ಕೊಡಗು ಜಲಪ್ರಳಯ; ಮೂವರ ಸಾವು, ಹಲವಾರು ಮಂದಿ ನಾಪತ್ತೆ?
Team Udayavani, Aug 17, 2018, 8:58 AM IST
ಮಡಿಕೇರಿ/ ಸೋಮವಾರಪೇಟೆ: ಮಳೆಯ ರೌದ್ರಾವತಾರಕ್ಕೆ ಮಡಿಕೇರಿ ಸಹಿತ ಕೊಡಗು ಜಿಲ್ಲೆ ಹಿಂದೆಂದೂ ಇಲ್ಲದಂತೆ ತತ್ತರಿಸಿ ಹೋಗಿದೆ. ಗುರುವಾರ ಕಾಟಕೇರಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟಿದ್ದಾರೆ. ಯಶವಂತ್, ವೆಂಕಟರಮಣ, ಪವನ್ ಮೃತಪಟ್ಟವರು. ಗಂಭೀರ ಗಾಯ ಗೊಂಡ ಯತೀಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೆ ಮತ್ತೆ ಗುಡ್ಡ ಕುಸಿಯುತ್ತಲೇ ಇದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎರಡು ಮೃತದೇಹ ಮೇಲೆತ್ತಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.
ಎಲ್ಲೆಡೆ ಜಲಾವೃತ, ಭೂಕುಸಿತ
ಮಡಿಕೇರಿಯ ಮೂರು ದಿಕ್ಕುಗಳಲ್ಲೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ಎತ್ತರದ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ನೂರಾರು ಗ್ರಾಮಸ್ಥರು ಮನೆಗಳನ್ನು ಕಳೆದು ಕೊಂಡಿದ್ದು ಜೀವಭಯದಲ್ಲಿದ್ದಾರೆ. ಹಲವರು ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಕಾಡು, ನೀರು, ಗುಡ್ಡದ ಮಣ್ಣಿನ ನಡುವೆ ಸಿಲುಕಿಕೊಂಡಿದ್ದಾರೆ. ತಂತಿಪಾಲ, ಹೆಮ್ಮೆತ್ತಾಳು ಮುಕ್ಕೋಡ್ಲು ವಿಭಾಗದ ಭಾರೀ ಬೆಟ್ಟ ಪ್ರದೇಶಗಳು ಕುಸಿದು ಬೀಳುತ್ತಿವೆ. ನೂರಾರು ಮಂದಿ ಸಂಪರ್ಕಕ್ಕೆ ಲಭಿಸದೆ ಆತಂಕ ಸೃಷ್ಟಿಯಾಗಿದೆ. ರಾತ್ರಿ ಅನಿವಾರ್ಯವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಹೆಲಿಕಾಪ್ಟರ್ ಕಾರ್ಯಾಚರಣೆಗೆ ಅಡ್ಡಿ
ಮಕ್ಕಂದೂರು ಭಾಗದಲ್ಲಿ ಕಾರ್ಯಾಚರಣೆಗೆ ಮಂಗಳೂರಿನಿಂದ ಸೇನಾ ಹೆಲಿಕಾಪ್ಟರ್ ನೆರವು ಯಾಚಿಸಲಾಗಿದೆ. ಆದರೆ ತೀವ್ರ ಪ್ರತಿಕೂಲ ಹವಾಮಾನವಿರುವುದರಿಂದ ಸ್ಥಳಕ್ಕೆ ಹೆಲಿಕಾಪ್ಟರ್ ಬರಲಾಗುತ್ತಿಲ್ಲ. ಮಕ್ಕಂದೂರಿನಲ್ಲಿ ಭಾರೀ ಗುಡ್ಡ ಕುಸಿತಗಳಿಂದ ಸಂಕಷ್ಟಕ್ಕೆ ಸಿಲುಕಿದ 52 ಮಂದಿಗೆ ಕೆ. ನಿಡುಗಣೆಯ ಕರ್ಣಂಗೇರಿ ಗ್ರಾಮದ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ಗುಡ್ಡ ಕುಸಿತ ಭೀತಿ: ಗ್ರಾಮ ತೊರೆದ ಜನತೆ
