ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಉಪನ್ಯಾಸಕರ ಸಂಘದಿಂದ ಮನವಿ
Team Udayavani, Dec 1, 2019, 5:33 AM IST
ಮಡಿಕೇರಿ : ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಉಪನ್ಯಾಸಕರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಕೂಡಲೇ ವೇತನ ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಳೆದ ಹಲವು ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನ ತಾರತಮ್ಯ ಹೋಗಲಾಡಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ದ್ವೀತಿಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ನಡೆಸಿದ 18 ದಿವಸಗಳ ಹೋರಾಟದ ಸಂದರ್ಭದಲ್ಲಿ ಸರ್ಕಾರವು ನಡೆಸಿದ ವಿವಿಧ ಹಂತಗಳ ಸಭೆಗಳಲ್ಲಿ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಬೇಡಿಕೆಗಳು ಈಡೇರಿಲ್ಲ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಉಪನ್ಯಾಸಕರ ಸಮುದಾಯದಿಂದಲೇ ಬಂದ ಕೆಲ ಅಧಿಕಾರಿಗಳು ಅದೇ ಸಮುದಾಯಕ್ಕೆ ಕಂಠಕವಾಗಿರುವುದು ದುರಾದೃಷ್ಟಕರ. ಈ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರುವ ಉನ್ನತ ಅಧಿಕಾರಿಗಳ ದಿಕ್ಕು ತಪ್ಪಿಸಿ, ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸಿ, ಉಪನ್ಯಾಸಕರ ಮನೋಸ್ಥೆçರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬೇಡಿಕೆಗಳು
ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು, ಉಪನ್ಯಾಸರಿಗೆ ನೀಡುತ್ತಿದ್ದ ರೂ. 500 ಗಳ ಎಕ್ಸ್‌ಗೆÅàಷಿಯಾವನ್ನು ಕೂಡಲೇ ಮೂಲವೇತನಕ್ಕೆ ವಿಲೀನಗೊಳಿಸಬೇಕು ಮತ್ತು ಎಕ್ಸ್‌ಗೆÅàಷಿಯಾವನ್ನು ಮರುಪಾವತಿಸುವಂತೆ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು, ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಕರಿಗೆ ಕಾಲಮಿತಿ ವೇತನ ಬಡ್ತಿಯನ್ನು ಕೂಡಲೇ ಮಂಜೂರು ಮಾಡಬೇಕು, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್ ಸಮಿತಿಯನ್ನು ರಚಿಸಬೇಕು, ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೆಟ್, ಸ್ಲೆಟ್, ಪಿಹೆಚ್‌ಡಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು, ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಿದಂತೆ ಆದೇಶಿಸಬೇಕು, ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು, ಗಣಿತ ವಿಷಯಕ್ಕೆ ಪ್ರಾಯೋಗಿಕ, ಆಂತರಿಕ ಅಂಕಗಳನ್ನು ಅಳವಡಿಸಬೇಕು, ಬಿಎಡ್ ಪದವಿ ಪಡೆಯಲು ತೆರಳಿದ ಎರಡು ವರ್ಷಗಳ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಿಸಬೇಕು, ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಉಪನ್ಯಾಸಕರಿಗೆ ಬಿ.ಎಡ್. ಪದವಿಯಿಂದ ವಿನಾಯಿತಿ ನೀಡಿ, ಖಾಯಂ ಪೂರ್ವ ಸೇವಾವಧಿಯನ್ನು ಘೋಷಿಸಬೇಕು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗೆ ತುರ್ತಾಗಿ ಪದೋನ್ನತಿ ನೀಡಲು ತಕ್ಷಣ ಕ್ರಮವಹಿಸಬೇಕು, ಪದವಿ ಪೂರ್ವ ಕಾಲೇಜುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವುದರಿಂದ ಪ್ರಾಯೋಗಿಕವಾಗಿ ಮತ್ತು ಆಡಳಿತಾತ್ಮಕವಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಕರ್ತವ್ಯಗಳನ್ನು ಸೃಷ್ಟಿಸಬೇಕು, ವೇತನ ನೀಡಲು ಹೆಚ್‌ಆರ್‌ಎಂಎಲ್‌ನಲ್ಲಿ ಆಗುತ್ತಿರುವ ತೊಂದರೆ ನಿವಾರಣೆ ಮಾಡಬೇಕು, ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಅನುದಾನಿತ ಉಪನ್ಯಾಸಕರನ್ನೇ ಪ್ರಾಂಶುಪಾಲರನ್ನಾಗಿ ಮಾಡಬೇಕು, ಅನುದಾನಿತ ಪದವಿ ಪೂರ್ವ ಉಪನ್ಯಾಸಕರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುಭವಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು, ದ್ವೀತಿಯ ಪಿಯುಸಿ ಮೌಲ್ಯಮಾಪನದ ಸಂಭಾವನೆಯನ್ನು ಕೆ-2 ನಿಂದ ವಿನಾಯಿತಿ ನೀಡಿ ಚೆಕ್ ಮೂಲಕ ವಿತರಿಸಬೇಕು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಂಭಾವನೆಯನ್ನು ಶೇ. 30ಕ್ಕೆ ಪರಿಷ್ಕರಿಸಿ ಆದೇಶಿಸಬೇಕು, ಉಪನ್ಯಾಸಕರ ವರ್ಗಾವನೆಯಲ್ಲಿ ಆದ್ಯತಾ ಅಂಶಗಳನ್ನು ಮರುಪರಿಶೀಲಿಸಿ, ಸಾಮಾನ್ಯ ಜೇಷ್ಠತೆ ಮೇಲೆ ಪಾರದರ್ಶಕ ವರ್ಗಾವಣಾ ನೀತಿಯನ್ನು ರೂಪಿಸಬೇಕು, ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಸೌಲಭ್ಯ ಮತ್ತು ಪ್ರಬಾರಿ ಭತ್ಯೆ ನೀಡಬೇಕು, ಅನುದಾನಿತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಮನವಿ ನೀಡುವ ಸಂದರ್ಭ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ಕಾರ್ಯಾಧ್ಯಕ್ಷ ಟಿ.ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಜೆ.ನಾಗರಾಜ್, ಕೋಶಾಧ್ಯಕ್ಷ ಹೆಚ್.ಆರ್.ಸರ್ವೋತ್ತಮ್, ಗೌರವಾಧ್ಯಕ್ಷರಾದ ಅಶ್ವಿನಿಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗಪ್ಪ, ಪ್ರಧಾನ ಕಾರ್ಯದರ್ಶಿ ರುದ್ರಪ್ಪ, ಮಡಿಕೇರಿ ತಾಲ್ಲೂಕು ಕಾರ್ಯಾಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿ ಚಿದಾನಂದ, ಖಜಾಂಚಿ ರವಿಶಂಕರ್, ವಿರಾಜಪೇಟೆ ತಾಲ್ಲೂಕು ಕಾರ್ಯಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಖಜಾಂಚಿ ರೀಟಾ ಆಲ್ವಾರಿಸ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.