೆ.ಎಂ. ಕಾರ್ಯಪ್ಪ ಅವರ ಸಹೋದರಿ. ಪ್ರಾಥಮಿಕ ಶಿಕ್ಷಣವನ್ನು ಮಡಿಕೆೇರಿ ಸೈಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ, ಉನ್ನತ ಶಿಕ್ಷಣವನ್ನು ಮದ್ರಾಸ್ ಮತ್ತು ಡೆಹ್ರಾಡೂನ್‌ನಲ್ಲಿ ಪಡೆದು 1949ರಲ್ಲಿ ಐಎಂಎಗೆ ಸೇರ್ಪಡೆಗೊಂಡರು. 1951ರ ಜ. 10ರಂದು ಭಾರತೀಯ ಸೇನೆಯ ಭಾಗವಾದರು.
ಅರಣ್ಯ ಉಳಿದರೆ ದೇಶ
ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಬಿ.ಸಿ. ನಂದ ಅರಣ್ಯ ಸಂಪತ್ತು ಉಳದರೆ ಮಾತ್ರ ದೇಶ ಉಳಿದೀತು ಎಂದು ದೃಢವಾಗಿ ನಂಬಿದ್ದರು. ಸ್ವತಂತ್ರ ಭಾರತದ ಉದ್ದೇಶ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಮತ್ತು ನವೀನ ಯೋಜನೆಗಳಳನ್ನು ರೂಪಿಸಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳುತ್ತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.