ಹಬ್ಬದಲ್ಲಿ ಹೂವಿಗೆ ಉತ್ತಮ ಧಾರಣೆ ನಿರೀಕ್ಷೆ
Team Udayavani, Aug 30, 2019, 12:23 PM IST
ಕೋಲಾರದ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಪ್ರತಿ ಕೆಜಿ 20 ರೂ.ಗೆ ಮಾರಾಟವಾಗುತ್ತಿರುವ ಚೆಂಡು ಹೂವು.
ಕೋಲಾರ: ಮಾರುಕಟ್ಟೆಯ ಏರಿಳಿತ, ವಾತಾವರಣದಲ್ಲಿನ ವೈಪರೀತ್ಯದಿಂದ ಬಸವಳಿದಿದ್ದ ಹೂವು ಬೆಳೆಗಾರರು ಹಾಗೂ ವ್ಯಾಪಾರಿಗಳು ಗೌರಿ -ಗಣೇಶನ ಹಬ್ಬದಲ್ಲಾದ್ರೂ ಉತ್ತಮ ಧಾರಣೆ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಟ್ಟಿದ್ದಾರೆ.
ಕಳೆದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಉತ್ತಮ ಧಾರಣೆಯನ್ನು ಪಡೆದುಕೊಂಡ ಹೂವು ಬೆಳೆಗಾರರು, ಆನಂತರ ಮೂರು ನಾಲ್ಕು ದಿನ ಸುರಿದ ಜಡಿ ಮಳೆಯಿಂದಾಗಿ ಬೆಳೆ ನೆಲಕಚ್ಚಿ, ಬೆಳೆ, ಬೆಲೆ ಸಿಗದೇ ಕಂಗಾಲಾಗಿದ್ದರು. ಇದೀಗ ಗೌರಿ ಗಣೇಶ ಹಬ್ಬ ಆಗಮಿಸಿದ್ದು, ಈ ಸಂದರ್ಭದಲ್ಲಿ ಉತ್ತಮ ಧಾರಣೆ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಮಾರುಕಟ್ಟೆಗೆ ತರಹೇವಾರಿ ಹೂಗಳನ್ನು ತರುತ್ತಿದ್ದಾರೆ.
ಹೂ ಬೆಳೆಯುವತ್ತ ಕೋಲಾರ ರೈತರು: ಇತ್ತೀಚಿನ ದಿನಗಳಲ್ಲಿ ಕೋಲಾರ ಜಿಲ್ಲೆಯ ರೈತರು ವಿವಿಧ ಜಾತಿಯ ಹೂವುಗಳನ್ನು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಚೆಂಡು ಹೂವು, ಚಾಮಂತಿ, ಗುಲಾಬಿ ಇತ್ಯಾದಿ ಹೂವುಗಳನ್ನು ದೊಡ್ಡ ಪ್ರಮಾಣ ದಲ್ಲಿ ಬೆಳೆಯಲು ಮುಂದಾಗಿದ್ದಾರೆ. ಇನ್ನಿತರೇ ಬೆಳೆಗಳಿಗೆ ಹೋಲಿಸಿದರೆ ಹೂವು ಬೆಳೆಗಾರರು ಬೆಲೆಯಿಂದ ಕಂಗಲಾಗಿದ್ದು ಕಡಿಮೆಯೇ. 30 ರಿಂದ 40 ದಿನಕ್ಕೆ ಹೂವು ಫಸಲು ನಿರೀಕ್ಷಿಸುವ ರೈತರು, ಅವುಗಳನ್ನು ಕೋಲಾರದ ಹಳೇ ಬಸ್ ನಿಲ್ದಾಣದ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವು ಹೂವು ಬೆಳೆಗಾರರು ನೇರವಾಗಿ ವ್ಯಾಪಾರಿಗಳನ್ನು ಹುಡುಕಿ ತೋಟದಿಂದಲೇ ವ್ಯಾಪಾರ ಮಾಡುತ್ತಿದ್ದಾರೆ.
ಮಾಲೂರು, ಬಂಗಾರಪೇಟೆ ಹೂ ಬೆಳೆಗಾರರು ತಮ್ಮ ಫಸಲನ್ನು ನೇರವಾಗಿ ಬೆಂಗಳೂರು, ಚೆನ್ನೈ, ಆಂಧ್ರಪ್ರದೇಶದ ಮಾರುಕಟ್ಟೆಗೆ ಕಳುಹಿಸಿ ಉತ್ತಮ ಧಾರಣೆ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಸಿರು ಮನೆಗಳಲ್ಲಿ ರಫ್ತು ಗುಣಮಟ್ಟದ ಹೂವು ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆ ಕುದುರಿಸಿಕೊಂಡಿದ್ದಾರೆ.
