ಪರಿಹಾರ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯೋಗಾಭ್ಯಾಸ
Team Udayavani, Aug 24, 2018, 1:15 AM IST
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಸರ್ಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಮನೋಬಲ ವೃದ್ಧಿಗಾಗಿ ಮಾನಸಿಕ ತಜ್ಞರು ಹಾಗೂ ಉನ್ನತ ಅಧಿಕಾರಿಗಳ ಸಲಹೆ ಮೇರೆಗೆ ಯೋಗಾಭ್ಯಾಸ ಮತ್ತು ಗ್ರಾಮೀಣ ಸೊಗಡಿನ ಪಾರಂಪರಿಕ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಮೂಲಕ ನೊಂದ ಮನಸ್ಸುಗಳಿಗೆ ಸಮಾಧಾನ ನೀಡುವ ಕಾರ್ಯ ಜಿಲ್ಲಾಡಳಿತ ಪ್ರಾರಂಭಿಸಿದೆ.
ಯೋಗಾಭ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ, ಜೀವ ಹಾನಿ ಅನುಭವಿಸಿರುವ ಕುಟುಂಬಗಳಲ್ಲಿ ಸದ್ಯ ಮುಂದೇನು ಎಂಬ ಆತಂಕ ಆವರಿಸಿದೆ. ಹೀಗಾಗಿ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಬದುಕಿನಲ್ಲಿ ಭರವಸೆ ಮೂಡಿಸಲು ಮಾನಸಿಕ ತಜ್ಞರಿಂದ ಸಮಾಲೋಚನೆ ಮಾಡಿಸುವ ಕಾರ್ಯ ಈಗಾಗಲೆ ಕೊಡಗು ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿ ಆರಂಭವಾಗಿದೆ. ಸದ್ಯ ಜಿಲ್ಲೆಯಲ್ಲಿ 51 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 6,900 ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಪೈಕಿ ಪುರುಷರು ಸುಮಾರು 3,000ದಷ್ಟಿದ್ದರೆ, ಮಹಿಳೆಯರ ಸಂಖ್ಯೆ ಸುಮಾರು 3,400 ಹಾಗೂ ಮಕ್ಕಳ ಸಂಖ್ಯೆ ಸುಮಾರು 500. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಾನಸಿಕ ತಜ್ಞ ವೈದ್ಯರಾದ ಡಾ| ರೂಪೇಶ್ ಗೋಪಾಲ್ ಅವರು ಜತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಿಷನ್ ಡೈರೆಕ್ಟರ್ ಆಗಿರುವ ಡಾ. ರತನ್ ಕೇಲ್ಕರ್ ಹಾಗೂ ಹಾಗೂ ಉನ್ನತ ಅಧಿಕಾರಿಗಳ ಸಲಹೆಯಂತೆ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರ ಮನೋಬಲವೃದ್ಧಿಗಾಗಿ ಹಾಗೂ ನೊಂದ ಮನಸುಗಳನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪರಿಹಾರ ಕೇಂದ್ರಗಳಲ್ಲಿ ಯೋಗಾಭ್ಯಾಸ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಗ್ರಾಮೀಣ ಸೊಗಡಿನ ಪಾರಂಪರಿಕ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಪರಿಹಾರ ಕೇಂದ್ರಗಳಲ್ಲಿ ಪ್ರೊಜೆಕ್ಟರ್‌ಗಳ ಮೂಲಕ ಚಲನಚಿತ್ರ ಪ್ರದರ್ಶನ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ಆಟಿಕೆ ವಸ್ತುಗಳ ಪೂರೈಕೆ ಮಾಡಲಾಗುತ್ತಿದ್ದು, ನೊಂದ ಪಾಲಕರಿಗೆ ಮಕ್ಕಳಿಂದ ಇನ್ನಷ್ಟು ತೊಂದರೆಯಾಗದಿರಲಿ ಎಂಬುದು ಹಾಗೂ ಮಕ್ಕಳು ಖುಷಿಯಿಂದ ಕಾಲ ಕಳೆಯುವುದನ್ನು ಕಂಡು ಪಾಲಕರ ಮನಸ್ಸು ಕೂಡ ಉಲ್ಲಸಿತಗೊಳ್ಳಲಿದೆ ಎಂಬುದು ಜಿಲ್ಲಾಡಳಿತದ ಸದಾಶಯ.