ಮಾದಾಪುರ ಸಮೀಪದ ಶಿರಂಗಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿಯುತ್ತಿರುವ ಮುನ್ಸೂಚನೆ ಸಿಕ್ಕಿದ ಗ್ರಾಮದ 150ಕ್ಕೂ ಹೆಚ್ಚು ಮಂದಿ, ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಗ್ರಾಮ ತೊರೆದಿದ್ದಾರೆ. ಕೆಲವು ಬರೆ ಕುಸಿದ ಪರಿಣಾಮ ಪಟ್ಟಣಕ್ಕೆ ತಲುಪಲು ಸಾಧ್ಯವಾಗದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಹಲವರನ್ನು ರಕ್ಷಿಸಲಾಗಿದೆ. ನೂರಾರು ಮನೆಗಳು ಕುಸಿದಿದ್ದು, ಜನರು ದಿಕ್ಕುತೋಚದೆ ಕಂಗಾಲಾಗಿದ್ದಾರೆ.
ಕೆದಕಲ್ ಗ್ರಾ.ಪಂ. ಕಾಂಡನಕೊಲ್ಲಿ ಹಾಲೇರಿ ವಿಭಾಗದಲ್ಲಿ ಬರೆ ಕುಸಿದು 200ಕ್ಕೂ ಅಧಿಕ ಮಂದಿ ಸಂಪರ್ಕ ವ್ಯವಸ್ಥೆ ಕಳೆದು ಕೊಂಡಿದ್ದಾರೆ. ವೀರಾಜಪೇಟೆ ತಾಲೂಕಿನ ಬೇತ್ರಿ ಸಮೀಪ ಕಾವೇರಿ ಪ್ರವಾಹದಿಂದ ದೇವಮಾನಿ ಮನು ಅವರ ತೋಟದಲ್ಲಿ ಮೂರು ಮಂದಿ ಸಿಲುಕಿಕೊಂಡಿದ್ದಾರೆ.
ಮಡಿಕೇರಿ ನಗರದ ಸಮೀಪದಲ್ಲಿರುವ ದೇವಸ್ತೂರು ಗ್ರಾಮದಲ್ಲಿ ಗುಡ್ಡ ಕುಸಿತ, ಪ್ರವಾಹದಿಂದ 40 ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೆ, ಗಾಳಿಬೀಡು ಸಮೀಪದ 2ನೇ ಮೊಣ್ಣಂಗೇರಿ ಗ್ರಾಮದ 40 ಕುಟುಂಬಗಳು ಅಲ್ಲಿನ ಕುಡಿ ಹಾರಿದ ಕಲ್ಲಿನಲ್ಲಿ ಆಶ್ರಯ ಪಡೆದಿದ್ದಾರೆ.
ಮುಖ್ಯಮಂತ್ರಿ ಪ್ರತಿಕ್ರಿಯೆ
ಪ್ರತೀ 10 ನಿಮಿಷಕ್ಕೊಮ್ಮೆ ಜಿಲ್ಲೆಯ ಪರಿಸ್ಥಿತಿಯ ಮಾಹಿತಿ ಪಡೆಯಲಾಗುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸು ವಂತೆ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಸಚಿವರು ಕೊಡಗಿನಲ್ಲಿ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಕ್ಕೆ ಹಣದ ಕೊರತೆಯಿಲ್ಲ ಎಂದು ಮಳೆಯ ಅವಾಂತರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸಂಸದ ಪ್ರತಾಪ್‌ಸಿಂಹ, ಸಚಿವ ರೇವಣ್ಣ ಭೇಟಿ ಸಂಸದ ಪ್ರತಾಪ್‌ಸಿಂಹ ಗುರುವಾರ ಕುಶಾಲನಗರ, ಕೂಡಿಗೆಗೆ ಭೇಟಿ ನೀಡಿ ಗಂಜಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಸೋಮವಾರಪೇಟೆ-ಮಾಗೇರಿ-ಸಕಲೇಶಪುರ ರಾಜ್ಯ ಹೆದ್ದಾರಿ ಹಾಗೂ ಮಾದಾಪುರ, ಹಟ್ಟಿಹೊಳೆ, ಸುಂಟಿಕೊಪ್ಪ ಭಾಗಕ್ಕೆ ತೆರಳಿ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಶಾಲಾ ಕಾಲೇಜು 2 ದಿನ ರಜೆ
ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 17 ಮತ್ತು 18ರಂದು ಅಂಗನವಾಡಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕಂದಕಕ್ಕೆ ಜಾರಿಹೋದ ಮನೆ!
