ಹುಲಿಯ ಆತಂಕವಿದ್ದರೆ ತಲೆಯ ಹಿಂಬದಿಗೆ ಮುಖವಾಡ ಧರಿಸಿ!
Team Udayavani, Jan 12, 2023, 7:25 AM IST
ಮಡಿಕೇರಿ: ಹುಲಿಗಳು ಎಂದಿಗೂ ಮನುಷ್ಯನ ಮೇಲೆ ಎದುರು ಭಾಗದಿಂದ ನೇರವಾಗಿ ದಾಳಿ ಮಾಡುವುದಿಲ್ಲ, ಬದಲಾಗಿ ಹಿಂಬದಿಯಿಂದ ದಾಳಿ ಮಾಡುತ್ತವೆ. ಇದರಿಂದ ಪಾರಾಗಲು ಪಶ್ಚಿಮ ಬಂಗಾಲದ ಸುಂದರ ಬನ್ ವ್ಯಾಪ್ತಿಯಲ್ಲಿ ತಲೆಯ ಹಿಂಭಾಗಕ್ಕೆ ಮುಖವಾಡವನ್ನು ಅಳವಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದ್ದು, ಇದು ಫಲಪ್ರದವಾಗಿದೆ. ಈ ಮಾದರಿ ಕೊಡಗು ಜಿಲ್ಲೆಯಲ್ಲೂ ಉಪಯುಕ್ತವಾಗಬಹುದು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಬ್ರಹ್ಮಪುತ್ರ ನದಿ ಸಮುದ್ರ ವನ್ನು ಸೇರುವ ಸುಂದರಬನ್‌ನಲ್ಲಿ ಹುಲಿ ದಾಳಿಗೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಅಲ್ಲಿ ಇದೀಗ ತಲೆಯ ಹಿಂಭಾಗಕ್ಕೆ ಅಳವಡಿಸುವ ಮುಖ ವಾಡ ಬಳಸಲಾಗುತ್ತಿದೆ. ಇದರಿಂದ ಹುಲಿ ದಾಳಿ ಪ್ರಕರಣ ಗಳು ಇಳಿಮುಖವಾಗಿದೆ. ಈ ಮುಖ ವಾಡ ಧರಿಸಿದಲ್ಲಿ, ದಾಳಿ ಮಾಡುವ ಹುಲಿಗೆ ವ್ಯಕ್ತಿಯ ಹಿಂಭಾಗದ ಮುಖವಾಡ ವ್ಯಕ್ತಿಯ ಮುಖ ದಂತೆ ಗೋಚರಿಸುವುದರಿಂದ ದಾಳಿಗೆ ಮುಂದಾಗುವುದಿಲ್ಲವೆಂದು ಗಮನ ಸೆಳೆದರು.
ಪ್ರಸ್ತಾವನೆ
ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹುಲಿಹಾವಳಿ ಹೆಚ್ಚಾಗುತ್ತಿದ್ದು, ಈಗಾಗಲೆ ಐವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರಬ್ಬರ್‌ನಿಂದ ಸಿದ್ಧಪಡಿಸಿದ ಮುಖವಾಡವನ್ನು ಬಳಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸರಕಾರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಮುತ್ತಣ್ಣ ಹೇಳಿದರು.
ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಸಾವನ್ನಪ್ಪಿದ ಪ್ರಕರಣಗಳನ್ನು ಗಮನಿಸಿದಾಗ ಬೆಳಗ್ಗಿನ ಜಾವ ಬಹಿರ್ದೆಸೆಗೆಂದು ತೆರಳಿದವರ ಮೇಲೆ ಹುಲಿ ಹಿಂಬದಿಯಿಂದ ದಾಳಿ ನಡೆಸಿ ಕೊಂದು ಹಾಕಿರುವುದು ಸ್ಪಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ಬಯಲು ಶೌಚ ಇಲ್ಲವೆಂದು ಹೇಳಿಕೊಳ್ಳಲಾಗುತ್ತದೆಯಾದರೂ ಸಾಕಷ್ಟು ಕಡೆಗಳಲ್ಲಿ ಇಂದಿಗೂ ಮನೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಶೌಚಾಲಯಗಳಿಲ್ಲದ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸರಕಾರ ಸೂಕ್ತ ಯೋಜನೆ ರೂಪಿಸುವುದು ಅವಶ್ಯಕ. ಬಯಲು ಶೌಚದಿಂದಾಗಿಯೇ ಸಾಕಷ್ಟು ಮಂದಿ ಹುಲಿ ದಾಳಿಗೆ ಸಿಲುಕುತ್ತಿರುವುದು ಗಮನಾರ್ಹ ಎಂದರು.
