ಸಂಪಾಜೆ:ಶಂಕಿತ ನಕ್ಸಲರಿಗಾಗಿ ತೀವ್ರ ಶೋಧ;ವಿಕ್ರಮ್ ಗೌಡನೂ ಇದ್ದ?
Team Udayavani, Feb 4, 2018, 10:52 AM IST
ಸುಳ್ಯ/ಮಡಿಕೇರಿ: ಕೊಡಗಿನ ಸಂಪಾಜೆ ಗ್ರಾಮದ ಕಡಮಕಲ್ಲು ಮೀಸಲು ಅರಣ್ಯ ಪ್ರದೇಶದ ಗುಡ್ಡೆಗದ್ದೆಯಲ್ಲಿ ಶುಕ್ರವಾರ ಸಂಜೆ ಕಾಣಿಸಿಕೊಂಡ ಮೂವರು ಶಂಕಿತ ನಕ್ಸಲರ ಪತ್ತೆಗಾಗಿ ಶನಿವಾರ ಮುಂಜಾನೆಯಿಂದ ನಕ್ಸಲ್
ನಿಗ್ರಹ ದಳದ ಪಡೆ ಮತ್ತು ಕೊಡಗು ಜಿಲ್ಲಾ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜೆಯ ತನಕ ಯಾವುದೇ ಸುಳಿವು ಸಿಗದಿರುವ ಹಿನ್ನೆಲೆಯಲ್ಲಿ ರವಿವಾರ ಕಾರ್ಯಾ ಚರಣೆ ಮುಂದುವರಿದಿದೆ.
ಮಾಣಿ-ಮೈಸೂರು ರಸ್ತೆಯ ಸಂಪಾಜೆ ಕೊಯನಾಡಿನಿಂದ ನಾಲ್ಕು ಕಿ.ಮೀ. ದೂರ ಕಾಡಂಚಿನಲ್ಲಿರುವ ಗುಡ್ಡೆಗದ್ದೆಯ ಮಲೆಕುಡಿಯ ಜನಾಂಗದ ನಾಲ್ಕು ಮನೆಗಳಿಗೆ ಶುಕ್ರವಾರ ಸಂಜೆ 6 ಗಂಟೆಯ ಹೊತ್ತಿಗೆ ನಕ್ಸಲರು ಬಂದಿದ್ದು, ಅಲ್ಲಿಂದ 8.30ರ ಸುಮಾರಿಗೆ ವಾಪಸು ಹೋಗಿರುವುದಾಗಿ ಮನೆಮಂದಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತತ್‌ಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ತಡರಾತ್ರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು.
ಉಂಡರು, ಕೊಂಡು ಹೋದರು
ಮೊದಲು ಗುಡ್ಡೆಗದ್ದೆ ದಯಾನಂದ ಅವರ ಮನೆಗೆ ತೆರಳಿದ ಹಸಿರು ಬಣ್ಣದ ಮಿಲಿಟಿರಿ ಉಡುಪಿನಲ್ಲಿದ್ದ ಶಂಕಿತ ನಕ್ಸಲರು ಅಲ್ಲಿ ಯಾರೂ ಇರದ ಕಾರಣ ಸಂಕಪ್ಪ ಮಲೆಕುಡಿಯ ಅವರ ಮನೆಗೆ ಹೋಗಿದ್ದಾರೆ ಎಂಬ ಮಾಹಿತಿ ಇದ್ದು, ತೋಟದ ಮೂಲಕ ಅವರು ಮನೆ ಕಡೆ ಬಂದಿರುವುದನ್ನು ಕೆಲಸಗಾರರು ಗಮನಿಸಿದ್ದರು. ಶಸ್ತ್ರಸಜ್ಜಿತ ಮೂವರು ವ್ಯಕ್ತಿಗಳು ಸಂಕಪ್ಪ ಅವರ ಮನೆಯಲ್ಲಿ ಊಟ ಕೇಳಿ ಪಡೆದು ಉಂಡಿದ್ದು ಬಳಿಕ ಸಂಕಪ್ಪ ಅವರ ಮಕ್ಕಳ ಬಳಿ 2,500 ರೂ. ನೀಡಿ ಅಂಗಡಿಯಿಂದ ದಿನಸಿ ಸಾಮಗ್ರಿ ತರುವಂತೆ ಹೇಳಿದ್ದಾರೆ. ಬೇಗ ಬರುವಂತೆ ಸೂಚಿಸಿದ್ದಲ್ಲದೆ, ಅಂಗಡಿಯಿಂದ ತರುತ್ತಿದ್ದ ಸಾಮಗ್ರಿಯನ್ನು ಅರ್ಧ ದಾರಿಯಲ್ಲಿ ಪಡೆದುಕೊಂಡು ಕಾಡಿನ ಕಡೆ ತೆರಳಿದರು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ಕಿ ಪಡೆದುಕೊಂಡರು…
ಗುಡ್ಡೆಗದ್ದೆ ಪರಿಸರದಲ್ಲಿ ನಾಲ್ಕು ಮನೆಗಳಿದ್ದು, ಶಂಕಿತ ನಕ್ಸಲರು ಪ್ರತೀ ಮನೆಯಿಂದ ತಲಾ ಐದು ಕೆ.ಜಿ. ಅಕ್ಕಿ ಸಂಗ್ರಹಿಸಿದ್ದಾರೆ. ಮನೆಮಂದಿ ಬಳಿ ನಿಮಗೆ ತೊಂದರೆ ಮಾಡುವುದಿಲ್ಲ, ನಮಗೆ ನೀವು ತೊಂದರೆ ಮಾಡಬೇಡಿ ಎಂದಿದ್ದು, ದೂರವಾಣಿ ಕರೆ ಬಂದಾಗ ಮನೆಯವರು ಏನು ಮಾತನಾಡುತ್ತಾರೆ ಎಂಬ ಬಗ್ಗೆ ಕಿವಿಗೊಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಮನೆಯವರ ಬಳಿ ತಮ್ಮ ವಿಚಾರಧಾರೆಗಳನ್ನು ತಿಳಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಬಂದವರು ನಕ್ಸಲರೇ?
