ಅಪರಿಚಿತರ ಬಗ್ಗೆ ಎಚ್ಚರ: ಎಸ್ಪಿ
Team Udayavani, Apr 29, 2019, 10:27 AM IST
ಮುಳಬಾಗಿಲು: ತಾಲೂಕಿನಲ್ಲಿ ಯಾರೇ ಅನುಮಾನಾಸ್ಪದವಾಗಿ ಕಂಡು ಬಂದರೂ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಮುಖ್ಯವಾಗಿ ಅಪರಾಧಗಳ ತಡೆಗೆ ಅಲ್ಲದೇ ಅಪರಾಧ ಪತ್ತೆಗಾಗಿ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೇ, ಈ ಕುರಿತು ಜನರೂ ಸಾಕಷ್ಟು ಜಾಗೃತರಾಗಿಬೇಕು ಎಂದು ತಿಳಿಸಿದರು.
ಅಪರಿಚಿತರ ಬಗ್ಗೆ ಎಚ್ಚರ: ಮನೆ ಬಾಗಿಲಿಗೆ ಒಳಗಡೆಯಿಂದ ಡೋರ್ ಲಾಕ್ ಅಳವಡಿಸಿ ಕಳವಾಗುವುದನ್ನು ತಪ್ಪಿಸಿ, ಅಪರಿಚಿತರು ಮನೆಗೆ ಬಂದರೆ ಪರೀಕ್ಷಿಸಿದೇ ಒಳಗೆ ಕರೆದುಕೊಳ್ಳಬಾರದು, ಮಹಿಳೆಯರು ರಸ್ತೆಯಲ್ಲಿ ನಡೆದು ಹೋಗುವಾಗ ನಿಮ್ಮ ಹಿಂದೆ ಮತ್ತು ಮುಂದೆ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರವಾಗಿರಬೇಕೆಂದರು.
ಪೊಲೀಸರಿಗೆ ಮಾಹಿತಿ ನೀಡಿ: ನಿಮ್ಮ ಕಾರು ಅಥವಾ ಜೀಪುಗಳಲ್ಲಿ ವಸ್ತುಗಳನ್ನು ಇಟ್ಟು ಬೀಗ ಹಾಕದೇ ಇರಬೇಡಿ, ಎಟಿಎಂ ಕಾರ್ಡ್ ಹಿಂದೆ ನಿಮ್ಮ ಗುಪ್ತ ಪಿನ್ ಕೋಡನ್ನು ಬರೆಯಬೇಡಿರಿ. ಎಟಿಎಂನಲ್ಲಿ ಹಣ ಪಡೆಯುವಾಗ ಅಪರಿಚಿತರ ಸಹಾಯ ಪಡೆಯಬೇಡಿ, ಮೈಮೇಲೆ ಹೇಸಿಗೆ ಎರಚಿ ಗಮನ ಬೇರೆಡೆ ಸೆಳೆದು ಹಣದ ಚೀಲ/ಪೆಟ್ಟಿಗೆ ಕದಿಯುತ್ತಿರುವ ಕಳ್ಳರ ಬಗ್ಗೆ ಎಚ್ಚರವಿರಲಿ, ಅಪರಿಚಿತರು-ಸಂಶಯಾಸ್ಪದ ವ್ಯಕ್ತಿಗಳು ದಾಖಲೆಯಿಲ್ಲದೇ ಮೊಬೈಲ್ ಅಥವಾ ಇನ್ನಾವುದೇ ಸ್ವತ್ತಿನ ವಸ್ತುಗಳನ್ನು ಮಾರಾಟ ಮಾಡಲು ಅಥವಾ ಅಡ ಇಡಲು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳಿಗೆ ಕಡಿವಾಣ ಹಾಕಬೇಕೆಂದರು.
ನಿರ್ಲಕ್ಷ್ಯ ವಹಿಸದಿರಿ: ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವುದೇ ತಮ್ಮ ಮೂಲ ಉದ್ದೇಶ. ಯಾರೇ ಜನಸಾಮಾನ್ಯರು ಪೊಲೀಸ್ ಠಾಣೆಗೆ ಬಂದರೂ ಪೊಲೀಸರಿಗೆ ಭಯಪಡದೇ ಕಾನೂನು ಕ್ರಮ ಕೈಗೊಳ್ಳಬಹುದು. ಒಂದು ವೇಳೆ ಯಾವುದೇ ಪೊಲೀಸರು ತಮ್ಮ ಕೆಲಸ ಮಾಡಿಕೊಡದೇ ನಿರ್ಲಕ್ಷ್ಯಿಸಿದ್ದಲ್ಲಿ ಅವರ ಹೆಸರನ್ನು ತಿಳಿದುಕೊಂಡು ಅವರ ವಿರುದ್ಧ ತಮ್ಮ ಕಚೇರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜನಸಾಮಾನ್ಯರೂ ಪೊಲೀಸರು ಸೂಚಿಸುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.