ಕೋಲಾರ ನಗರದಲ್ಲಿ ಅಂತಾರಾಜ್ಯ ಮಾರುಕಟ್ಟೆ: ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಹೊಂದಿರುವ ಕೋಲಾರ ಮೂರು ರಾಜ್ಯಗಳಲ್ಲಿ ಹೂವು ಮಾರಾಟಕ್ಕೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಕಾರಣದಿಂದಲೇ ಜಿಲ್ಲೆಯಲ್ಲಿ ಬೆಳೆದ ಹೂವು ನೆರೆಯ ಜಿಲ್ಲೆಗಳಲ್ಲದೆ, ಆಂಧ್ರಪ್ರದೇಶ, ತಮಿಳುನಾಡು ಮತ್ತು ದೂರದ ದೆಹಲಿಯವರೆಗೂ ರವಾನೆಯಾಗುತ್ತಿದೆ.
ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆದ ಹೂವುಗಳನ್ನು ದೆಹಲಿ, ಮುಂಬೈ, ರಾಜ್‌ಕೋಟ್, ಗುಜರಾತ್, ವಿಶಾಖ ಪಟ್ಟಣಗಳಿಗೆ ಪ್ರತಿ ನಿತ್ಯವೂ ಕಳುಹಿಸುವ ಮಾರುಕಟ್ಟೆ ವ್ಯವಸ್ಥೆಯನ್ನು ಸರಕಾರದ ಮಧ್ಯ ಪ್ರವೇಶವಿಲ್ಲದೆ ವ್ಯಾಪಾರಿ ಮತ್ತು ಬೆಳೆಗಾರರೇ ಸೃಷ್ಟಿಸಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ಕೋಲಾರ ಗಡಿಯಲ್ಲಿ ಆಂಧ್ರಪ್ರದೇಶದ ಕುಪ್ಪಂ, ಮದನಪಲ್ಲಿ, ಚಿತ್ತೂರು ಭಾಗದ ಹೂವು ಬೆಳೆಗಾರರು ತಾವು ಬೆಳೆದ ಹೂವುಗಳನ್ನು ಕೋಲಾರದ ಮಾರುಕಟ್ಟೆಗೆ ಕಳುಹಿಸಿ ಉತ್ತಮ ಧಾರಣೆ ಪಡೆದುಕೊಳ್ಳುತ್ತಿದ್ದಾರೆ.
2109 ಹೆಕ್ಟೇರ್‌ನಲ್ಲಿ ಬೆಳೆ: ಕೋಲಾರ ಜಿಲ್ಲೆಯಲ್ಲಿ ಒಟ್ಟು 1.10 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಈ ಪೈಕಿ 2109 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತಿದೆ. ಹೂವು ಬೆಳೆಯಲ್ಲಿನ ಲಾಭವನ್ನು ಗಮನಿಸುತ್ತಿರುವ ಕೋಲಾರದ ರೈತರು, ಇತ್ತೀಚಿನ ದಿನಗಳಲ್ಲಿ ಹೂವು ಬೆಳೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟೊಮೆಟೋಗೆ ಸರಿಸಾಟಿಯಾಗಿ ಕೋಲಾರದ ರೈತರು ಹೂವು ಬೆಳೆದರೂ ಅಚ್ಚರಿ ಪಡಬೇಕಾಗಿಲ್ಲ.
ಜಡಿ ಮಳೆ ಸಂಕಷ್ಟ: ಜಿಲ್ಲೆಯಲ್ಲಿ ಒಣ ವಾತಾವರಣ ಹೂವುಗಳ ಬೆಳೆಗೆ ಮತ್ತು ಮಾರುಕಟ್ಟೆಗೆ ಹೇಳಿ ಮಾಡಿಸಿದಂತಿದೆ. ಈ ಕಾರಣದಿಂದಲೇ ರೈತರು ವ್ಯಾಪಾರಿಗಳು ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ, ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ತೃಪ್ತಿಕರವಾದ ಧಾರಣೆಯನ್ನು ಕಂಡ ಹೂ ಬೆಳೆಗಾರರು ಮತ್ತು ವ್ಯಾಪಾರಿಗಳು ಆನಂತರದ ಜಡಿ ಮಳೆಗೆ ಕುಸಿದು ಹೋಗಿದ್ದರು. ಸಾಮಾನ್ಯವಾಗಿ ಎರಡು ಮೂರು ದಿನಗಳ ಆಯಸ್ಸು ಹೊಂದಿರುವ ಹೂವುಗಳಿಗೆ ತೇವಾಂಶ ವಾತಾವರಣ ಒಂದೇ ದಿನಕ್ಕೆ ಹೂವುಗಳನ್ನು ಬಾಡಿಸಿ ಕೊಳೆಯಿಸಿಬಿಡುತ್ತದೆ.
