ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸಿ
Team Udayavani, Aug 30, 2019, 5:19 AM IST
ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ನಾನಾ ಕಾರಣದಿಂದಾಗಿ ಪರಿಸರ ಹಾಳಾಗುತ್ತಿದೆ. ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಸ್ವತ್ಛ ಪರಿಸರ ಹಾಗೂ ಜಲ ಮೂಲಗಳು ಉಳಿಯಬೇಕಾದರೆ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವುದು ಅನಿವಾರ್ಯ ಎಂದು ಪತ್ರಕರ್ತ ಹಾಗೂ ಕೊಡಗು ಪ್ರಸ್‌ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ಹೇಳಿದ್ದಾರೆ.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್‌ನಿಂದ ಬುಧವಾರ ನಡೆದ ಪರಿಸರ ಸ್ನೇಹಿ ಗಣೇಶ ಹಬ್ಬ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಹಾಗೂ ರಾಸಾಯನಿಕ ಬಣ್ಣದಿಂದ ತಯಾರಿಸಿ ರುವ ಗೌರಿ ಗಣೇಶ ಮೂರ್ತಿ ಗಳನ್ನು ನದಿ, ಹೊಳೆ, ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲ ಗಳಿಗೆ ವಿಸರ್ಜಿಸಿದಾಗ ನೀರು ಕಲುಷಿತ ಗೊಳ್ಳುತ್ತದೆ. ಇದನ್ನು ತಪ್ಪಿಸಲು ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಸರ್ಜಿಸ ಬೇಕು. ಈ ಮೂಲಕ ಗಣೇಶ ಚತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿಸಲು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದರು.
ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಬರಬೇಕು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಗಣೇಶ ಮೂರ್ತಿಗಳ ವಿಸರ್ಜನೆ ಯಿಂದಾಗಿ ಜಲಮೂಲಗಳಿಗೆ ಹಾನಿಯಾಗುತ್ತಿದೆ. ಇದರಿಂದ ಕಳೆದೆರಡು ವರ್ಷದಿಂದ ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸಲಾಗುತ್ತಿದ್ದರೂ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟ ಗಣೇಶ ಮೂರ್ತಿಯನ್ನು ನದಿ, ಹೊಳೆಯಲ್ಲಿ ವಿಸರ್ಜನೆ ಮಾಡಬಾರದರು. ಗಣೇಶನ ಮೂರ್ತಿ ಆಕರ್ಷಣೆಯಾಗಿರಲೆಂದು ವಿವಿಧ ಬಣ್ಣಗಳನ್ನು ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇದರಿಂದ ವಿಷಕಾರಿ ಅಂಶಗಳು ಜಲ ಮೂಲಕ್ಕೆ ಸೇರುತ್ತದೆ. ಈ ನೀರನ್ನು ನಾವು ಕುಡಿದರೆ ರೋಗ ಹರಡುವುದು ಖಚಿತವಾಗಿದೆ. ಆದ್ದರಿಂದ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಪ್ರಾಕೃತಿಕ ಬಣ್ಣ ಬಳಸಿ ಅದನ್ನು ವಿಸರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿ ರೇವತಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬದ ಹೆಸರಿನಲ್ಲಿ ಅಲಂಕಾರಿಕ ಗಣಪತಿ ಮೂರ್ತಿಗಳನ್ನು ತಯಾರಿಸಿ ನೀರನ್ನು ಕಲುಷಿತ ಮಾಡಲಾಗುತ್ತಿದೆ. ಇದು ಪರಿಸರಕ್ಕೆ ಮಾರಕವಾಗಿದ್ದು, ಮಕ್ಕಳು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಶಾಲೆಯ ಶಿಕ್ಷಕರಾದ ವತ್ಸಲ, ಜಾನಕಿ, ಇಕೋ ಕ್ಲಬ್ ಸಂಚಾಲಕರು ತೇಜಸ್ವಿನಿ, ಇಂದ್ರಾಣಿ, ಕಾವ್ಯ, ನಿತ್ಯ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿಗಳು ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಮಾಡಿದ್ದರು. ಶಾಲೆಯ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಕಲ್ಪನೆಯಿಂದ ಮಾಡಿದ್ದ ಬಗೆ ಬಗೆಯ ಗಣಪತಿ ಮೂರ್ತಿಗಳು ಗಮನ ಸೆಳೆದವು. ಯಾವುದೇ ರಾಸಾಯನಿಕ ಬಣ್ಣ ಬಳಸದೆ ಪ್ರಾಕೃತಿಕ ದತ್ತವಾದ ಬಣ್ಣವನ್ನು ಹಚ್ಚಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಎಂಬ ಸಂದೇಶ ಸಾರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.