ಕಾಡಾನೆಗಳ ಸಂತಾನ ನಿಯಂತ್ರಣಕ್ಕೆ ಕ್ರಮ: ಅರಣ್ಯಾಧಿಕಾರಿ
Team Udayavani, Jul 3, 2017, 3:45 AM IST
ಮಡಿಕೇರಿ: ಕಾಡಾನೆಗಳ ಸಂತಾನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಾಂತ್ರಿಕತೆ ಬಳಸಲು ಚಿಂತನೆ ನಡೆಸಿದೆ ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುಶಾಲನಗರದ ಸುದ್ದಿ ಸೆಂಟರ್ ಸಂಯುಕ್ತಾ ಶ್ರಯದಲ್ಲಿ ದುಬಾರೆಯಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯಲ್ಲಿ ಆನೆ ಮಾನವ ಸಂಘರ್ಷ ಎಂಬ ವಿಷಯದಡಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆನೆ ದಾಳಿಯಿಂದ ಮೃತಪಟ್ಟವರಿಗೆ ಇಲಾಖೆ ಯಿಂದ ರೂ. 5 ಲಕ್ಷ ಪರಿಹಾರ ದೊರಕುತ್ತಿದೆ ಹೊರತು ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ಸಹಾಯಹಸ್ತ ಚಾಚಲು ಫೌಂಡೇಶನ್ ಸ್ಥಾಪನೆ ಮೂಲಕ ಸಾಧ್ಯ ಎಂದ ಮನೋಜ್‌ಕುಮಾರ್ ಇಂತಹ ಫೌಂಡೇಶನ್‌ಗಳಿಗೆ ಜಿಲ್ಲೆಯ ದುಬಾರೆ, ನಿಸರ್ಗಧಾಮ ಮುಂತಾದ ಪ್ರವಾಸಿಧಾಮಗಳಿಂದ ದೊರಕುವ ಆದಾಯವನ್ನು ಕ್ರೋಡೀಕರಿಸಿ ಫೌಂಡೇಶನ್ ಮೂಲಕ ಸಂತ್ರಸ್ತರಿಗೆ ಬಳಸಬಹುದು. ಇರ್ಪು ಮುಂತಾದ ಪ್ರವಾಸಿ ಕೇಂದ್ರಗಳಲ್ಲಿ ಇಲಾಖೆ ಮೂಲಕ ಬರುವ ಆದಾಯ ಸೇರಿದಂತೆ ಅಂದಾಜು 4 ಕೋಟಿ ರೂ. ವಾರ್ಷಿಕ ಆದಾಯ ಆನೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಪ್ರಸಕ್ತ ಕಾಡಾನೆ ಹಾವಳಿಯಿಂದ ಸಂತ್ರಸ್ತರಾಗುವ ಜನರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣದ ಕೊರತೆಯಿಲ್ಲ ಎಂದ ಅವರು, ಕೊಡಗು ವೃತ್ತದಲ್ಲಿ ಆನೆ-ಮಾನವ ಸಂಘರ್ಷದಲ್ಲಿ ಕೇವಲ 50ರಿಂದ 100 ಆನೆಗಳು ಮಾತ್ರ ತೊಡಗಿವೆ ಎಂದು ಅಂಕಿಅಂಶ ನೀಡಿದರು. ಪ್ರಕೃತಿ ಬದಲಾದಂತೆ ಕಾಡಾನೆಗಳ ವರ್ತನೆಗಳು ಕೂಡ ಬದಲಾಗುತ್ತಿವೆ. ಈ ಸಂದರ್ಭ ಹೊಂದಾಣಿಕೆಯಾಗದೆ ಸಂಘರ್ಷಗಳು ಉಂಟಾಗುತ್ತಿವೆ ಎಂದರು.
ಜಿಲ್ಲೆಯಲ್ಲಿ ಅರಣ್ಯದ ಅಂಚಿನಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಯುಂಟು ಮಾಡುತ್ತಿದೆ ಎನ್ನುವುದು ಕೇವಲ ಕಾಲ್ಪನಿಕ. ಇಂತಹ ಕಾಮಗಾರಿಗಳ ಸಂದರ್ಭ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗೆ ಸ್ಪಂದನೆ ದೊರಕದಿದ್ದಲ್ಲಿ ಮೇಲಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಮನೋಜ್ ಕುಮಾರ್ ತಿಳಿಸಿದರು.
ಆನೆಗಳು ಅರಣ್ಯದಿಂದ ಹೊರಬಾರದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅರಣ್ಯದಂಚಿ ನಲ್ಲಿ ಹಳೆಯ ಕೆರೆಗಳ ಅಭಿವೃದ್ಧಿ ಕಾಮಗಾರಿ, ಗಿಡ ನೆಡುವ ಕಾರ್ಯಕ್ರಮ, ಬೀಜ ಬಿತ್ತನೆ ಮುಂತಾದ ಯೋಜನೆಗಳನ್ನು ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 20ರಿಂದ 25 ಆನೆಗಳು ನಿರಂತರವಾಗಿ ಹಾನಿ ಮಾಡುತ್ತಿದ್ದು ಈ ಸಂಬಂಧ ವೃತ್ತದ ವ್ಯಾಪ್ತಿ ಯಲ್ಲಿ 200 ಸಿಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದರು.
ಹಲವೆಡೆ ಸಾಗುವಾನಿ ಮರಗಳನ್ನು ತೆರವು ಮಾಡುವ ಕ್ರಿಯಾಯೋಜನೆ ಹಮ್ಮಿಕೊಳ್ಳಲಾಗಿದ್ದು ಪರಿಸರಸ್ನೇಹಿ ಗಿಡಗಳನ್ನು ನೆಡಲಾಗುತ್ತಿದೆ. ಅಧಿಕಾರಿ ಗಳು ಮತ್ತು ಸರಕಾರೇತರ ಸಂಘಸಂಸ್ಥೆಗಳು ಒಂದಾಗಿ ಕೆಲಸ ನಿರ್ವಹಿಸಿದಲ್ಲಿ ಆನೆ-ಮಾನವ ಸಂಘರ್ಷಕ್ಕೆ ಶಮನ ದೊರೆಯಲಿದೆ ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಮಾತನಾಡಿ, ಪತ್ರಕರ್ತರು ಸಮಾಜಮುಖೀಯಾಗಿ ಕೆಲಸ ನಿರ್ವಹಿ ಸಬೇಕು ಎಂದರಲ್ಲದೆ ಜನಪರ ವರದಿಗಳನ್ನು ಬಿಂಬಿಸಲು ಬದ್ಧರಾಗಬೇಕಿದೆ ಎಂದರು.
ಉದ್ಯಮಿ ಕೆ.ಎಸ್. ರತೀಶ್, ರ್ಯಾಫ್ಟಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸಿ.ಎಲ್.ವಿಶ್ವ, ಪತ್ರಕರ್ತರ ಸಂಘದ ಖಜಾಂಚಿ ಸವಿತಾ ರೈ ಉಪಸ್ಥಿತರಿದ್ದು ಮಾತನಾಡಿದರು.
ಸುದ್ದಿ ಸೆಂಟರ್ ಸಂಚಾಲಕರಾದ ಎಂ.ಎನ್.ಚಂದ್ರ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರಾದ ಕೆ.ಎಸ್. ಮೂರ್ತಿ ಪುತ್ರ ಕೆ.ಎಂ. ಹರ್ಷಿತ್ ಅವರುಗಳನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ದುಬಾರೆ ಕಾವೇರಿ ನದಿ ತಟದಲ್ಲಿ ಗಿಡಗಳನ್ನು ನೆಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.