ಜಡಿ ಮಳೆಯಿಂದಾಗಿ ಹೂವು ಧಾರಣೆ 50 ರೂ.ಗೆ ಕುಸಿದು ಹೋಗಿತ್ತು. ಇದೀಗ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೂವು ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಗೌರಿ ಗಣೇಶ ಹಬ್ಬದ ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿ ಸಜ್ಜಾಗುತ್ತಿದೆ.
ವೈವಿಧ್ಯಮಯ ಹೂವು: ಕೋಲಾರ ನಗರದ ಹೂವು ಮಾರುಕಟ್ಟೆಯಿಂದಲೇ ಪ್ರತಿ ನಿತ್ಯವೂ ಕನಿಷ್ಠ 50 ಟನ್ ಹೂವು ಮಾರಾಟವಾಗುತ್ತಿದೆ. ಈ ಪೈಕಿ ಚೆಂಡು ಹೂವಿನ ಪ್ರಮಾಣವೇ 20 ಟನ್. ಕೆಲವು ರೈತರು ತಮ್ಮ ಹೊಲಗಳಿಂದಲೇ ನೇರ ಮಾರಾಟ ಮಾಡುತ್ತಿರು ವುದು ಇದರಲ್ಲಿ ಸೇರಿಲ್ಲ. ಹೀಗೆ ಆವಕವಾಗುವ ಹೂವುಗಳಲ್ಲಿ ಚೆಂಡುಹೂವು, ಸೇವಂತಿ, ಮಲ್ಲಿಗೆ, ಕನಕಾಂಬರ, ಕಾಕಡ, ಸುಗಂಧರಾಜ, ಗನ್ನೇರಿ, ಮಳ್ಳೆ ಇತ್ಯಾದಿ ಜಾತಿಯ ಹೂವುಗಳು ಹೆಚ್ಚಾಗಿರುತ್ತದೆ.
ಹೀಗೆ ಮಾರುಕಟ್ಟೆಗೆ ಬರುವ ಹೂವುಗಳ ಪೈಕಿ ಕನಕಾಂಬರ ಅತಿ ಹೆಚ್ಚು ಅಂದರೆ ಪ್ರತಿ ಕೆಜಿಗೆ 700-800 ರೂ.ವರೆಗೂ ಮಾರಾಟವಾದರೆ, ಮಲ್ಲಿಗೆ 500 ರಿಂದ 600 ರೂ., ಕಾಕಡ 400 ರಿಂದ 500 ರೂ.ವರೆಗೂ ಬಿಕರಿಯಾಗುತ್ತವೆ. ಉಳಿದಂತೆ ಚೆಂಡುಹೂವು, ಗುಲಾಬಿ, ಬಟನ್ ರೋಸ್ ಇತ್ಯಾದಿ ಹೂವುಗಳು ಕನಿಷ್ಠ 20 ರೂ.ನಿಂದ 100 ರೂ. ಆಸುಪಾಸಿನಲ್ಲಿ ವ್ಯಾಪಾರವಾಗುತ್ತದೆ. ಸೇವಂತಿ ಹೂವು 110 ರಿಂದ 150 ರೂ.ವರೆಗೂ ಮಾರಾಟವಾಗುತ್ತಿದೆ.
ಜಡಿಮಳೆಯ ಸಂದರ್ಭದಲ್ಲಿ ಚೆಂಡುಹೂವಿನ ಧಾರಣೆ ನೆಲಕಚ್ಚುವಂತಾಗಿತ್ತು. ಪ್ರತಿ ಕೆ.ಜಿ ಕೇವಲ 5 ರಿಂದ 8 ರೂ. ಗೆ ಕುಸಿದಿತ್ತು. ಇದರಿಂದ 25 ರಿಂದ 30 ಕೆ.ಜಿ. ಮೂಟೆ ಕೇವಲ 100 ರಿಂದ 200 ರೂ.ಗೆ ಮಾರಾಟವಾಗುವಂತಾಗಿತ್ತು.
ವಾತಾವರಣದಲ್ಲಿ ಯಾವುದೇ ಏರುಪೇರು ಇಲ್ಲವಾದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೂವಿನ ಧಾರಣೆ ಹಾಲಿ ದರಕ್ಕಿಂತಲೂ ಎರಡು ಮೂರು ಪಟ್ಟು ಹೆಚ್ಚಳವಾದರೂ ಅಚ್ಚರಿಪಡಬೇಕಾಗಿಲ್ಲ. ಆದರೆ, ಮಳೆ ಹನಿಗಳು ಸುರಿದರೆ ಈಗಿರುವ ಧಾರಣೆ ಸಿಗುವುದು ದುರ್ಲಭವೇ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.