ಕೊಡಗು: ಮತ್ತೆರಡು ಮೃತದೇಹ ಪತ್ತೆ
Team Udayavani, Aug 13, 2019, 5:32 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಶಾಂತವಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಹರಿವು ತಗ್ಗಿದೆ. ಇದೇ ವೇಳೆ ತೋರಾ ಗ್ರಾಮದಲ್ಲಿ ಆ. 9ರಂದು ಮಣಿಪಾರೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡ 8 ಮಂದಿಯಲ್ಲಿ ಓರ್ವ ಮಹಿಳೆಯ ಮೃತ ದೇಹ ಪತ್ತೆಯಾಗಿದ್ದರೆ ಮಡಿಕೇರಿ ಸಮೀಪ ಪರಂಬು ಪೈಸಾರಿಯಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತದಿಂದ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದು, ಸಾರ್ವಜನಿಕರು ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಶಾಲಾ ಕಾಲೇಜುಗಳಿಗೆ 2 ದಿನ ರಜೆ
ರಸ್ತೆ ಸಂಪರ್ಕ ಕಡಿತ ಮತ್ತು ಕೆಲವು ಶಾಲೆಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿರುವುದರಿಂದ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಆ.13 ಮತ್ತು 14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಕೆಲವು ರಸ್ತೆ ಸಂಚಾರಕ್ಕೆ ಮುಕ್ತ
ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಬೇತ್ರಿ ಸೇತುವೆಗೆ ಪ್ರವಾಹದ ಸಂದರ್ಭ ಮರ ಬಡಿದ ಪರಿಣಾಮ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್ ಸೇರಿದಂತೆ ಇತರ ವಾಹನಗಳು ಮಡಿಕೇರಿ-ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸಬಹುದಾಗಿದೆ.
ತೋರಾದಲ್ಲಿ ಶವ ಪತ್ತೆ
ವೀರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಆ. 9ರಂದು ಮಣಿಪಾರೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡ ಎಂಟು ಮಂದಿಯಲ್ಲಿ ಒರ್ವ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಪ್ರಭು ಎಂಬವರ ಪತ್ನಿ ಅನುಸೂಯ (45) ಅವರ ಮೃತದೇಹವನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ.
ಇನ್ನು ನಾಪತ್ತೆಯಾಗಿರುವ ಇತರ 7 ಮಂದಿಯ ಪತ್ತೆಗಾಗಿ ಎನ್‌ಡಿಆರ್‌ಎಫ್, ಪೊಲೀಸ್ ಹಾಗೂ ಸೇನಾ ಸಿಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಪೈಕಿ ಪ್ರಭು ಅವರ ತಾಯಿ ದೇವಕ್ಕಿ (65), ಮಕ್ಕಳಾದ ಅಮೃತಾ (13) ಮತ್ತು ಆದಿತ್ಯ (10) ಹಾಗೂ ಹರೀಶ್ ಎಂಬವರ ಕುಟುಂಬ ಸದಸ್ಯರಾದ ಶಂಕರ, ಅಪ್ಪು (55) ಮತ್ತು ಲೀಲಾ (45) ಹಾಗೂ ಗೃಹಿಣಿ ವೀಣಾ ಎಂಬವರು ಪತ್ತೆಕಾರ್ಯ ನಡೆಯುತ್ತಿದೆ.
ಸೋಮವಾರ ಬೆಳಗಿನಿಂದಲೇ 4 ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ನಾಪತ್ತೆಯಾದವರಿಗಾಗಿ ಸ್ಥಳದಲ್ಲಿ ಹುಡುಕಾಟ ನಡೆಸಲಾಯಿತು.ಮಧ್ಯಾಹ್ನದ ವೇಳೆಗೆ ಅನುಸೂಯ ಅವರ ಮೃತದೇಹ ಪತ್ತೆಯಾಗಿದ್ದು, ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮನೆಯೊಳಗೆ ಶವ
ಮಡಿಕೇರಿ ಸಮೀಪ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರವಾಹದ ಸಂದರ್ಭ ಈ ಮನೆ ಮುಳುಗಡೆಯಾಗಿದ್ದು, ಇದೀಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮನೆ ಯೊಳಗೆ ಮೃತ ದೇಹವಿರುವುದು ಕಂಡು ಬಂದಿದೆ. ಮೃತರನ್ನು ಕುಜ್ಞಣ್ಣ ಎಂದು ಗುರುತಿಸಲಾಗಿದೆ.
ಸಂತ್ರಸ್ತರಿಗೆ ಅಗತ್ಯ ನೆರವು
ಪರಿಹಾರ ಸಾಮಗ್ರಿಗಳನ್ನು ತಲುಪಿಸುವುದರೊಂದಿಗೆ ನಾವು ಕೂಡ ಸಂತ್ರಸ್ತರ ಜತೆಯಲ್ಲಿದ್ದೇವೆ ಎಂಬ ಭರವಸೆ ಮೂಡಿಸಲಾಗುತ್ತಿದೆ. ಕೇಂದ್ರದಿಂದಲೂ ಹೆಚ್ಚು ಪರಿಹಾರ ನೀಡುವಂತೆ ಕೋರಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ನಾವು ಆಗಮಿಸಿದ್ದೇವೆ. ಜಿಲ್ಲೆಗೆ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊಡಗಿನ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ರಾಜ್ಯ ಸರಕಾರದ ಜತೆಗೆ ಕೇಂದ್ರದಿಂದಲೂ ಹೆಚ್ಚು ಪರಿಹಾರ ದೊರೆಯುವ ವಿಶ್ವಾಸವಿದೆ. ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.