ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಗೆ ಖಂಡನೆ
Team Udayavani, Mar 5, 2023, 3:43 PM IST
ಕೋಲಾರ: ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಪ್ರಧಾನಿ ಮೋದಿ ಅವರ ಅಚ್ಚೇ ದಿನದ ಪರಿಣಾಮ ಗೃಹ ಬಳಕೆಯ ಸಿಲಿಂಡರ್ ಬೆಲೆ 1200 ರೂ. ಗಡಿ ದಾಟಿಹೋಗಿದೆ. ಕೇಂದ್ರದ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವರು ಅದರಲ್ಲೂ ಕೂಲಿ ಕಾರ್ಮಿಕ, ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಶಾಕ್‌ಗೆ ತತ್ತರಿಸಿ ಹೋಗಿದ್ದಾರೆ. ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದವರು ಇಂತಹ ದರ ಏರಿಕೆಯಿಂದ ಕಷ್ಟಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಮಹಿಳಾ ನಾಯಕರು ಎಲ್ಲಿದ್ದಾರೆ: 2014ರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅಡುಗೆ ಸಿಲಿಂಡರ್ ದರ ಕೇವಲ 410 ರೂ. ಇತ್ತು. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ 1200 ರೂ. ಮಾಡಿದೆ. ಅವತ್ತು ಕಾಂಗ್ರೆಸ್ 10 ರೂ. ಏರಿಕೆ ಮಾಡಿದರೆ ಸಾಕು, ಬಿಜೆಪಿ ಮಹಿಳಾ ಮುಖಂಡರಾದ ಮಾಳವಿಕ ಅವಿನಾಶ್, ತಾರಾ, ಶೋಭಾ ಕರಂದ್ಲಾಜೆ, ಶಶಿಕಲಾ ಜೊಲ್ಲೆ ಬೀದಿಯಲ್ಲಿ ಪ್ರತಿಭಟನೆಗಳು ಮಾಡಿದ್ದೇ ಮಾಡಿದ್ದೇ. ಇವತ್ತು ಇವರು ಬದುಕಿದ್ದಾರೆ ಎಂದು ಪ್ರಶ್ನೆ ಮಾಡಬೇಕಾಗಿದೆ. ಇವರು ಹೆಣ್ಣು ಮಕ್ಕಳ ಕಷ್ಟ ಗೊತ್ತಿಲ್ಲದ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳಿವೇ ಕೊಡದೆ ಸಬ್ಸಿಡಿ ರದ್ದು: ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಮತಿ ಶ್ರೀನಿವಾಸ್ ಮಾತನಾಡಿ, ಯುಪಿಎ ಸರ್ಕಾರವಿದ್ದಾಗ ಗ್ಯಾಸ್‌ಗೆ ಸಬ್ಸಿಡಿ ದೊರೆಯುತ್ತಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ ಯುಪಿಎ ಸರ್ಕಾರ ನೋಡಿಕೊಂಡಿತ್ತು. ಆದರೆ, ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಎನ್ನುವುದು ಮೋದಿ ಸರ್ಕಾರದ ಉದ್ದೇಶವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಜನಸಾಮಾನ್ಯರು ಬದುಕುವುದು ಕಷ್ಟ: ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಮಾತನಾಡಿ, ಕೇಂದ್ರ ಸರ್ಕಾರ ಬಡವರ ವಿರೋಧಿ ಸರಕಾರವಾಗಿದೆ. ಕೇವಲ ಶ್ರೀಮಂತರ ಪರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಮಹಿಳಾ ವಿರೋಧಿ ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಇಲ್ಲದೇ ಹೋದರೆ ಸಾಮಾನ್ಯ ವರ್ಗದ ಜನರು ಬದುಕುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಧಾ, ಸುಜಾತ, ನಾಗಮ್ಮ, ಜಯಲಕ್ಷ್ಮೀ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡರಾದ ರೂಪ, ಶಾಂತಮ್ಮ, ಅಪೋಜ ಬಾನು, ಸರಸ್ವತಿ, ಶಶಿಕಲಾ, ಮುಂತಾದವರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.