ಪುಷ್ಪಗಿರಿಯ ಮಡಿಲಲ್ಲಿ ಮೋಹಕ ಮಲ್ಲಳ್ಳಿ ಜಲಪಾತ
Team Udayavani, Jun 25, 2018, 6:00 AM IST
ಸೋಮವಾರಪೇಟೆ: ಕಳೆದ 10, 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ,ತೊರೆಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಪುಷ್ಪ ಗಿರಿ ಬೆಟ್ಟತಪ್ಪಲಲ್ಲಿ ಮಲ್ಲಳ್ಳಿ ಜಲಪಾತ ಮೈದುಂಬಿ ಹರಿಯುತ್ತಿದೆ. ಹಚ್ಚಹಸುರಿನ ಗಿರಿಕಂದರ, ಪ್ರಕೃತಿಯ ಸೊಬಗಿನ ಎರಡು ಬೆಟ್ಟಗಳ ತಳದಲ್ಲಿ ಧುಮ್ಮಿಕ್ಕುವ ಜಲಧಾರೆ. ರಮ್ಯ ಪರಿಸರದ ನಡುವಿದೆ ಮಲ್ಲಳ್ಳಿ ಜಲಪಾತ.
ಕಣ್‌ಹಾಯಿಸುವಷ್ಟು ದೂರಕ್ಕೂ ಹಚ್ಚಹಸಿರಿನ ಗಿರಿಕಂದರಗಳ ಸಾಲು,. ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು, ಹಚ್ಚಹಸುರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ, ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ, ಎರಡೂ ಬದಿಯಲ್ಲಿ ಬೃಹತ್ ಬೆಟ್ಟ, ನಡುವೆ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂದು ಭಾಸವಾಗುವ ಹಾಲ್ನೊರೆಯಂತಹ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ಮುಂಗಾರು ಮಳೆಗೆ ಮೈದಳೆದಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟ ಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮಲ್ಲಳ್ಳಿ ಜಲಪಾತ ದಿನದಿಂದ ದಿನಕ್ಕೆ ತನ್ನ ಸೌಂದರ್ಯ ದ್ವಿಗುಣಗೊಳಿಸಿ ಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ.
ಬೃಹತ್ ಕಲ್ಲು ಬಂಡೆಯಿಂದ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದ್ದು, ಪ್ರವಾಸಿಗರಿಗೆ ಜೋಗ ಜಲಪಾತದ ಅನುಭವ ನೀಡುತ್ತದೆ. ಜಲಪಾತದ ಕೆಳಭಾಗಕ್ಕೆ ಮೆಟ್ಟಿಲುಗಳ ಮೂಲಕ ತೆರಳಿದರೆ ದಟ್ಟ ಹಿಮದೊಂದಿಗೆ ಎಳೆ ನೀರಿನ ಸಿಂಚನವಾಗುತ್ತದೆ. ನೈಸರ್ಗಿಕ ಸ್ವರ್ಗವೇ ಇಲ್ಲಿ ಸೃಷ್ಟಿಯಾದಂತೆ ಮಲ್ಲಳ್ಳಿ ಜಲಪಾತ ಕಂಗೊಳಿಸುವ ಪರಿ ನಿಜಕ್ಕೂ ವರ್ಣಿಸಲಸಾಧ್ಯ.
ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ರಾಜಧಾನಿ ಬೆಂಗಳೂರಿನಿಂದಲೇ ಅತೀ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸು ತ್ತಿರುವುದು ಜಲಪಾತದ ಆಕರ್ಷಣೀಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಜಲಪಾತದ ತಳಭಾಗದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಜಲಧಾರೆಯನ್ನು ಅತ್ಯಂತ ಸನಿಹದಿಂದ ಕಣ್ತುಂಬಿ ಕೊಳ್ಳಬಹುದಾಗಿದೆ. ಜಲಪಾತದ ಅನತಿ ದೂರದಲ್ಲಿ ಎಚ್ಚರಿಕೆಯ ಫಲಕ ಅಳವಡಿಸಿದ್ದು, ಈ ಎಚ್ಚರಿಕೆಯನ್ನು ಮೀರಿ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ,ಮೊಬೈಲ್ ನಂಬರ್‌ಗಳನ್ನು ನಮೂದಿಸಿಕೊಳ್ಳುವ ಮೂಲಕ ಜಲಪಾತದ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾರೆ. ಜಲಪಾತದ ಬಳಿಗೆ ಮದ್ಯವನ್ನು ಕೊಂಡೊಯ್ಯದಂತೆ, ನೀರಿಗೆ ಇಳಿಯದಂತೆ, ಅಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.
ಮಲ್ಲಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ವಾಗಿರುವುದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಹಾಲ್ನೊರೆಯಂತಹ ನೀರಿನ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭ.
ಹಾಲ್ನೊರೆಯ ಧಾರೆ
ಮಳೆಗಾಲ ಪ್ರಾರಂಭದಿಂದ ಹಿಡಿದು ಜನವರಿ ತಿಂಗಳವರೆಗೂ ಹಾಲ್ನೊರೆ ಸೂಸುತ್ತಾ, ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ನಿಜಕ್ಕೂ ಪ್ರವಾಸಿಗರ ಸ್ವರ್ಗವಾಗಿದೆ. ದಿನನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಹೃನ್ಮನ ತಣಿಸುವ ನ್ಯೆಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ನೈಸರ್ಗಿಕವಾಗಿ ಸಹಜ ಸೌಂದರ್ಯ ಹೊಂದಿರುವ ಜಲಪಾತ ಇದೀಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಹಂತಹಂತಗಳಲ್ಲಿ ಧುಮ್ಮಿಕ್ಕುವ ಜಲ
ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿರಿಸಿಕೊಂಡಿರುವ ಪುಷ್ಪಗಿರಿ ತಪ್ಪಲಿ ನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 390 ಅಡಿ ಎತ್ತರದಿಂದ ಧುಮುಕಿ ಜಲಧಾರೆಯಾಗಿ ಪ್ರವಹಿಸುತ್ತದೆ. ಮೊದಲ ಹಂತದ 200ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ನಂತರ 90ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಹೀಗೆ ಹಂತ ಹಂತವಾಗಿ ಒಟ್ಟಾಗಿ ಸುಮಾರು 390 ಅಡಿ ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂದೆ ಹರಿದು ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ನಾನಘಟ್ಟ ತಲುಪುತ್ತದೆ.
ಎಲ್ಲಿದೆ ಮಲ್ಲಳ್ಳಿ
ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ. ಪಂ. ವ್ಯಾಪ್ತಿಯ ಮಲ್ಲಳ್ಳಿ ಎಂಬ ಕುಗ್ರಾಮದಲ್ಲಿ ಮಲ್ಲಳ್ಳಿ ಜಲಪಾತವಿದೆ. ಸೋಮವಾರಪೇಟೆಯಿಂದ ಕೇವಲ 25 ಕಿ.ಮೀ. ಕ್ರಮಿಸಿದರೆ, ಜಲಪಾತ ದರ್ಶನವಾಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮೂಲಕ 20 ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಎಡಕ್ಕೆ ತಿರುಗಿ ನಾಲ್ಕು ಕಿ.ಮೀ. ತೆರಳಿದರೆ ಜಲಪಾತದ ದರ್ಶನವಾಗುತ್ತದೆ.
– ಎಸ್. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.