ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಿ : ವಿವಿ ಮಲ್ಲಾಪುರ
ರಾಷ್ಟ್ರೀಯ ಮತದಾರರ ದಿನ
Team Udayavani, Jan 27, 2020, 5:54 AM IST
ಮಡಿಕೇರಿ: ಪ್ರಜಾಪ್ರಭುತ್ವ ಬಲಪಡಿಸಲು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನ ಮಾಡುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಹೇಳಿದ್ದಾರೆ.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರ$›ದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಮತ ದಾನದ ಮೂಲಕ ಸಾರ್ವಭೌಮತ್ವವನ್ನು ನೀಡಲಾಗಿದ್ದು, ಚುನಾವಣಾ ಸಂದಭದಲ್ಲಿ ತಮ್ಮ ಹಕ್ಕು ಚಲಾಯಿಸಬೇಕು. ಮತದಾನ ಕಾನೂನು ಬದ್ಧ ಹಕ್ಕಾಗಿದ್ದು, ಇದನ್ನು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿ ಪಡೆದು ಮತಹಕ್ಕು ಚಲಾಯಿಸಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಯಶಸ್ಸು ಯುವ ಜನರಲ್ಲಿದೆ. ಯುವ ಜನರು ಮತದಾನದ ಮಹತ್ವವನ್ನು ತಿಳಿಯಬೇಕು. ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹೇಳಲಾಗಿದ್ದು, ಮತದಾನದ ಮೂಲಕ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕರ್ತವ್ಯಗಳು ಅತ್ಯಂತ ಪ್ರಮುಖ ಜವಾಬ್ದಾರಿಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿ, ತಪ್ಪದೇ ಮತ ಚಲಾಯಿಸಬೇಕು. ಚುನಾವಣಾ ಪದ್ಧತಿಯಲ್ಲಿಯೂ ಸಾಕಷ್ಟು ಸುಧಾರಣೆಯಾಗಿದ್ದು, ವಿದ್ಯುನ್ಮಾನ ಮತಯಂತ್ರ, ಮತದಾನದ ಸಂದರ್ಭದಲ್ಲಿ ಮತ ಚಲಾಯಿಸಲು ನೋಟಾ ಹಾಗೆಯೇ ಮತವನ್ನು ಯಾರಿಗೆ ಚಲಾಯಿಸಲಾಗಿದೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ವಿವಿಪ್ಯಾಟ್ ಬಂದಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಮಾತನಾಡಿ ರಾಷ್ಟ್ರವು ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ್ದು, ದೇಶದ ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಯುವ ಜನತೆ ಮತದಾನದ ಮಹತ್ವನ್ನು ಅರಿತು, ಯಾವುದೇ ಆಮಿಷಕ್ಕೆ ಒಳಗಾಗದೆ ಮುಕ್ತ ಮತ್ತು ನಿರ್ಭೀತವಾಗಿ ಮತ ಚಲಾವಣೆ ಮಾಡಬೇಕು ಎಂದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಸ್ವಾಗತಿಸಿ ಮಾತನಾಡಿ ಸದೃಢ ಪ್ರಜಾಪ್ರಭುತ್ವಕ್ಕಾಗಿ ಚುನಾಚಣಾ ಸಾಕ್ಷರತೆ ಧ್ಯೇಯದೊಂದಿಗೆ ಈ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜನವರಿ, 25 ನ್ನು ದೇಶದಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭಿಮಸೇನ, ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೊ, ಚುನಾವಣಾ ತಹಶೀಲ್ದಾರ್ ಕುಸುಮ, ಚುನಾವಣಾ ಶಿರಸ್ತೆದಾರರಾದ ಪ್ರಕಾಶ್, ಪ್ರವಿಣ್ ಕುಮಾರ್, ಅನಿಲ್ ಕುಮಾರ್, ಸಿನೋಜ್ ಮತ್ತಿತರರು ಇದ್ದರು.ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿ ನಿಯರು ನಾಡಗೀತೆ ಹಾಡಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಚುನಾವಣಾ ಮಾಸ್ಟರ್ ತರಬೇತಿದಾರರಾದ ಕೆ.ಜೆ.ದಿವಾಕರ ನಿರೂಪಿಸಿ, ವಂದಿಸಿದರು.
ಸಮ್ಮಾನ
ಕಳೆದ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತದಾರರನ್ನು ಕಡ್ಡಾಯ ಹಾಗೂ ನೈತಿಕ ಮತದಾನ ಮಾಡುವಂತೆ ಪ್ರರೇಪಿಸಿದ ಜಿಲ್ಲಾ ರಾಯಭಾರಿಗಳಾದ ಎಸ್.ಕೆ.ಈಶ್ವರಿ, ಭಾಗೀರತಿ ಹುಲಿತಾಳ್ ಅವರನ್ನು ಸಮ್ಮಾನಿಸಲಾಯಿತು.
ಜಿಲ್ಲಾ ಮಟ್ಟದ ಉತ್ತಮ ಮತದಾರರ ಸಾಕ್ಷರತಾ ಸಂಘ ನಿರ್ವಹಿಸಿದ ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಕವಿತ, ಮೂರ್ನಾಡಿನ ಮಾರುತಿ ಪದವಿ ಪೂರ್ವ ಕಾಲೇಜಿನ ರಾಜಶ್ರೀ ಪಿ.ವಿ., ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪುಟ್ಟರಾಜು ಅವರನ್ನು ಸಮ್ಮಾನಿಸಲಾಯಿತು.
ಉತ್ತಮ ಬೂತ್ ಮಟ್ಟದ ಅಧಿಕಾರಿಗಳಾದ ನಗರದ ಎಫ್ಎಂಸಿ ಕಾಲೇಜು ಬಳಿಯ ಅಂಗನವಾಡಿ ಕಾರ್ಯಕರ್ತೆ ಚಿನ್ನಮ್ಮ, ಮಾಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧರ್ಮಲಿಂಗಂ, ಕಲ್ಯಂದೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುಮಾಮಣಿ ಎಸ್ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.