ದಾಳಿಯಿಂದ ಮೃತ ಹಸುಗಳನ್ನು ಹಾಗೇ ಬಿಡಿ
ಹುಲಿ ಜಾನುವಾರುಗಳನ್ನು ಕೊಂದು, ಒಂದಷ್ಟು ತಿಂದು ತೆರಳುತ್ತದೆ. ಹಸಿವಾದಾಗ ಮತ್ತೆ ಅದೇ ಸ್ಥಳಕ್ಕೆ ಉಳಿದ ಭಾಗವನ್ನು ಭಕ್ಷಿಸಲು ಬರುತ್ತದೆ.
ಈ ಹಿನ್ನೆಲೆಯಲ್ಲಿ ಸತ್ತ ಜಾನುವಾರುಗಳನ್ನು ಅಲ್ಲೇ ಬಿಟ್ಟು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಲ್ಲಿ, ಮತ್ತೆ ಹುಲಿ ಆ ಸ್ಥಳಕ್ಕೆ ಬಂದಾಗ ಸೆರೆ ಹಿಡಿಯಲು ಅನುಕೂಲವಾಗುತ್ತದೆ. ಸತ್ತ ಜಾನುವಾರನ್ನು ಮಾಲಕರು ಕೊಂಡೊಯ್ದಲ್ಲಿ ಹುಲಿಯು ಆಹಾರಕ್ಕಾಗಿ ಮತ್ತೆ ಬೇರೊಂದನ್ನು ಹುಡುಕಲು ಮುಂದಾಗುತ್ತದೆ ಎಂದು ತಿಳಿಸಿದರು.
ಹುಲಿ ಹಾವಳಿ ಹೆಚ್ಚಾಗಿರುವ ಪ್ರದೇಶದ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಸೂಕ್ತ ವಾಹನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು. ಪಾಳು ಬಿದ್ದ ಗದ್ದೆಗಳಲ್ಲಿ ಕಾಡು ಹಂದಿ ಸೇರಿಕೊಳ್ಳುವುದರಿಂದ ಅದನ್ನು ಬೇಟೆಯಾಡಲು ಹುಲಿಗಳು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗದ್ದೆಗಳಲ್ಲಿ, ಕಾಫಿ ತೋಟಗಳಲ್ಲಿ ಕಾಡು ಪೊದೆ ಬೆಳೆಯಲು ಅವಕಾಶ ಮಾಡಿಕೊಡಬಾರದೆಂದು ಕರ್ನಲ್ ಮುತ್ತಣ್ಣ ಸಲಹೆ ನೀಡಿದರು.
ಹುಲಿ ದಾಳಿಯಿಂದ ಜಾನುವಾರುಗಳು ಮೃತಪಟ್ಟಲ್ಲಿ ನಮ್ಮ ಸಂಸ್ಥೆಯಿಂದ ವರ್ಲ್ಡ್ ವೈಲ್ಡ್ ಲೈಫ್ ಫಂಡ್‌ನಿಂದ ಲಭ್ಯ ಅನುದಾನದಲ್ಲಿ ತತ್‌ಕ್ಷಣ 5 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ 78 ಮಂದಿಗೆ ಪರಿಹಾರ ಒದಗಿಸಲಾಗಿದೆ ಎಂದು ಎಂದು ಸಂಸ್ಥೆಯ ಪ್ರಮುಖರಾದ ರಾಯ್ ಬೋಪಣ್ಣ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.