ಕಾಫಿ ಬೆಳೆಗಾರರಿಗೆ ವಂಚನೆ : ಸೂದನ ಈರಪ್ಪ ಆರೋಪ
Team Udayavani, Mar 13, 2017, 4:18 PM IST
ಮಡಿಕೇರಿ: ಮುಕ್ತ ಮಾರುಕಟ್ಟೆಯಾದ ನಂತರ ಕಾಫಿಯ ದರ ಹೆಚ್ಚಾದರೂ ಕೆಲವು ವ್ಯಾಪಾರಿಗಳು ನಾನಾ ವಿಧದಲ್ಲಿ ಬೆಳೆಗಾರರನ್ನು ವಂಚಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ನಂತರವಂತೂ ಈ ಬೆಳವಣಿಗೆ ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬೆಳೆಗಾರ ಹಾಗೂ ಸಮಾಜ ಸೇವಕರಾದ ಸೂದನ ಈರಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೆಲವು ವರ್ಷಗಳಿಂದ ಕಾಫಿಗೆ “ಔಟ್ ಟರ್ನ್’ ಮತ್ತು “ಮಾಕ್ಸರ್’ ಎಂಬ ಆಂಗ್ಲ ಪದಗಳು ಹುಟ್ಟಿಕೊಂಡಿದ್ದು, ಈ ಎರಡು ಮಾರಕ ಶಬ್ದಗಳ ಬಗ್ಗೆ ಶೇ.90ರಷ್ಟು ಮುಗ್ಧ ಬೆಳೆಗಾರರಿಗೆ ಮಾಹಿತಿ ಇಲ್ಲ. ಈ ಎರಡು ಪದಗಳೇ ಬೆಳೆಗಾರರನ್ನು ವಂಚಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ವ್ಯಾಪಾರಿಗಳು ಕಾಫಿಯನ್ನು ಪರೀಕ್ಷಿಸುತ್ತಾರೆ ಮತ್ತು ದರವನ್ನು ನಿಗದಿ ಮಾಡುತ್ತಾರೆ. ಮನೆಯಲ್ಲಿ ಔಟ್‌ಟರ್ನ್ ಯಂತ್ರದಲ್ಲಿ ಕಾಫಿಯನ್ನು ಪರೀಕ್ಷಿಸಿದಾಗ 28 ಕೆಜಿ ತೂಗುವ ಕಾಫಿ ವ್ಯಾಪಾರಿಗಳ ಔಟ್ ಟರ್ನ್ ನಲ್ಲಿ 27 ಕೆಜಿ ಮಾತ್ರ ತೂಗುತ್ತದೆ. ಇದರಿಂದ 1 ಕೆಜಿ ಕಾಫಿ ಬೇಳೆಯ ಬೆಲೆ ರೂ.135ರ ಪ್ರಕಾರ ಬೆಳೆಗಾರರಿಗೆ ನಷ್ಟ ಉಂಟಾಗುತ್ತದೆ.
ತುರ್ತು ಸಂದರ್ಭಗಳಲ್ಲಿ ಬಡ, ಮಧ್ಯಮ ವರ್ಗದ ಬೆಳೆಗಾರರು ಕಾಫಿ ಮಾರಲು ಹೋದರೆ ಆ ಕಾಫಿಗೆ ಔಟ್ ಟರ್ನ್ ಬೇಡ ಎಂದು ವ್ಯಾಪಾರಿಗಳು ಸಮಜಾಯಿಷಿಕೆ ನೀಡಿ ದರ ನಿಗದಿಪಡಿಸುತ್ತಾರೆ. ಈ ರೀತಿ ಮಾಡುವುದರಿಂದಲೂ ಬೆಳೆಗಾರರಿಗೆ ನಷ್ಟವಾಗುತ್ತಿದೆ.
10-20 ಚೀಲ ಕಾಫಿ ಇದ್ದರೆ ಮಾತ್ರ ವ್ಯಾಪಾರಿಗಳು ಔಟ್ ಟರ್ನ್ ನೋಡುವ ಪರಿಸ್ಥಿತಿ ಇದೆ. ಒಂದು ಚೀಲ ಕಾಫಿಯ ಮಾರುಕಟ್ಟೆದರ ಅಂದಾಜು 3,800 ರೂ. ಇದ್ದರೆ ವ್ಯಾಪಾರಿಗಳು ನೀಡುವ ದರ 3,600-3,650 ಮಾತ್ರ. ಕಾಫಿ ನೀಡಿದ ತತ್‌ಕ್ಷಣ ಹಣ ಬೇಕು ಎಂದು ಬೆಳೆಗಾರರು ಕೇಳಿದರೆ ಚೀಲವೊಂದಕ್ಕೆ ರೂ.50 ಕಡಿಮೆ ನೀಡುವುದಾಗಿ ಅಥವಾ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳುತ್ತಾರೆ.
ವರ್ಷ ಪೂರ್ತಿ ದುಡಿದು ಹಣದ ತುರ್ತು ಅಗತ್ಯ ಇರುವ ಬೆಳೆಗಾರರು ವ್ಯಾಪಾರಿಗಳ ಮುಂದೆ ಹಣಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿ ಇದೆ. ಔಟ್ ಟರ್ನ್ ಮತ್ತು ಮಾಕ್ಸರ್ ಕುರಿತು ಕಾಫಿ ಮಂಡಳಿ ಬೆಳೆಗಾರರಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಹಾಗೂ ಬೆಳೆಗಾರರ ಮೇಲೆ ನಿಯಂತ್ರಣವಿಲ್ಲವೆಂದು ಸೂದನ ಈರಪ್ಪ ಆರೋಪಿಸಿದ್ದಾರೆ.
ಕೊಡಗು ಕಾಫಿ ಬೆಳೆಗಾರರ ಸಹಾಕಾರ ಸಂಘ ಕೂಡ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಣದ ಅಗತ್ಯ ಇರುವ ಬೆಳೆಗಾರರಿಂದ ಕಾಫಿ ಖರೀದಿಸಿ ಮುಂಗಡ ಹಣ ನೀಡಿ, ಅವರುಗಳ ಕಾಫಿಯನ್ನು ಶೇಖರಣೆ ಮಾಡುವ ಕೆಲಸವನ್ನು ಕಾಫಿ ಬೆಳೆಗಾರರ ಸಹಕಾರ ಸಂಘ ಮಾಡಬೇಕು ಮತ್ತು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.