ಒತ್ತುವರಿ ಜಾಗ ಸುಪರ್ದಿಗೆ ಪಡೆಯಿರಿ: ಡಿಸಿ
Team Udayavani, Aug 31, 2017, 7:00 AM IST
ಮಡಿಕೇರಿ: ಸಾಮಾಜಿಕ ಭದ್ರತೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ಭಾಗ್ಯ ಯೋಜನೆಯು ಜಿಲ್ಲೆಯಲ್ಲಿ ಕುಂಠಿತವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜ, ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ಜಾಗ ಒತ್ತುವರಿಯಾಗಿದ್ದು, ಅದನ್ನು ತುರ್ತಾಗಿ ಸರ್ವೆ ಮಾಡಿಸಿ ಸುಪರ್ದಿಗೆ ತೆಗೆದು ಕೊಂಡು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು.
ಜಿಲ್ಲೆಯಲ್ಲಿ ಒತ್ತುವರಿಯಾಗಿರುವಂತಹ ಜಾಗವನ್ನು ವಿವಿಧ ಉದ್ದೇಶಗಳಿಗೆ ನಿವೇಶನ, ಕಸ ವಿಲೇವಾರಿ, ಸ್ಮಶಾನ ಇವುಗಳಿಗೆ ಬಳಸುವಂತೆ ಸೂಚನೆ ನೀಡಿದರು. ಚೆಟ್ಟಳ್ಳಿಯ ಕಸ ವಿಲೇವಾರಿ ಜಾಗದ ಸರ್ವೆ ಕಾರ್ಯವು ಪೂರ್ಣಗೊಂಡಿದೆ ಎಂದು ಇದೇ ವೇಳೆ ಸೋಮವಾರಪೇಟೆ ತಹಶೀಲ್ದಾರರು ಮಾಹಿತಿ ನೀಡಿದರು.
ಒತ್ತುವರಿ ತೆರವು ಬಗ್ಗೆ ಸಭೆಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟು 130 ಎಕರೆ ಜಾಗವು ಒತ್ತುವರಿಯಾಗಿದ್ದು, ಸರ್ವೆ ಕಾರ್ಯವು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಸರ್ವೆ ಕಾರ್ಯವನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತಾಗಲು ಸರ್ವೆ ಅಧಿಕಾರಿಗಳು, ಕಂದಾಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಸರಕಾರ ಸುಪರ್ದಿಗೆ ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಬಾಕಿ ಇರುವ ಜಾಗದ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಿ ಕ್ರಮಕೈಗೊಳ್ಳುವಂತೆ ಕಂದಾಯಾ ಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಆಡಳಿತದಲ್ಲಿ ಎಲ್ಲ ಇಲಾಖೆಗಳಿಗೆ ಜಾಗ ಗುರುತಿ ಸುವುದು ಕಂದಾಯಾಧಿಕಾರಿಗಳ ಕೆಲಸ ಎಂದು ಕಿವಿಮಾತು ಹೇಳಿದರು. ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಜಮೀನಿನ ಆವಶ್ಯಕತೆ ಇದೆ. ಇಲ್ಲದಿದ್ದರೆ ಪ್ರಗತಿ ಕುಂಠಿತವಾಗುತ್ತದೆ. ಅಂಬೇಡ್ಕರ್ ಭವನ, ಅಂಗನವಾಡಿಗಳ ನಿರ್ಮಾಣ ಕಾರ್ಯವು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದರು.
ಮೂರು ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಂಗನವಾಡಿಗಳಿಗೆ ನಿವೇಶನ ಆವಶ್ಯಕತೆ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆಯಲ್ಲಿ 8 ಕಡೆ ನಿವೇಶನದ ಆವಶ್ಯಕತೆ ಇದೆ. ಶನಿವಾರಸಂತೆ ಹೋಬಳಿಯಲ್ಲಿ 1, ಕೊಡ್ಲಿಪೇಟೆಯಲ್ಲಿ 2, ಕುಶಾಲನಗರದಲ್ಲಿ 1 ಕಡೆ, ವಿರಾಜಪೇಟೆ ತಾಲೂಕಿನಲ್ಲಿ 15 ಕಡೆ ನಿವೇಶನದ ಆವಶ್ಯಕತೆ ಇದೆ ಮತ್ತು ಮಡಿಕೇರಿ ತಾಲೂಕಿನಲ್ಲಿ 12 ಕಡೆ ನಿವೇಶನದ ಆವಶ್ಯಕತೆ ಇದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಪ್ರತಿಕ್ರಿಯಿಸಿ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಒಟ್ಟಾಗಿ ಸೂಕ್ತ ಜಾಗದಲ್ಲಿ ಮತ್ತು ಅವಶ್ಯವಾದ ಜಾಗ ಗುರುತಿಸುವಂತೆ ತಾಕೀತು ಮಾಡಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪಾಲಿಬೆಟ್ಟದಲ್ಲಿ 41 ಸೆಂಟ್ ಜಾಗ ಗುರುತಿಸಿದ್ದು ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 41 ಸೆಂಟ್ ಜಾಗ ಗುರುತಿಸಿದ್ದು, ಶೀಘ್ರವಾಗಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತ ಸಂಪರ್ಕ ಕೇಂದ್ರಗಳಿಗೆ ಹೋಬಳಿ ಮಟ್ಟದಲ್ಲಿ ಅವಶ್ಯವಿರುವ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅಪರ ಜಿಲ್ಲಾಧಿಕಾರಿ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು. ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕ್ರಮ ಹಾಗೂ ಲಭ್ಯವಿರುವ ಜಾಗವನ್ನು ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗೆ ಅಪರ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸಭೆಯಲ್ಲಿ ಮಡಿಕೇರಿ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಕಂದಾಯಾಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.