Election: ಮೂರು ಪಕ್ಷದಲ್ಲೂ ಗೊಂದಲ!
Team Udayavani, Feb 18, 2024, 3:16 PM IST
ಕೋಲಾರ: ಲೋಕಸಭಾ ಚುನಾವಣೆ ಬಿಸಿ ಏರುತ್ತಿದ್ದು, ಕೋಲಾರ ಕ್ಷೇತ್ರದಲ್ಲಿ ಮೂರು ಪಕ್ಷಗಳಲ್ಲಿ ಗೊಂದಲ ಮುಂದುವರಿದಿದೆ. ಮೈತ್ರಿ ಕಾರಣಕ್ಕಾಗಿ ಕೋಲಾರ ಕ್ಷೇತ್ರವನ್ನು ಬಿಜೆಪಿ ಇಟ್ಟುಕೊಳ್ಳುತ್ತದೋ, ಇಲ್ಲ ಜೆಡಿಎಸ್‌ಗೆ ಬಿಟ್ಟು ಕೊಡುತ್ತದೋ ಎಂಬುದು ಇನ್ನೂ ನಿರ್ಧಾರವಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‌ಕುಮಾರ್ ಬಣದವರಾಗುತ್ತಾರೋ, ಇಲ್ಲ ಕೆ.ಎಚ್.ಮುನಿಯಪ್ಪ ಅಥವಾ ಅವರ ಕುಟುಂಬ ವರ್ಗದವರು ಆಗುತ್ತಾರೋ ತೀರ್ಮಾನವಾಗಿಲ್ಲ.
2019ರ ಚುನಾವಣಾ ಫಲಿತಾಂಶ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಸೆಣಸಿತ್ತು. ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಸತತ ಎಂಟು ಪ್ರಯತ್ನಗಳ ನಂತರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 7.07 ಲಕ್ಷ ಮತ ಪಡೆದುಕೊಂಡು 4.98 ಲಕ್ಷ ಮತಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪರನ್ನು 2.09 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಯಲ್ಲಿ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಪ್ರತಿನಿಧಿಸುತ್ತಿದ್ದ ಕೆಜಿಎಫ್ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ 7 ಕ್ಷೇತ್ರಗಳಲ್ಲೂ ಬಿಜೆಪಿ ಭಾರೀ ಅಂತರವನ್ನು ಕಾಯ್ದುಕೊಂಡು ಬೀಗಿತ್ತು. ಆಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಾಂಗ್ರೆಸ್, 2 ಜೆಡಿಎಸ್ ಹಾಗೂ ಓರ್ವ ಪಕ್ಷೇತರ ಶಾಸಕರಿದ್ದರು. ಬಿಜೆಪಿ ಒಬ್ಬ ಶಾಸಕ ಬಲವನ್ನು ಹೊಂದದಿದ್ದರೂ, ಏಳು ಕ್ಷೇತ್ರಗಳಲ್ಲಿ ಬಹುಮತ ಸಂಪಾದಿಸಿಕೊಂಡಿತ್ತು.
2023ರ ವಿಧಾನಸಭಾ ಚುನಾವಣೆ ಬಲಾಬಲ: ಕಳೆದ ವರ್ಷ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪ್ರತ್ಯೇಕವಾಗಿಯೇ ಸೆಣಸಿದ್ದವು. ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಹಿಡಿದಿದ್ದರೂ, 2023ರ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ಕ್ಷೇತ್ರಗಳಲ್ಲಿ ಬಿಜೆಪಿ ಪಡೆದುಕೊಂಡಿರುವ ಮತಗಳು ಹಾಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿಗೆ ಎಚ್ಚರಿಕೆ ಗಂಟೆ ಬಾರಿಸಿತ್ತು.
ಬಿಜೆಪಿಗೆ ಎಚ್ಚರಿಕೆ ಗಂಟೆ: 2023ರ ವಿಧಾನಸಭಾ ಚುನಾವಣೆಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ್ದು, ಕೇವಲ 1.93 ಲಕ್ಷ ಮತಗಳನ್ನು ಮಾತ್ರ. ಈ ಮತಗಳ ಆಧಾರದಲ್ಲಿ ಬಿಜೆಪಿಯು 2019ರ ಫಲಿತಾಂಶಕ್ಕೆ ಹೋಲಿಸಿದರೆ 5.14 ಲಕ್ಷ ಮತಗಳ ಕೊರತೆಯನ್ನು ಎದುರಿಸುವ ಮೂಲಕ ಎಚ್ಚರಿಕೆಯನ್ನು ಎದುರಿಸಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ 5.79 ಲಕ್ಷ ಮತ ಪಡೆದುಕೊಂಡಿದ್ದರೆ, ಬಿಜೆಪಿ ಕೇವಲ 1.93 ಲಕ್ಷ ಮತ್ತು ಜೆಡಿಎಸ್ 4.71 ಲಕ್ಷ ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದು, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ನೂಕಲ್ಪಟ್ಟಿದೆ.
