ಸಮಸ್ಯೆಗಳ ಆಗರ ಕೂಡ್ಲಿಗಿ ಡಿಪೋ
7 ಲಕ್ಷ ಕಿಮೀ ದಾಟಿದ 40ಕ್ಕೂ ಹೆಚ್ಚು ಬಸ್‌ಗಳ ಸಂಚಾರ
Team Udayavani, Jun 9, 2019, 11:34 AM IST
ಕೂಡ್ಲಿಗಿ: ಬಸ್ ಡಿಪೋದಲ್ಲಿರುವ ಹಳೆಯ ಬಸ್‌ಗಳು
ಕೂಡ್ಲಿಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಸಾರಿಗೆ ಬಸ್ ಡಿಪೋ ಅವ್ಯವಸ್ಥೆಯ ಆಗರವಾಗಿದೆ.
ಹೌದು, ಡಿಪೋ ಒಳಗೆ ಕಾಲಿಟ್ಟರೆ ಗುಜರಿಗೆ ಹೋಗುವ ಬಸ್‌ಗಳೇ ಕಾಣಿಸುತ್ತವೆ. ಜಿಲ್ಲೆಯಲ್ಲಿಯೇ ಅತೀ ಹಳೆಯ ಡಿಪೋದಲ್ಲಿ ಇದೂವರೆಗೂ ಒಂದೇ ಒಂದು ಗುಣಮಟ್ಟದ ಬಸ್ ಕಂಡು ಬಂದಿಲ್ಲ. ಎಲ್ಲಿ ನೋಡಿದರೂ ಹಳೆಯ ಬಸ್‌ಗಳು ಕಂಡು ಬರುತ್ತವೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ನೀರು ಸಹ ಇಲ್ಲ. ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಇಲ್ಲಿಯ ಜನತೆಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.
5 ವರ್ಷಗಳಿಂದ 118 ಬಸ್‌ಗಳಿದ್ದವು. 96 ಮಾರ್ಗಗಳಿದ್ದವು. ಆದರೆ ಈಗ ಕೇವಲ 83 ಮಾರ್ಗಗಳಿಗೆ 88 ಸಾರಿಗೆ ಬಸ್ ಗಳಿಗೆ ಡಿಪೋ ಬಂದು ನಿಂತಿದೆ. ಇತ್ತೀಚೆಗೆ ಪ್ರಾರಂಭವಾದ ಹಗರಿಬೊಮ್ಮನಹಳ್ಳಿ, ಸಂಡೂರು ಡಿಪೋಗಳಲ್ಲಿ ರಾಜಹಂಸ ಬಸ್‌ಗಳಿದ್ದರೂ ಕೂಡ್ಲಿಗಿ ಡಿಪೋದಲ್ಲಿ ಒಂದೇ ಒಂದು ರಾಜಹಂಸ ಬಸ್ ಇಲ್ಲ ಎಂದರೆ ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಗೊತ್ತಾಗುತ್ತದೆ. ಇಲ್ಲಿಯ ಬಹುತೇಕ ಬಸ್‌ಗಳು ಹಳೆ ಡಕೋಟಾ ಬಸ್‌ಗಳೇ ಆಗಿವೆ. ಏಳು ಲಕ್ಷ ಕಿ.ಮೀ ಪ್ರಯಾಣಿಸಿದ ಸುಮಾರು 40ಕ್ಕೂ ಅಧಿಕ ಬಸ್‌ಗಳು ಪ್ರಯಾಣಿಕರನ್ನು ದಿನವೂ ಹೊತ್ತೂಯ್ಯುತ್ತವೆ. ಹಗರಿಬೊಮ್ಮನಹಳ್ಳಿ ಡಿಪೋದಿಂದ 4 ಹಳೆಯ ಬಸ್‌ಗಳು, ಹೊಸಪೇಟೆಯಿಂದ 7 ಹಳೆಯ ಬಸ್‌ಗಳು, ಸಂಡೂರು ಡಿಪೋದಿಂದ 1 ಹಳೇ ಬಸ್ ಕೂಡ್ಲಿಗಿ ಡಿಪೋಗೆ ಬಂದಿವೆ. ಕೂಡ್ಲಿಗಿ ಡಿಪೋಗೆ ಬರಬೇಕಾದ ಹೊಸ ಬಸ್‌ಗಳ ಬದಲಾಗಿ ಬೇರೆ ಡಿಪೋಗಳಿಗೆ ನೀಡಿ ಅವುಗಳ ಬದಲಾಗಿ ಹಳೆಯ ಬಸ್‌ಗಳನ್ನು ನೀಡುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ನೀರಿಲ್ಲ. ಹೀಗಾಗಿ ಡಿಪೋ ಸಮಸ್ಯೆಗಳ ಆಗರವಾಗಿದೆ. ಅಧಿಕಾರಿಗಳ ಆಲಸ್ಯದಿಂದ ಹಾಗೂ ಈ ಡಿಪೋದ ಗತವೈಭವ ಮರೆಯಾಗಿದೆ. ಆದರೂ ಯಾವೊಬ್ಬ ಜನಪ್ರತಿನಿಧಿಗಳು ಸಹ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದು ದುರ್ದೈವವೇ ಸರಿ.
