ಎರಡು ದಶಕ ಕಳೆದರೂ ನಿರ್ಮಾಣವಾಗದ ಗುರು ಭವನ
Team Udayavani, Sep 5, 2017, 4:56 PM IST
ಕೋಲಾರ: ಜಿಲ್ಲಾ ಕೇಂದ್ರ ಕೋಲಾರದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಬೇಕೆಂಬ ಕನಸಿಗೆ ಎರಡು ದಶಕಗಳು ಮುಗಿದಿದ್ದರೂ, ಭವನದ ಕಾಮಗಾರಿ ಕನಿಷ್ಠ ಅಡಿಪಾಯದ ಹಂತಕ್ಕೂ ಬಾರದಿರುವುದು ಜಿಲ್ಲೆಯ ಶಿಕ್ಷಕರ ಸಮೂಹದಲ್ಲಿ ಬೇಸರವನ್ನುಂಟು ಮಾಡಿದೆ.
ಶಿಕ್ಷಕಕರ ಸಂಘಗಳಲ್ಲಿನ ಹೊಂದಾಣಿಕೆಯ ಕೊರತೆ, ಅಧಿಕಾರಿ ವರ್ಗದಲ್ಲಿನ ಅಸಡ್ಡೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿಯು ಮೂರು, ನಾಲ್ಕು ಬಾರಿ ಶಿಲಾನ್ಯಾಸ ನೆರವೇರಿಸಿಕೊಂಡರೂ ಆರಂಭವಾಗದ ಸ್ಥಿತಿಯಲ್ಲಿಯೇ ಇರುವಂತಾಗಿದೆ. ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನವು ಕಸ ಹಾಕುವ ಜಾಗವಾಗಿ ಪರಿಣಮಿಸಿದೆ.
ಕೋಲಾರದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿವೇಶನವನ್ನು ಗುರುತಿಸಲಾಗಿತ್ತು. ಈ ನಿವೇಶನದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಹಿಂದೆ ಕೇಂದ್ರ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದಕೆ.ಶ್ರೀನಿವಾಸಗೌಡ, ಆಲಂಗೂರ್ ಶ್ರೀನಿವಾಸ್, ಕೃಷ್ಣಯ್ಯಶೆಟ್ಟಿ ಈಗಿನ ಶಾಸಕ ಆರ್.ವರ್ತೂರು ಪ್ರಕಾಶ್ ಸಮ್ಮುಖದಲ್ಲಿ ಹಲವಾರು ಬಾರಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿದೆ.
ಆದರೆ, ಶಿಕ್ಷಕರ ಭವನಕ್ಕೆ ಗುರುತಿಸಿದ್ದ ನಿವೇಶನದಲ್ಲಿ ಇದ್ದ ಶಿಲಾನ್ಯಾಸ ಫಲಕವನ್ನು ಹಲವಾರು ಬಾರಿ ನಾಶಪಡಿಸಲಾಗಿದೆ. ಇದಕ್ಕೆ ಶಿಕ್ಷಕರ ಸಂಘಗಳಲ್ಲಿನ ಒಡಕೇ ಪ್ರಮುಖ ಕಾರಣವಾಗಿದೆ.
ಶಿಕ್ಷಕರ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಡಿಡಿಪಿಐ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಹಿಂದಿನ ಡಿಡಿಪಿಐ ರಾಜಣ್ಣರನ್ನು ಹೊರತುಪಡಿಸಿದರೆ ಬೇರಾವ ಡಿಡಿಪಿಐಗಳು ಶಿಕ್ಷಕರ ಭವನ ನಿರ್ಮಾಣದತ್ತ ಗಮನಹರಿಸಿಲ್ಲ.
ದೇಣಿಗೆ ಸಂಗ್ರಹ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಸಮಿತಿಯ ಒಂದೇ ಒಂದು ಸಭೆಯನ್ನು ಕರೆದಿಲ್ಲ. 2005 ರಲ್ಲಿ ಶಿಕ್ಷಕರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ, ಶಿಕ್ಷಕರ ದೇಣಿಗೆಯಾಗಿ ಎಷ್ಟು ಹಣ ಸಂಗ್ರಹವಾಗುತ್ತದೋ ಅದಕ್ಕೆ ಸರಿಸಮನಾದ ಮೊತ್ತವನ್ನು ತಮ್ಮ ಸಂಸದರ ನಿಧಿಯಿಂದ ನೀಡಲಾಗುವುದೆಂದು ಪ್ರಕಟಿಸಿದ್ದರು.
