ಗ್ರಾಮೀಣ ಭಾಗದಲ್ಲಿ ದೀಪಾವಳಿ ಆಚರಣೆಯೇ ವಿಶೇಷ
Team Udayavani, Oct 27, 2019, 3:02 PM IST
ಟೇಕಲ್: ಮುಂಗಾರು ಬೆಳೆ ಕೊಯ್ಲಿನ ಸಮಯಕ್ಕೆ ಬರುವ ಬೆಳಕಿನ ಹಬ್ಬ ದೀಪಾವಳಿಯನ್ನು ಹೋಬಳಿಯ ಗ್ರಾಮೀಣ ಭಾಗಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಇತ್ತೀಚಿಗೆ ಮಳೆ ಉತ್ತಮವಾಗಿ ಸುರಿದ ಕಾರಣ ಎಲ್ಲೆಡೆ ಹಸಿರುಕಳೆ ಕಟ್ಟಿದೆ. ಗುಂಡಿಗಳಿಗೂ ನೀರು ಬಂದಿದೆ. ಹೀಗಾಗಿ ಸಂತಸಗೊಂಡಿರುವ ರೈತರು, ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ. ಸಂಪ್ರದಾಯದಂತೆ ಬಿದಿರಿನ ಮೊರದಲ್ಲಿ ಪೂಜಾ ಸಾಮಗ್ರಿಗಳನ್ನಿಟ್ಟು ಬ್ರಾಹ್ಮಣರ ಮನೆಗೆ, ದೇಗುಲಗಳಿಗೆ ಅಥವಾ ವೀಳ್ಯದೆಲೆ ತೋಟಗಳಲ್ಲಿರುವ ಬಾಳೆಗಿಡಗಳ ಬಳಿ ಅರಿಶಿಣ ಕುಂಕುಮ, ಕೆಂಪಕ್ಕಿಯಲ್ಲಿ ಮಾಡಿದ ಕಜ್ಜಾಯ, ನೋಮುದಾರ, ಬಾಳೆಹಣ್ಣು, ತೆಂಗಿನಕಾಯಿ, ಕಡ್ಡಿ ಕರ್ಪೂರ, ತಾಮ್ರದ ನಾಣ್ಯ, ಕಳೆದ ವರ್ಷ ಕಟ್ಟಿಕೊಂಡಿದ್ದ ನೋಮುದಾರ ಸೇರಿ ಇತರೆ ಸಾಮಗ್ರಿಗಳನ್ನು ದೇವರ ಪಕ್ಕ ಇಟ್ಟು ಪೂಜೆ ಮಾಡುತ್ತಾರೆ.
ದೇವರಿಗೆ ಅರ್ಪಣೆ: ಮನೆಗೆ ಬಂದ ನಂತರ ಇಷ್ಟ ದೇವರಿಗೆ ಪೂಜೆ ಮಾಡಿ, ಮನೆಯವರೆಲ್ಲರೂ ನೋಮುದಾರಗಳನ್ನು ಕಟ್ಟಿಕೊಳ್ಳುತ್ತಾರೆ. ನಂತರ ಸಾಮೂಹಿಕವಾಗಿ ಹಬ್ಬದ ಊಟ ಮಾಡುತ್ತಾರೆ. ಇಲ್ಲಿ ನೋಮುವ ಪದ್ಧತಿಗಳಲ್ಲಿ ಎರಡು ವಿಧ. ಮೊದಲನೇಯದು ಎಣಿಕೆಯ ನೋಮು, ಎರಡನೇಯದು ರಾಶಿ ನೋಮು ಆಗಿದೆ. ಎಣಿಕೆ ನೋಮಿನವರು ಪೂಜೆಗಿಡುವ ಸಾಮಗ್ರಿಗಳೆಲ್ಲವೂ ಬೆಸ ಸಂಖ್ಯೆಯಲ್ಲಿಟ್ಟು ನಂತರ ಸ್ವಲ್ಪ ಅದಕ್ಕೆ ಸೇರಿಸಿ ನೋಮುತ್ತಾರೆ. ರಾಶಿ ನೋಮಿನವರು ಎಲ್ಲಾ ಪೂಜಾ ಸಾಮಗ್ರಿಗಳನ್ನು ದೇವರಿಗಿಡುತ್ತಾರೆ.