ಅಂಗಡಿಗೆ ತೆರಳಿ ಸಾಮಗ್ರಿ ತರುವಂತೆ ಸೂಚಿಸಿರುವುದರಿಂದ ಬಂದಿದ್ದವರು ನಕ್ಸಲರೇ ಅಥವಾ ನಕಲಿ ನಕ್ಸಲರೇ ಎಂಬ ಕುರಿತು ಅನುಮಾನ ಮೂಡಿ ಸಿದೆ. ಈ ಹಿಂದಿನ ಪ್ರಕರಣಗಳಲ್ಲಿ ಮನೆಗೆ ಬಂದ ನಕ್ಸಲರು ಇದ್ದ ಆಹಾರ ಸಾಮಗ್ರಿ ಕೇಳಿ ಪಡೆದು ಕೊಂಡಿದ್ದರು. ಹಣ ಕೊಟ್ಟು ದಿನಸಿ ತರುವಂತೆ ಹೇಳಿದ ಉದಾಹರಣೆ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ಇದು ನಕ್ಸಲರಿಗೆ ಅಪಾಯಕರ. ಹೀಗಾಗಿ ಇಂಥ ದುಸ್ಸಾಹಸಕ್ಕೆ ಕೈ ಹಾಕಲಾರರು ಎಂಬ ಮಾತು ಕೇಳಿಬರುತ್ತಿದೆ. ಆದರೆ ಬಂದಿದ್ದವರ ವರ್ತನೆ ನಕ್ಸಲರೇ ಆಗಿರಬಹುದು ಎಂಬ ಅನುಮಾನ ಮೂಡಿಸಿದೆ.
ಶಿರಾಡಿ ಘಾಟಿಗೆ ಹೋಗಬೇಕು?
ಶಂಕಿತ ಮೂವರು ನಕ್ಸಲರು ದಕ್ಷಿಣ ಕನ್ನಡ ಭಾಗದಲ್ಲಿ ಶೋಧ ನಡೆಯುತ್ತಿರುವ ಕಾರಣ ಈ ಭಾಗಕ್ಕೆ ಬಂದಿದ್ದು, ತಮಗೆ ಶಿರಾಡಿ ಘಾಟಿಗೆ ಹೋಗ ಬೇಕು ಎಂದು ಮನೆಯವರ ಬಳಿ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಶಿರಾಡಿ ವ್ಯಾಪ್ತಿಯ ಅಡ್ಡಹೊಳೆಯಲ್ಲಿ ಕಾಣಿಸಿಕೊಂಡ ನಕ್ಸಲರಿಗೂ ಇವರಿಗೂ ಸಂಬಂಧ ಇರಬಹುದೇ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ.
ಗುಡ್ಡೆಗದ್ದೆ ಪರಿಸರದ ವ್ಯಾಪ್ತಿಯ ಕೊಡಗು, ಕೇರಳ ಭಾಗಕ್ಕೆ ಚಾಚಿಕೊಂಡಿರುವ ಕಾಡಿನೊಳಗೆ ಪ್ರತ್ಯೇಕ ತಂಡ ರಚಿಸಿ ಶೋಧ ಕಾರ್ಯ ಆರಂಭಿಸ ಲಾಗಿದೆ. ಅರೆಕೆಲಾ, ಗಾಳಿಬೀಡು, ಜೇಡ್ಲಾ, ಪಟ್ಟಿ ಘಾಟಿ ರಕ್ಷಿತಾರಣ್ಯ ಪರಿಸರದ ಕಾಡಿನಲ್ಲಿ ಶೋಧ ಮುಂದುವರಿದಿದೆ ಎಂಬ ಮಾಹಿತಿ ದೊರೆತಿದೆ.