ಮಡಿಕೇರಿ ನಗರದ ಮುತ್ತಪ್ಪ ದೇವಾಲಯ ಬಳಿ ರಫೀಕ್ ಅವರಿಗೆ ಸೇರಿದ ಒಂದು ಅಂತಸ್ತಿನ ಮನೆ ಗುರುವಾರ ಬೆಳಗ್ಗೆ
ಅಡಿಪಾಯ ಸಹಿತ ನೂರು ಅಡಿ ಆಳಕ್ಕೆ ಜಾರಿ ಹೋಗಿದೆ. ಅದರ ಪಕ್ಕದಲ್ಲೆ ಇದ್ದ ಹನೀಫ್ ಅವರ ಮನೆ ಬೀಳುವ ಸ್ಥಿತಿಯಲ್ಲಿದೆ. ಅವಘಡ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆಯವರು ಮೊದಲೇ ಸ್ಥಳಾಂತರಗೊಂಡಿದ್ದರಿಂದ ಪಾರಾಗಿದ್ದಾರೆ.
ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರಗಳಲ್ಲಿ 8ಕ್ಕೂ ಹೆಚ್ಚಿನ ಮನೆಗಳು ಪ್ರಪಾತಕ್ಕೆ ಕುಸಿದಿವೆ. ಹಲವು ಮನೆಗಳು ವಾಲಿ ನಿಂತಿವೆ. ಬಡಾವಣೆಯ ಅಂಗನವಾಡಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಸಂತ್ರಸ್ತರಿಗೆ ಹಲವು ಸಂಘಟನೆ ಗಳು ಸಹಾಯ ಹಸ್ತ ಚಾಚಿವೆ.
ಮಕ್ಕಂದೂರಿನಲ್ಲಿ 40 ಮಂದಿ ನಾಪತ್ತೆ?
ಮಕ್ಕಂದೂರಿನಲ್ಲಿ ಭಾರೀ ಭೂಕುಸಿತ ಸಂಭವಿಸಿ ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ. ಎಕರೆ ಗಟ್ಟಲೆ ಪ್ರದೇಶ ಕುಸಿದಿದ್ದು, ಹೆದರಿಕೆ ಹುಟ್ಟಿಸುವಂತಿದೆ. ನಾಪತ್ತೆಯಾದವರ ಬಗ್ಗೆ ಯಾವುದೇ ಕುರುಹುಗಳೂ ಪತ್ತೆಯಾಗಿಲ್ಲ. ಇನ್ನು ಅರವತ್ತಕ್ಕೂ ಹೆಚ್ಚಿನ ಮಂದಿ ಗ್ರಾಮದ ಬೆಟ್ಟ ಪ್ರದೇಶಗಳಲ್ಲಿ ನೆರವಿಗಾಗಿ ಕಾಯುತ್ತಿದ್ದರೆ, ನೂರಕ್ಕೂ ಹೆಚ್ಚಿನ ಮಂದಿಯನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ಇವರಿಗಾಗಿ ನಗರದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.