ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು: ಕಾಂಗ್ರೆಸ್ ವಿಶ್ವಾಸ
Team Udayavani, Aug 13, 2017, 7:45 AM IST
ಮಡಿಕೇರಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ತನ್ನನ್ನು ಘೋಷಿಸಿದ್ದು, ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ತಾನು 2018ರಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತವೆಂದು ಅಭ್ಯರ್ಥಿ ಎಸ್.ಪಿ. ದಿನೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೈಋತ್ಯ ಪದವೀದರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ದಾವಣಗೆರೆ ಭಾಗದಲ್ಲಿ ಈಗಾಗಲೇ ಮತದಾರರ ಮನವೊಲಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು. ಕಳೆದ ಬಾರಿಯ ಚುನಾವಣೆಯಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ತಮಗೆ ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದರು.
ನೈಋತ್ಯ ಪದವೀಧರ ಕ್ಷೇತ್ರದಲ್ಲಿ 62 ಸಾವಿರ ಮತದಾರರಿದ್ದರಾದರೂ ನ್ಯಾಯಾಲಯದ ಆದೇಶದಂತೆ 2018ರ ಚುನಾವಣೆ ವೇಳೆಗೆ ಹೊಸದಾಗಿ ಮತದಾರರ ಹೆಸರು ನೋಂದಣಿಯಾಗಬೇಕಾಗಿದೆ. ಈ ಪ್ರಕ್ರಿಯೆ ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ನೋಂದಣಿ ಕಾರ್ಯದಲ್ಲಿ ಕಾಂಗ್ರೆಸ್ ಸಂಪೂ ರ್ಣವಾಗಿ ತೊಡಗಿಸಿಕೊಳ್ಳಲಿದೆ. ತಾವು ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಮತದಾರರ ವಿಶ್ವಾಸ ಪಡೆದು ಗೆಲುವನ್ನು ಸುಲಭ ಮಾಡಿಕೊಳ್ಳುವುದಾಗಿ ಎಸ್.ಪಿ. ದಿನೇಶ್ ತಿಳಿಸಿದರು.
ಶಿಕ್ಷಕರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗಣೇಶ್ ಕಾರ್ಣಿಕ್ ಅವರಿಗೆ ಸ್ಪರ್ಧೆ ನೀಡಿದ್ದ ತಮಗೆ ಈ ಬಾರಿ ಕೂಡ ಹೈಕಮಾಂಡ್ ಸ್ಪರ್ಧಿಸಲು ಅವಕಾಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಿಂದ ಗೆಲುವಿನ ಮತಗಳನ್ನು ಪಡೆದಿರುವ ಡಿ.ಎಚ್. ಶಂಕರಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರುಗಳು ಕೇವಲ ರಾಜಕೀಯ ಮಾಡುವುದಕ್ಕಾಗಿ ಜಿಲ್ಲೆಗೆ ಆಗಮಿಸುತ್ತಾರೆಯೆ ಹೊರತು ಮತದಾರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು.
ಶಿಕ್ಷಕರು ಹಾಗೂ ಸಿಬಂದಿಗಳ ಪರವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಏಳನೇ ವೇತನ ಆಯೋಗವನ್ನು ರಚಿಸಿದೆ ಮತ್ತು ವೇತನ ತಾರತಮ್ಯವನ್ನು ನಿವಾರಿಸಿದೆ. ಸರಕಾರದ ಋಣವನ್ನು ತೀರಿಸುವ ಕಾರ್ಯವನ್ನು ಈ ಬಾರಿ ಮತದಾರರು ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಅಥವಾ ಜೆಡಿಎಸ್ ಸರಕಾರಗಳು ಶಿಕ್ಷಕರ ಪರವಾಗಿ ಯಾವುದೇ ಕಾರ್ಯವನ್ನು ಮಾಡಿಲ್ಲವೆಂದು ಟೀಕಿಸಿದ ಕೆ.ಕೆ. ಮಂಜುನಾಥ್ ಕುಮಾರ್, ಕಾಂಗ್ರೆಸ್ ಸರಕಾರ ನೀಡಿ ರುವ ಕೊಡುಗೆಗಳನ್ನು ಮರೆ ಮಾಚಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದ ತಮಗೆ ಈ ಬಾರಿ ಜಯ ಸಿಗಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮುಕ್ಕಾಟಿರ ಶಿವುಮಾದಪ್ಪ ಮಾತನಾಡಿ, 2018ರಲ್ಲಿ ನಡೆಯುವ ನೈಋತ್ಯ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದ ಜಿಲ್ಲಾ ಸಮಿತಿ ಈಗಿನಿಂದಲೇ ಕಾರ್ಯಪ್ರವೃತ್ತವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.