ಅಧಿಕಾರ ಹೋಗುತ್ತದೆ ಎನ್ನುವುದು ಮೌಡ್ಯ: ಎಚ್‌ಡಿಕೆ
Team Udayavani, Jul 21, 2018, 12:37 PM IST
ಮಡಿಕೇರಿ: ರಾಜ್ಯದ ಮುಖ್ಯಮಂತ್ರಿಯೊಬ್ಬರು ಸುಮಾರು 19 ವರ್ಷಗಳ ಬಳಿಕ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಲಕಾವೇರಿ ಭೇಟಿಯಿಂದ ಅಧಿಕಾರ ಹೋಗುತ್ತದೆ ಎನ್ನುವ ಮೌಡ್ಯದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಇದೇ ವೇಳೆ ಹೇಳಿದ್ದಾರೆ.
ಹಲವು ವರ್ಷಗಳ ಬಳಿಕ ಕಾವೇರಿ ಮಾತೆಯ ಅನುಗ್ರಹದಿಂದ ಕಾವೇರಿ ಭಾಗದ 4 ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕ ಹಾಗೂ ತಮಿಳುನಾಡು ನಡುವಿನ ನೀರಿನ ಸಮಸ್ಯೆಗೆ ಕಾವೇರಿ ತಾಯಿಯೇ ಪರಿಹಾರ ನೀಡಿದ್ದಾಳೆ. ನ್ಯಾಯಾಲಯದ ತೀರ್ಪಿಗಿಂತ ಕಾವೇರಿ ತಾಯಿ ಕೊಡುವ ತೀರ್ಪು ಸಮಾಧಾನ ಕರವಾದುದು. ಈ ಹಿನ್ನೆಲೆಯಲ್ಲಿ ಕಾವೇರಿ ಸನ್ನಿಧಾನಕ್ಕೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ತಲಕಾವೇರಿಯಲ್ಲಿ ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ತಲಕಾವೇರಿಗೆ ಬಂದು ಅಧಿಕಾರ ಕಳೆದುಕೊಂಡಿದ್ದರು ಎಂದು ಬಿಂಬಿಸಿರುವುದನ್ನು ನಾನು ನೋಡಿದ್ದೇನೆ. ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ. ಕಾಕತಾಳಿಯವಾಗಿ ಏನಾದರೂ ನಡೆದರೆ ಅದನ್ನೇ ನಿಜವೆಂದು ಭಾವಿಸಬಾರದು. ಮೂಢನಂಬಿಕೆಗಳು ನಮ್ಮದೇ ಸೃಷ್ಟಿ. ನಾಡಿನ ಜನತೆಗೆ ಸುಭಿಕ್ಷೆ ನೀಡುವಂತೆ ಪ್ರಾರ್ಥಿ ಸಲು ಇಲ್ಲಿಗೆ ಬಂದಿದ್ದೇನೆ. ನಾಲ್ಕು ಜಲಾಶಯಗಳಿಗೂ ತೆರಳಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಯಲ್ಲಿ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಪತ್ನಿ ಅನಿತಾ ಕುಮಾರಸ್ವಾಮಿ, ರೇಷ್ಮೆ ಸಚಿವ ಸಾ.ರಾ. ಮಹೇಶ್, ಶಾಸಕ ಕೆ.ಜಿ. ಬೋಪಯ್ಯ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಜತೆಗಿದ್ದರು.
ಶೀರೂರು ಶ್ರೀಗಳ ಸಾವು: ವಿಚಾರಣೆ ಹಂತದಲ್ಲಿ
ಶೀರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭ ನಾನು ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಧರ್ಮ ಕಾಪಾಡುತ್ತದೆ
ಉತ್ತಮ ಮಳೆಯಿಂದಾಗಿ ನಾಡಿನ ನದಿಗಳು ತುಂಬಿ ಹರಿಯುತ್ತಿದ್ದು, ಮುಖ್ಯಮಂತ್ರಿಗಳು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಚಾಮುಂಡಿ ಬೆಟ್ಟ ಮತ್ತು ಎಲ್ಲ ಜಲಶಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಲಾಗುವುದು ಎಂದು ತಲಕಾವೇರಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.