ಯೋಗಾಭ್ಯಾಸ ನಡೆಸಲು ಯೋಗ ಶಿಕ್ಷಕರ ಬಳಕೆ
ವಿಚಲಿತಗೊಂಡಿರುವ ಮನಸ್ಸನ್ನು ಶಾಂತಗೊಳಿಸಲು, ಸಮಾಧಾನಗೊಳಿಸಲು ಯೋಗ ಒಳ್ಳೆಯ ಮಾರ್ಗವಾಗಿದೆ. ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ, ಸಂತ್ರಸ್ತರ ಮನಸ್ಸನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ 30 ಜನರ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಇವರು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಯೋಗಾಭ್ಯಾಸ ಪ್ರಾರಂಭಿಸಿದ್ದು, ಸಂತ್ರಸ್ತರು ಯೋಗಾಭ್ಯಾಸಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆಸಕ್ತಿಯಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಪರಿಹಾರ ಕೇಂದ್ರಗಳಲ್ಲಿ ಕಂಡುಬರುತ್ತಿದೆ.
ಯೋಗಾಭ್ಯಾಸ ಚಟುವಟಿಕೆ ಹಾಗೂ ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಯುಳ್ಳ ಕಾರ್ಯಕ್ರಮಗಳು ಸಂತ್ರಸ್ತರ ಮನಸ್ಸುಗಳನ್ನು ಶಾಂತಗೊಳಿಸಿ, ಬದುಕಿನ ಬಗ್ಗೆ ಭರವಸೆಯ ಹೊಂಗಿರಣ ಮೂಡಿಸಲು ಎನ್ನುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಿಷನ್ ಡೈರೆಕ್ಟರ್ ಆಗಿರುವ ಡಾ| ರತನ್ ಕೇಲ್ಕರ್.
ಬದುಕಿಗೆ ಭರವಸೆ ಮೂಡಿಸುವ ಯತ್ನ
ಪ್ರೀತಿ ಪಾತ್ರರನ್ನು ಅಥವಾ ಮನೆಗಳನ್ನು ಕಳೆದುಕೊಂಡು, ಮುಂದೇನು ಎನ್ನುವ ಆತಂಕದಲ್ಲಿರುವ ನಿರಾಶ್ರಿತರು ಹಾಗೂ ಸಂತ್ರಸ್ತರಲ್ಲಿ ಬದುಕು ಕಟ್ಟಿಕೊಳ್ಳುವ ಭರವಸೆಯನ್ನು ನೊಂದ ಮನಸುಗಳಿಗೆ ನೀಡಬೇಕಿದೆ. ಇಂತಹವರಿಗೆ ಸಮಾಲೋಚನೆ ನಡೆಸುವ ಮೂಲಕ, ಸರ್ಕಾರ ನಿಮ್ಮೊಂದಿಗೆ ಸದಾ ಇದೆ. ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ. ಸದ್ಯ ಸರ್ಕಾರ ಜನರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಪಡೆದು, ಶೀಘ್ರದಲ್ಲೇ ಪುನರ್ವಸತಿ ಕಾರ್ಯ, ಮನೆ ಕಳೆದುಕೊಂಡವರಿಗೆ ಮನೆ, ಜೀವ ಹಾನಿ ಅನುಭವಿಸಿರುವವರಿಗೆ ಹಣಕಾಸಿನ ನೆರವು ಪರಿಹಾರ ದೊರಕಿಸುವ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಅಲ್ಲದೆ ವಯಕ್ತಿಕ ಶ್ಮಚಿತ್ವ ಕಾಪಾಡಿಕೊಳ್ಳುವುದು, ಆರೋಗ್ಯ ರಕ್ಷಣೆಗಾಗಿ ಪರಿಹಾರ ಕೇಂದ್ರಗಳಲ್ಲಿ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.