2024ರ ಸದ್ಯದ ಚಿತ್ರಣ: ಈ ಬಾರಿಯೂ ಎಂಟೂ ಕ್ಷೇತ್ರಗಳಲ್ಲಿ ಒಂದರಲ್ಲಿಯೂ ಬಿಜೆಪಿ ಶಾಸಕರಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಶಾಸಕರು, ಮೂರರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಏಕಾಂಗಿಯಾಗಿ ಸೆಣಸುತ್ತಿದೆ. ಹಿಂದಿನ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ವಿರೋಧಿ ಅಲೆ ಎದ್ದು ಕಾಣಿಸುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕೆ.ಎಚ್.ಮುನಿಯಪ್ಪ ವಿರೋಧಿ ಅಲೆ ಕಾಂಗ್ರೆಸ್ ಮುಖಂಡರ ವಲಯದಲ್ಲಿ ಕಾಣಿಸುತ್ತಿದೆ. ಸಾಮಾನ್ಯ ಮತದಾರರನ್ನು ಅಷ್ಟಾಗಿ ಕಾಡುತ್ತಿಲ್ಲ. ಬಿಜೆಪಿಯ ಹಾಲಿ ಸಂಸದ ಎಸ್.ಮುನಿಸ್ವಾಮಿ ಮೊಟ್ಟ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾಗಿ ಸಂಸದರಾಗಿದ್ದರು. ಈ ಬಾರಿ ಸ್ವಲ್ಪ ಮಟ್ಟಿಗೆ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಮುನಿಸ್ವಾಮಿಗೆ ಕಾಂಗ್ರೆಸ್ ಬಣವೊಂದರ ಬೆಂಬಲ ಹಿಂದಿನಂತೆಯೇ ಸಿಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಟಿಕೆಟ್‌ನಲ್ಲಿ ಯಾವ ಬಣದ ಕೈ ಮೇಲಾಗುತ್ತದೋ ಅದರ ಮೇಲೆ ಇದು ನಿರ್ಧಾರವಾಗುತ್ತದೆ.
ಮೈತ್ರಿ ಗೊಂದಲ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೈತ್ರಿ ಗೊಂದಲ ಎದ್ದು ಕಾಣಿಸುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಬೇರು ಮಟ್ಟದಲ್ಲಿ ಬಲಶಾಲಿ ಎನ್ನುವ ಕಾರಣಕ್ಕೆ ಟಿಕೆಟ್ ಕೇಳಬೇಕು, ಇಲ್ಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬೀಳುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿಗೆ ಟಿಕೆಟ್ ಬಿಡಬೇಕಾ ಎನ್ನುವುದು ನಿರ್ಧಾರವಾಗಿಲ್ಲ. ಹಾಗೆಯೇ ಕಾಂಗ್ರೆಸ್‌ನಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್‌ಕುಮಾರ್ ಬಣಗಳ ನಡುವೆ ಮೈತ್ರಿ ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ತಲುಪಿಬಿಟ್ಟಿದೆ. ಇತ್ತೀಚಿಗೆ ಕೋಲಾರ ಕಾಂಗ್ರೆಸ್ ಭವನದಲ್ಲಿ ಜರುಗಿದ ಘಟನಾವಳಿಗಳು ಇದನ್ನು ಪುಷ್ಟೀಕರಿಸಿದೆ. ಹಾಗಾಗಿ, ಮೈತ್ರಿ ಗೊಂದಲ ಮೂರು ಪಕ್ಷಗಳನ್ನು ಬಿಟ್ಟಿಲ್ಲ.
ಕೋಲಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು :
ಕಾಂಗ್ರೆಸ್‌ನಲ್ಲಿ ದಲಿತ ಎಡಗೈ ಕೋಟಾದಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ಅವರ ಕುಟುಂಬದ ಸದಸ್ಯರಾದ ನರಸಿಂಹರಾಜು, ಚಿಕ್ಕ ಪೆದ್ದನ್ನ, ಶಾಸಕಿ ರೂಪಕಲಾರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್‌ನ ಮತ್ತೂಂದು ಬಣ ದಲಿತ ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ವಾದಿಸುತ್ತಿದೆ. ದಲಿತ ಬಲಗೈ ಪಂಗಡಕ್ಕೆ ಸೇರಿದ ಎಚ್. ನಾಗೇಶ್, ಸಿ.ಎಂ.ಮುನಿಯಪ್ಪ, ಸಂಪಂಗೆರೆ ಮುನಿರಾಜು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮುದ್ದು ಗಂಗಾಧರ್, ಮದನ್ ಪಟೇಲ್, ಮಹಿಳಾ ಕೋಟಾದಲ್ಲಿ ಶಾಂತಕುಮಾರಿ, ಡಾ.ಲೋಹಿತ್, ಅಶ್ವತ್ಥನಾರಾಯಣ ಮತ್ತಿತರರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ, ಬಿ.ವಿ.ಮಹೇಶ್, ಎಸ್.ಬಿ.ಮುನಿವೆಂಕಟಪ್ಪ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿ ಮಲ್ಲೇಶ್‌ಬಾಬು, ಸಮೃದ್ಧಿ ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿ ಹೆಸರು ಕೇಳಿ ಬರುತ್ತಿವೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.