ಗೌರಿಗೆ ಅಕ್ಷತೆ: ಗ್ರಾಮೀಣ ಭಾಗದಲ್ಲಿ ಬ್ರಾಹ್ಮಣರ ಮನೆಯಲ್ಲಿ ಗೌರಿ ಪ್ರತಿಷ್ಠಾಪಿಸಿದ್ದರೆ ಅಲ್ಲಿ ಹೋಗಿ ಪೂಜೆ ಮಾಡಿ ಬರುತ್ತಾರೆ. ಅಲ್ಲಿ ವಿಶೇಷವಾಗಿ ದೀಪಾವಳಿ ಮಹತ್ವ ಸಾರುವ ಕೇದಾರೇಶ್ವರ ವ್ರತದ ಕಥೆ ಓದುತ್ತಾರೆ. ಅದನ್ನು ವೃದ್ಧರಿಂದ ಹಿಡಿದು ಮಕ್ಕಳು ಸಹ ಶ್ರದ್ಧಾಭಕ್ತಿಗಳಿಂದ ಕೇಳ್ಳುತ್ತಾರೆ. ಕಥೆಯಲ್ಲಿ ಸಾಂದರ್ಭಿಕವಾಗಿ ಗೌರಿ ವಿಗ್ರಹದ ಮೇಲೆ ಅಕ್ಷತೆ ಹಾಕಿ. ನಂತರ ಪೂಜೆ ಸಲ್ಲಿಸಿ, ಮನೆಗಳಿಗೆ ಹಿಂತಿರುಗಿ ನೋಮುದಾರ ಕಟ್ಟಿಕೊಂಡು ಊಟ ಮಾಡಿ ಹಬ್ಬ ಮುಗಿಸುತ್ತಾರೆ. ದೀಪಾವಳಿ ಹಬ್ಬಕ್ಕೆ ಬಿದಿರಿನ ಮೊರದಲ್ಲಿ ಪೂಜಾ ಸಾಮಗ್ರಿಗಳನ್ನಿಟ್ಟು ಪೂಜೆಗೆ ಇಡುವುದು ಹಿಂದಿನಿಂದ ಬಂದಿರುವ ಪದ್ಧತಿ. ಬಿದಿರಿನ ಬಾಗಿಲುಗಳು, ಮೊರಗಳು ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತವೆ. ಮೊರದಲ್ಲಿ ಶ್ರೀಮನ್ನಾರಾಯಣ ಇರುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಧಾನ್ಯಗಳಲ್ಲಿನ ಕಲ್ಲು ಕಸವನ್ನು ಮೊರದಲ್ಲಿ ಬೇರ್ಪಡಿಸಿ ಶುದ್ಧ ಮಾಡಿ, ನೀಡುವುದರಿಂದ ಮನಸ್ಸಿನಲ್ಲಿರುವ ಕೊಳೆ ತೊಳೆದು ಹೋಗುತ್ತೆ ಎಂಬ ನಂಬಿಕೆ ಜನರದ್ದು.ಮರ ಕೊಡುವುದರ ಸಂಕೇತವೂ ಹೌದು. ಮನೆ ಮನದಲ್ಲಿ ಮಹಾಲಕ್ಷ್ಮೀ ತುಂಬಲಿ, ಧನ, ಧಾನ್ಯ ಹೆಚ್ಚಾಗಲಿ ಎಂಬುದು ಹಬ್ಬದ ಆಶಯವಾಗಲಿದೆ. ಈ ಮೂರು ದಿನ ಮಕ್ಕಳು ಪಟಾಕಿ ಸಿಡಿಸಿ, ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಾರೆ.
-ಸುಕುಮಾರಗೌಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.