ರಸ್ತೆ ಅಭಿವೃದ್ಧಿ 70 ಕೋಟಿ ರೂ.ಗೆ ತಡೆ
Team Udayavani, Sep 17, 2019, 4:21 PM IST
ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು.
ಮಾಸ್ತಿ: ಹಿಂದಿನ ಸಮ್ಮಿಶ್ರ ಸರ್ಕಾರ ತಾಲೂಕಿನ ರಸ್ತೆಗಳ ಕಾಮಗಾರಿಗೆ ಬಿಡುಗಡೆ ಮಾಡಿದ್ದ 220 ಕೋಟಿ ರೂ.ನಲ್ಲಿ ಬಿಜೆಪಿ ಸರ್ಕಾರ 70 ಕೋಟಿ ರೂ. ತಡೆ ಹಿಡಿದಿದ್ದು, ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಆರೋಪಿಸಿದರು.
ಹೋಬಳಿಯ ದಿನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ದುಡ್ಡಲ್ಲಿ 70 ಕೋಟಿ ರೂ. ವರ್ಕ್‌ಆರ್ಡರ್, ಹಲವು ಮಂಜೂರಾತಿ ಅನುದಾನ ತಡೆಹಿಡಿದಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭೆಯಲ್ಲಿ ಚರ್ಚಿಸಿ, ಸದನದಲ್ಲಿ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ವರ್ಷದೊಳಗೆ ಹಾಸ್ಟೆಲ್ ನಿರ್ಮಾಣ: ಕೋಚಿಮುಲ್ ಅಧ್ಯಕ್ಷನಾಗಿ 8 ತಿಂಗಳ ಅಡಳಿತಾವಧಿಯಲ್ಲಿ ಎಂ.ವಿ.ಕೆ.ಗೋಲ್ಡನ್ ಮೆಗಾ ಡೇರಿ ಹಾಗೂ ಬೆಂಗಳೂರಿನಲ್ಲಿ ಹಾಲು ಉತ್ಪಾದಕ ರೈತರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹಾಸ್ಟೆಲ್ ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ವರ್ಷದೊಳಗೆ ಪೂರ್ಣಗೊಳ್ಳಲಿದೆ. 350 ಮಕ್ಕಳು ಅದರ ಅನುಕೂಲ ಪಡೆಯಲಿದ್ದಾರೆ ಎಂದರು.
ಶಾಸಕನಾಗಿ ಆಯ್ಕೆಯಾದ ಬಳಿಕ ಕೋಚಿಮುಲ್ಗೆ ತಾಲೂಕಿನಿಂದ ಬೇರೆಯವರನ್ನು ಕಳುಹಿಸಿಕೊಡಲು ನಿರ್ಧಾರ ಮಾಡಲಾಗಿತ್ತು. ಎಂ.ವಿ.ಕೆ.ಗೋಲ್ಡನ್ ಮೆಗಾ ಡೇರಿ, ಹಾಸ್ಟೆಲ್ ನಿರ್ಮಾಣವಾಗುವ ಕುರಿತು ಸಂಸ್ಥೆಯ ಅಧಿಕಾರಿಗಳು ಹಾಗೂ ಹಿತೈಷಿಗಳ ಸಲಹೆಯಂತೆ ಮತ್ತೂಮ್ಮೆ ಕೋಚಿಮುಲ್ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು. ಮಾಲೂರಿನಲ್ಲಿ ರಾಜ್ಯದಲ್ಲಿಯೇ ಮಾದರಿಯಲ್ಲಿ ಶಿಬಿರ ಕಚೇರಿ ನಿರ್ಮಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಿಸಿಕೊಳ್ಳಲು ಕೋಚಿಮುಲ್ನಿಂದ 3 ಲಕ್ಷ ರೂ. ಹಾಗೂ ಕೆಎಂಎಫ್ನಿಂದ 3 ಲಕ್ಷ ರೂ. ನೀಡಲಾಗುತ್ತಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ನೀಡುತ್ತಿರುವುದರಿಂದ ಹಾಲು ಒಕ್ಕೂಟವು ಪ್ರಗತಿ ಸಾಧಿಸುತ್ತಿದೆ ಎಂದರು.
19ರಂದು ಪ್ರಶಸ್ತಿ ವಿತರಣೆ: ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ತಾಲೂಕು ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ. ಅದೇ ರೀತಿಯಾಗಿ ಪ್ರತಿದಿನ ಅಂದಾಜು 2500 ಲೀಟರ್ ಹಾಲು ಉತ್ಪಾದಿಸುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಸಹಕಾರ ಸಂಘವಾಗಿ ಹೊರಹೊಮ್ಮಿರುವ ದಿನ್ನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಸೆ.19ರಂದು ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಅಶ್ವತ್ಥ್ನಾರಾಯಣಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಅಧ್ಯಕ್ಷೆ ತ್ರಿವರ್ಣರವಿ, ಕೋಚಿಮುಲ್ ಸಹಾಯಕ ವ್ಯವಸ್ಥಾಪಕ ಶ್ರೀಧರಮೂರ್ತಿ ಇನ್ನಿತರರು ಮಾತನಾಡಿದರು. ಸಭೆಯಲ್ಲಿ ಕೋಚಿಮುಲ್ ನಿರ್ದೇಶಕಿ ಆರ್.ಕಾಂತಮ್ಮ, ಅಂಜನಿ ಸೋಮಣ್ಣ, ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಎಂ.ಪಿ.ಚೇತನ್, ವಿಸ್ತರಣಾಧಿಕಾರಿ ಕರಿಯಣ್ಣ, ಹುಲ್ಲೂರಪ್ಪ, ಸಂಘದ ಉಪಾಧ್ಯಕ್ಷ ಎಂ.ಅಶ್ವಥನಾರಾಯಣಪ್ಪ, ನಿರ್ದೇಶಕ ಡಿ.ಬಿ.ಬಸವರಾಜು, ಡಿ.ಎನ್.ಆಂಜಿನಪ್ಪ, ಬಿ.ಎನ್.ಜೊನ್ನಪ್ಪ, ಮುನಿರಾಜಪ್ಪ, ಅಶ್ವತ್ಥಪ್ಪ, ಕಾಳಾಚಾರಿ, ಕೆ.ವಿ.ಗಿರಿ, ಮೈಲಾರಪ್ಪ, ಕೆಂಪಣ್ಣ, ಸೊಕ್ಕಮ್ಮ, ಗೋವಿಂದಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ನಾರಾಯಣಗೌಡ, ಗೋಪಾಲಪ್ಪ, ವಕಿಲ ರವಿ, ಹಾಲು ಪರಿವೀಕ್ಷಕ ಡಿ.ಎಂ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.