ಕೂಡ್ಲಿಗಿ ಡಿಪೋಕ್ಕೆ ಉತ್ತಮ ಆದಾಯ ತಂದುಕೊಡುವ ಮಾರ್ಗಗಳನ್ನು ರದ್ದು ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಕುಡಿಯಲು ಪ್ರಯಾಣಿಕರಿಗೆ ನೀರು ಸಿಗುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಗಬ್ಬು ವಾಸನೆ ಬರುತ್ತೆ. ಇಲ್ಲಿ ಸ್ವಚ್ಛತೆ ಇಲ್ಲ. ಈ ಹಿಂದೆ ಇದ್ದ ಗುಲ್ಬರ್ಗಾ, ಉಜ್ಜಿನಿ-ಬಳ್ಳಾರಿ, ಮಂತ್ರಾಲಯ, ಕೊಟ್ಟೂರು-ಹಗರಿಬೊಮ್ಮನಹಳ್ಳಿ- ಬೆಂಗಳೂರು ಮುಂತಾದ ಹಳೆಯ ಮಾರ್ಗಗಳು ರದ್ದಾಗಿವೆ. ಈಶಾನ್ಯ ಸಾರಿಗೆ ವಿಭಾಗದ ಅಧಿಕಾರಿಗಳು ಮಲತಾಯಿ ಧೋರಣೆ ತೋರಿದ್ದಾರೆ.
•ರಿಯಾಜ್ ಪಾಷಾ,
ಕಾರ್ಯದರ್ಶಿ ರೈತ ಹಿತ ರಕ್ಷಣಾ ವೇದಿಕೆ
ನಾನು ಅಧಿಕಾರ ವಹಿಸಿಕೊಂಡು 5 ತಿಂಗಳಾಯಿತು. ಹೊಸಪೇಟೆ ವಿಭಾಗಕ್ಕೆ ಸೇರುವ ಎಲ್ಲ ಡಿಪೋಗಳನ್ನು ವ್ಯವಸ್ಥಿತವಾಗಿ ಕೊಂಡೊಯ್ಯಲು ಸೂಕ್ತ ಯೋಜನೆ ಹಾಕಿಕೊಂಡಿದ್ದೇವೆ. ಬಸ್‌ಗಳ ಸಮಸ್ಯೆಗಳ ಒಂದೇ ಸಲ ಬಗೆಹರಿಸುವುದಕ್ಕೆ ಆಗುವುದಿಲ್ಲ. ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಿ ನಂತರ ಹೊಸ ವಾಹನಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಮಗೆ ನಾನ್ ಎಸಿ ಸ್ಲೀಪರ್ ಬಸ್‌ನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನೀಡುತ್ತಾರೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಶಾಸಕರ ಗಮನಕ್ಕೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.
•ಜಿ. ಸೀನಯ್ಯ,
ಹೊಸಪೇಟೆ ವಿಭಾಗೀಯ ನಿಯಂತ್ರಣ ಅಧಿಕಾರಿ.