ಕುಡಿವ ನೀರಿಗೆ ತೊಂದರೆ ಆಗದಿರಲಿ
Team Udayavani, Sep 4, 2020, 3:17 PM IST
ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2020-21 ನೇ ಸಾಲಿನ ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆಯ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಯಾವ್ಯಾವ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿಗೆ ಪ್ರಾಮಾಣಿಕವಾಗಿ ಅನುದಾನ ಬಳಸಿ ಕುಡಿಯುವ ನೀರನ್ನು ಪೂರೈಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದಿಂದ ಹೆಚ್ಚಿನ ಅನುದಾನ: ಜನವಸತಿ ಪ್ರದೇಶಗಳು ಹೆಚ್ಚಾದಂತೆ ಈ ಮಾಹಿತಿಯನ್ನು ಐಎಂಇಎಸ್ ನಲ್ಲಿ ಅಪ್‌ಲೋಡ್ ಮಾಡಿ ಇದರಿಂದ ಮುಂದಿನ ವರ್ಷಗಳಲ್ಲಿ ಆ ಪ್ರದೇಶಗಳಿಗೂ ಸೇರಿದಂತೆ ಹೆಚ್ಚಿನ ಅನುದಾನ ಸರ್ಕಾರದಿಂದ ಬರುತ್ತದೆ ಎಂದು ಹೇಳಿದರು.
ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ: ಮಾಲೂರು ತಾಲೂಕಿನ ಮಾರ್ಕಂಡೇಯ ಡ್ಯಾಂ ಕುಡಿಯುವ ನೀರಿನ ಕಾಮಗಾರಿಯನ್ನು 2008 ರಲ್ಲಿ ಕೈಗೆತ್ತಿಕೊಂಡಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ಸೂಚಿಸಿದರು.
ಭೂ ವಿಜ್ಞಾನಿಗಳಿಗೆ ಸೂಚನೆ: ಕೊಳವೆ ಬಾವಿಗಳನ್ನು ಕೊರೆಯಲು ಲಾರಿ ಎಲ್ಲಿಯವರೆಗೆ ಹೋಗುತ್ತದೆ ಅಲ್ಲಿಯೆ ಮಾತ್ರ ಪಾಯಿಂಟ್ ಮಾಡಿ ಬೋರ್ ವೆಲ್ ಕೊರೆಸುತ್ತಾರೆ ಎಂದು ದೂರು ಗಳಿವೆ. ಆದ್ದರಿಂದ ನೀರು ದೊರೆ ಯುವ ಪ್ರದೇಶಕ್ಕೆ ಲಾರಿಯನ್ನು ತೆಗೆದು ಕೊಂಡು ಹೋಗಿ ಕೊಳವೆ ಬಾವಿ ಕೊರೆಸು ವಂತೆ ಹಿರಿಯ ಭೂ ವಿಜ್ಞಾನಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಸೌಲಭ್ಯ: ಮಾಲೂರು ತಾಲೂಕಿನ ಕಾರ್ಯಪಾಲಕ ಅಭಿಯಂತರ ನಾರಾಯಣಸ್ವಾಮಿ ಮಾತನಾಡಿ, ಮಾರ್ಕಂಡೇಯ ಡ್ಯಾಂ ನಿಂದ ತಾಲೂಕಿನ ಟೇಕಲ್, ಬನಹಳ್ಳಿ, ನೂಟವೆ ಗ್ರಾಮ ಪಂಚಾಯ್ತಿಗಳ 23 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜು, ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು, ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.