ನಿರಾಶ್ರಿತರ ಕೇಂದ್ರದಲ್ಲಿ ಬಕ್ರೀದ್ ಆಚರಣೆ
Team Udayavani, Aug 23, 2018, 6:00 AM IST
ಸೋಮವಾರಪೇಟೆ: ಸುಂಟಿಕೊಪ್ಪದ ಖತೀಜಾ ಉಮ್ಮಾ ಅರೇಬಿಕ್ ಮದ್ರಸಾದಲ್ಲಿ ಬುಧವಾರ ನಡೆದ ಬಕ್ರೀದ್ ಆಚರಣೆ ವಿಶೇಷ ಹಾಗೂ ಅನುಕರಣೀಯವಾಗಿತ್ತು.
ಸುಂಟಿಕೊಪ್ಪದ ಅರೇಬಿಕ್ ಮದ್ರಸಾ ವ್ಯಾಪ್ತಿಯ ಬಹುತೇಕ ಮುಸ್ಲಿಂ ಕುಟುಂಬಗಳು ಮಕ್ಕಂದೂರು, ಹಾಲೇರಿ, ಮುಕ್ಕೊಡ್ಲು, ಅಕ್ಕಿಹೊಳೆ ಭಾಗದ ನೆರೆ ಸಂತ್ರಸ್ತರೊಂದಿಗೆ ಸಹ ಭೋಜನ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಬಕ್ರೀದ್ ಆಚರಿಸಿಕೊಂಡರು.
ಕೊಡಗು ಜಿಲ್ಲೆಯ ಕೆಲವು ಹಳ್ಳಿಗಳು ನೆರೆಹಾನಿಯಿಂದ ಕೊಚ್ಚಿ ಹೋದ್ದರಿಂದ ಬಹುತೇಕರು ಮನೆ, ಆಸ್ತಿ ಸೇರಿದಂತೆ ಎಲ್ಲವನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆ ಇರುವಾಗ ಸಡಗರ ಸಂಭ್ರಮದಿಂದ ಬಕ್ರಿದ್ ಆಚರಣೆ ಸರಿಯಲ್ಲ ಎಂಬುದನ್ನು ಮನಗಂಡ ಅರೇಬಿಕ್ ಮದ್ರಸಾ ಸಮಿತಿಯು ಸರಳವಾಗಿ ಬಕ್ರಿದ್ ಆಚರಣೆಗೆ ತೀರ್ಮಾನಿಸಿ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕಷ್ಟೇ ಹಬ್ಬ ಸೀಮಿತಗೊಳಿಸಿತ್ತು.
ನಿರಾಶ್ರಿತರೊಂದಿಗೆ ಬಕ್ರಿದ್
ಮದ್ರಸಾದ ಉಸ್ತುವಾರಿಯಲ್ಲಿ ನಡೆಯುತ್ತಿರುವ ನಿರಾಶ್ರಿತರ ಶಿಬಿರದಲ್ಲಿ 575 ಮಂದಿ ಆಶ್ರಯ ಪಡೆದಿದ್ದು ಇಲ್ಲಿ ಇರುವ ಎಲ್ಲರಿಗೂ ಮದ್ರಸಾದಿಂದಲೇ ಊಟ ಹಾಗೂ ಇತರೆ ಸೌಲಭ್ಯ ಮಾಡಿಕೊಡಲಾಗಿದೆ. ವಿಶೇಷವೆಂದರೆ ಈ ನಿರಾಶ್ರಿತರ ಶಿಬಿರದಲ್ಲಿ ಕೊಡವರು ಸೇರಿದಂತೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಕುಟುಂಬದವರು ಇದ್ದಾರೆ.
ಬುಧವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯ ನಂತರ ನಿರಾಶ್ರಿಯರ ಶಿಬಿರದಲ್ಲೇ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲ ಧರ್ಮ, ಮತ, ಪಂಥದವರು ಒಟ್ಟಾಗಿ ಸಹ ಭೋಜನಾ ಮಾಡಿ, ಬಕ್ರಿದ್ ಸಾಮರಸ್ಯದ ಸಂದೇಶ ಹಂಚಿಕೊಂಡರು.
ಪ್ರಕೃತಿ ವಿಕೋಪಕ್ಕೆ ಕೊಡಗು ತುತ್ತಾಗಿರುವುದರಿಂದ ಈ ವರ್ಷ ಬಕ್ರಿದ್ ಹಬ್ಬ ಸರಳವಾಗಿ ಪ್ರಾರ್ಥನೆ ಮೂಲಕ ಆಚರಿಸಲು ಮದ್ರಸಾ ಸಮಿತಿ ತೀರ್ಮಾನ ಮಾಡಿತ್ತು. ನಮ್ಮ ಮನೆಗೆ ಬಂಧುಗಳನ್ನು ಕರೆಯಲಿಲ್ಲ. ನೆರೆ ಸಂತ್ರಸ್ತರೇ ನಮ್ಮ ಬಂಧುಗಳಾಗಿದ್ದರು. ಯಾರ ಮನೆಯಲ್ಲೂ ಸಂಭ್ರಮ ಇರಲಿಲ್ಲ. ಬಹುತೇಕ ಯುವಕರು ಇಲ್ಲೇ ಆಚರಣೆ ಮಾಡಿದ್ದಾರೆ. ಸಂಸಾರ ಬಿಟ್ಟು ಸಂತ್ರಸ್ತರೊಂದಿಗೆ ಹಬ್ಬ ಆಚರಿಸಿಕೊಂಡ ಖುಷಿ ಇದೆ. ನಮಗೆ ಯಾವುದೇ ಬೇಸರ ಇಲ್ಲ. ಕಳೆದೆಲ್ಲ ವರ್ಷಗಳಿಗಿಂತ ಈ ವರ್ಷದ ಹಬ್ಬದಾಚರಣೆ ಸದಾ ನಮ್ಮಲ್ಲಿ ಉಳಿದುಕೊಳ್ಳುತ್ತದೆ ಎಂದು ಶಿಬಿರದ ಉಸ್ತುವಾರಿ ಸಿ.ಎಂ. ಹಮೀದ್ ಮೌಲ್ವಿ ಹೇಳಿದರು.
ಶಿಬಿರದಲ್ಲಿ ನಮ್ಮನ್ನು ಕುಟುಂಬದ ಸದಸ್ಯರಿಗಿಂತ ಚೆನ್ನಾಗಿ ನೋಡಿಕೊಳುತ್ತಿದ್ದಾರೆ. ಬಕ್ರಿದ್ ಹಬ್ಬದಲ್ಲಿ ನಾವೂ ಭಾಗಿಯಾಗಿದ್ದೇವೆ ಎಂಬ ನೆಮ್ಮದಿ ಇದೆ. ನಮ್ಮ ನೋವಿಗೆ ಸ್ಪಂದಿಸಿ ಯಾವುದೇ ಸಂಭ್ರಮವಿಲ್ಲದೇ ಸರಳವಾಗಿ ಹಬ್ಬ ಆಚರಿಸಿಕೊಂಡಿರುವು ನಿಜಕ್ಕೂ ಅನುಕರಣೀಯ. ಅವರೆಲ್ಲರೂ ನಮ್ಮೊಂದಿಗೆ ಊಟ ಮಾಡಿದ್ದಾರೆ ಎಂದು ರವಿ ಹಾಲೇರಿ ಸಂತೋಷಪಟ್ಟರು.
ಚಿತ್ರ: ಎಚ್.ಫಕ್ರುದ್ದೀನ್
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.