ಕಾನೂನು ರಕ್ಷಣೆಯಲ್ಲಿ ಪೊಲೀಸರ ಪಾತ್ರ ದೊಡ್ಡದು: ಜಿಲ್ಲಾಧಿಕಾರಿ
Team Udayavani, Oct 23, 2018, 6:45 AM IST
ಮಡಿಕೇರಿ: ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ನಿವೃತ್ತ ಪೊಲೀಸ್ ಅಧೀಕ್ಷಕರ ಪರವಾಗಿ ಅಪ್ಪಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಸುಂದರರಾಜ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಪೊಲೀಸ್ ನಿರೀಕ್ಷಕರಾದ ಮೇದಪ್ಪ, ಜಿಲ್ಲಾ ಶಸಸ್ತ್ರ ಪಡೆಯ ತಿಮ್ಮಪ್ಪಗೌಡ, ಇನ್ಸ್‌ಪೆಕ್ಟರ್‌ಗಳ ಪರವಾಗಿ ಭರತ್, ಮಾಜಿ ಸೈನಿಕರ ಪರವಾಗಿ ಮೇಜರ್(ನಿವೃತ್ತ) ಚಿಂಗಪ್ಪ, ಪಿಎಸ್‌ಐಗಳ ಪರವಾಗಿ ಷಣ್ಮುಗ, ನಗರಸಭೆ ಪರವಾಗಿ ಶ್ರೀಮತಿ ಬಂಗೇರಾ, ಮಾಧ್ಯಮಗಳ ಪರವಾಗಿ ಸವಿತಾ ರೈ, ಮಹಿಳಾ ಪೊಲೀಸರ ಪರವಾಗಿ ಅಚ್ಚಮ್ಮ, ಪೊಲೀಸರ ಪರವಾಗಿ ಮಹದೇವ, ಸಹಾಯಕ ಮುಖ್ಯ ಪೇದೆಗಳ ಪರವಾಗಿ ಅಶೋಕ, ನಿವೃತ್ತ ಮಹಿಳಾ ಪೊಲೀಸರ ಪರವಾಗಿ ಪಾರ್ವತಿ, ನಿವೃತ್ತ ಪೊಲೀಸರ ಪರವಾಗಿ ಕಾವೇರಪ್ಪ, ಇತರರು ಪೊಲೀಸ್ ಹುತಾತ್ಮರ ಪ್ರತಿಮೆಗೆ ಹೂಗುತ್ಛ ಅರ್ಪಿಸಿ ಗೌರವ ನಮನ ಸಮರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅವರು ಸಮಾಜದಲ್ಲಿ ಶಾಂತಿಗಾಗಿ ಪೊಲೀಸರು ದಿನದ 24 ಗಂಟೆಯೂ ಜಾಗೃತರಾಗಿ ಕೆಲಸ ನಿರ್ವಹಿಸುತ್ತಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ದೇಶದಲ್ಲಿ ನಾಗರಿಕರ ರಕ್ಷಣೆ ಮತ್ತು ಶಾಂತಿ ನೆಲೆಸುವಲ್ಲಿ ಪೊಲೀಸರ ಪಾತ್ರ ಮಹತ್ತರ ಎಂದು ಅವರು ಹೇಳಿದರು.
ಪೊಲೀಸರು ತಮ್ಮ ಆತ್ಮ ರಕ್ಷಣೆಯನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಾರೆ. ಪೊಲೀಸರ ಸೇವೆ ಸದಾ ಸ್ಮರಣೀಯ. ಕಠಿಣ ಸಂದರ್ಭದಲ್ಲಿ ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸುವಲ್ಲಿ ಪೊಲೀಸರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪೊಲೀಸರು ಶಾಂತಿ ಸುವ್ಯವಸ್ಥೆಗಾಗಿ ಸದಾ ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುತ್ತಾರೆ. ರಾಷ್ಟ್ರದ ಗಡಿ ಭಾಗದಲ್ಲಿ ಸೈನಿಕರು ಸದಾ ಕರ್ತವ್ಯ ನಿರ್ವಹಿಸುವಂತೆ, ದೇಶದ ಒಳಭಾಗದಲ್ಲಿ ಪೊಲೀಸರು ನಾಗರಿಕ ರಕ್ಷಣೆಗೆ ಶ್ರಮಿಸುತ್ತಾರೆ ಎಂದರು.ಪೊಲೀಸರು ಯಾವುದೇ ರೀತಿಯ ಮಾನಸಿಕ ಒತ್ತಡಗಳಿಗೆ ತುತ್ತಾಗದೆ, ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿರಬೇಕು. ಆತ್ಮಸ್ಥೆçರ್ಯವನ್ನು ಬೆಳೆಸಿಕೊಂಡು ಕೆಲಸದಲ್ಲಿ ನಿಷ್ಠೆ ತೋರಿಸಿದ್ದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಕಾಪಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅವರು ನುಡಿದರು.
ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಓದಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೇಶ ಹಾಗೂ ಸಮಾಜದ ರಕ್ಷಣೆ ಸಂದರ್ಭದಲ್ಲಿ ದೇಶದಲ್ಲಿ 414 ಮಂದಿ ಮತ್ತು ರಾಜ್ಯದಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಪೊಲೀಸ್ ಮುಖ್ಯ ಪೇದೆ ಸಿದ್ದೇಶ್ ಅವರ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು. ಅಂತೋಣಿ ಡಿಸೋಜಾ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.