ಗುಡ್ಡೆಗದ್ದೆ ಮೂಲಕ ಗಾಳಿಬೀಡು, ಪುಷ್ಪಗಿರಿ, ಸುಬ್ರಹ್ಮಣ್ಯ ಮತ್ತು ಸುಳ್ಯ ವಲಯದ ಅರಣ್ಯ ಭಾಗಕ್ಕೆ ಪ್ರವೇಶಿಸಲು ಅವಕಾಶ ಇರುವ ಕಾರಣ, ಶೋಧ ಆ ದಿಕ್ಕಿನಿಂದಲೂ ಮುಂದುವರಿದಿದೆ. ಕರಿಕ್ಕೆ ಮೂಲಕ ಕೇರಳಕ್ಕೆ ಸಂಪರ್ಕ ಸಾಧಿಸುವ ಸಾಧ್ಯತೆ ಇರುವುದರಿಂದ ಶೋಧ ತಂಡ ಎಲ್ಲ ಆಯಕಟ್ಟಿನ ಜಾಗಗಳ ಮೇಲೆ ನಿಗಾ ಇರಿಸಿದೆ.
ಹಿಂದೊಮ್ಮೆ ಬಂದಿದ್ದರು
ಸಂಪಾಜೆ ಪರಿಸರದಲ್ಲಿ ಮೂರು ವರ್ಷಗಳ ಹಿಂದೆ ನಕ್ಸಲರು ಬಂದಿದ್ದ ಕುರಿತು ಸುದ್ದಿ ಹರ ಡಿತ್ತು. ಸಂಪಾಜೆ ಮೂಲಕ ಕೇರಳಕ್ಕೆ ತೆರಳಿರುವ ಮಾಹಿತಿ ಆಧಾರದಲ್ಲಿ ನಕ್ಸಲ್ ಪಡೆಯವರು ಇಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈಗ ಗುಡ್ಡೆಗದ್ದೆ ಯಲ್ಲಿ ಕಾಣಿಸಿಕೊಂಡಿರುವುದು ಎರಡನೇ ಪ್ರಕರಣ.
ವಿಕ್ರಮ್ ಗೌಡನೂ ಇದ್ದ?
ಮೂವರು ಶಂಕಿತ ನಕ್ಸಲರಲ್ಲಿ ಪೊಲೀಸರಿಗೆ ಬೇಕಾಗಿರುವ ಉಡುಪಿಯ ವಿಕ್ರಮ್ ಗೌಡನೂ ಇದ್ದನೆನ್ನುವ ಮಾಹಿತಿ ಲಭಿಸಿದೆ. ಪೊಲೀಸರು ಸಂಕಪ್ಪ ಅವರ ಕುಟುಂಬಕ್ಕೆ ವಿಕ್ರಮ್ ಗೌಡನ ಫೋಟೋ ತೋರಿಸಿದಾಗ ಇದನ್ನು ಖಾತರಿ ಪಡಿಸಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರುವ ಕೆಲವರ ಪ್ರಯತ್ನಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಆರೋಪ ವಿಕ್ರಮ್ ಗೌಡನ ಮೇಲಿದೆ.
ಶೋಧ ಕಾರ್ಯ ಚುರುಕು
ಶನಿವಾರ ಮುಂಜಾನೆಯಿಂದಲೇ ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ಮತ್ತು ಜಿಲ್ಲಾ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಕೊಡಗು ಡಿವೈಎಸ್‌ಪಿ ಸುಂದರರಾಜ್ ಉದಯವಾಣಿಗೆ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಡಿವೈಎಸ್ಪಿ ಸುಂದರ ರಾಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಹಾಗೂ ಸಿಬಂದಿ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದಾರೆ. ಇಂದು ಸ್ಥಳಕ್ಕೆ ನಕ್ಸಲ್ ನಿಗ್ರಹ ದಳದ ಎರಡು ತಂಡ ಆಗ ಮಿಸಿದ್ದು, ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯ ಹಾಗೂ ಕೊಯನಾಡು ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಅಪರಿಚಿತ ವಾಹನಗಳ ತಪಾ ಸಣೆ ಕೂಡ ಮಾಡಲಾಗುತ್ತಿದ್ದು, ಸಂಪಾಜೆ ಗೇಟ್ ಸಹಿತ ಗಡಿಭಾಗಗಳಲ್ಲಿ ನಿಗಾ ಇಡಲಾಗಿದೆ. ಶಂಕಿತ ನಕ್ಸಲರು ಸುಬ್ರಹ್ಮಣ್ಯ ಅರಣ್ಯ ಭಾಗದಲ್ಲಿ ನುಸುಳಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.