ಇದೇ ಅವಧಿಯಲ್ಲಿ ಸುಮಾರು 1500 ಶಿಕ್ಷಕರಿಂದ ಸುಮಾರು 1.60 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದೀಗ ಅದರ ಮೊತ್ತವು ಬಡ್ಡಿ ಸೇರಿ ಸುಮಾರು 3 ಲಕ್ಷ ರೂಪಾಯಿಗಳಾಗಿದೆ. ಆದರೆ ಈ ಹಣಕ್ಕೆ ಜವಾಬ್ದಾರರಾರು ಎನ್ನುವುದೇ ತಿಳಿಯುತ್ತಿಲ್ಲ.
ನೆರವು ಸಾಧ್ಯವಾಗಲಿಲ್ಲ: ವಿಧಾನಪರಿಷತ್ ಸದಸ್ಯರು, ಶಾಸಕರು ಶಿಕ್ಷಕರ ಭವನಕ್ಕೆ ತಮ್ಮ ನಿಧಿಯಿಂದ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದರು. ಆಗಿನ ನಗರಸಭೆ ಅಧ್ಯಕ್ಷರಾಗಿದ್ದ ಸಿ.ರಘುರಾಂ ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನಕ್ಕೆ ಸಂಬಂಧಪಟ್ಟಂತೆ ಇರುವ ಖಾತೆ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಹಾಲಿ ಶಾಸಕ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಸಹ ಶಿಕ್ಷಕರ ಭವನಕ್ಕೆ ತಮ್ಮ ನೆರವು ನೀಡುವುದಾಗಿ ಪ್ರಕಟಿಸಿದ್ದರು. ಆದರೆ, ಶಿಕ್ಷಕರ ಭವನ ನಿರ್ಮಾಣ ಕಾರ್ಯ ಆರಂಭವಾಗದ ಕಾರಣದಿಂದ ಈ ಹಣವನ್ನು ಹಾಗೂ ಜನಪ್ರತಿನಿಧಿಗಳ ನೆರವನ್ನು ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.
ಆಸಕ್ತಿ ತೋರದ ಶಿಕ್ಷಕರ ಸಂಘ: ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ, ಶಿಕ್ಷಕರ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಬಣದ ಹೆಸರು ಇರಬೇಕೆಂಬ ವಿಚಾರಕ್ಕೆ ಶಿಕ್ಷಕ ಪ್ರತಿನಿಧಿಗಳು ನೀಡಿದಷ್ಟು ಗಮನವನ್ನು ಶಿಕ್ಷಕರ ಭವನ ಕಾಮಗಾರಿ ಆರಂಭಿಸಲು ನೀಡಿದ್ದರೆ ಈ ವೇಳೆಗಾಗಲೇ ಶಿಕ್ಷಕರ ಭವನ ಪೂರ್ಣಗೊಳ್ಳುತ್ತಿತ್ತು ಎಂಬ ಭಾವನ ಶಿಕ್ಷಕರ ವಲಯದಲ್ಲಿದೆ.
ಈಗಲೂ ಅಧಿಕಾರಿಗಳು ಮತ್ತು ಶಿಕ್ಷಕರ ಸಂಘಗಳು ಒಗ್ಗೂಡಿ ಶಿಕ್ಷಕರ ಭವನ ಕಾಮಗಾರಿಯನ್ನು ಆರಂಭಿಸಿದರೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ಅಂದರೆ ಸುಮಾರು 1 ಕೋಟಿ ರೂಗಳಿಗೂ ಅಧಿಕ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿಕೊಡಲು ಸಿದ್ಧವಿದ್ದಾರೆ. ಆದರೆ, ಶಿಕ್ಷಕರ ಸಂಘದ ಪದಾಧಿಕಾರಿಗಳು ಶಿಕ್ಷಕಕರ ಭವನ ನಿರ್ಮಾಣಕ್ಕೆ ಆದ್ಯತೆ ನೀಡದೆ ಕಾಲಹರಣ ಮಾಡುತ್ತಿರುವುದರಿಂದ ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನವು ಕಸ ಹಾಕಲು ಬಳಕೆಯಾಗುತ್ತಿದೆ.
ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಶಿಕ್ಷಕರ ಭವನದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಯುತ್ತಿದ್ದರೆ, ಕೋಲಾರ ಜಿಲ್ಲೆಯಲ್ಲಿ ಮಾತ್ರ ಬಾಡಿಗೆ ಕಟ್ಟಡದಲ್ಲಿ ಶಿಕ್ಷಕರು ಕುಳಿತುಕೊಳ್ಳಲು ಜಾಗವಿಲ್ಲದ ಪರಿಸ್ಥಿತಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ
ದುಸ್ಥಿತಿ ಇದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕ ಸ್ವಾಮಿ ಹಾಗೂ ಶಿಕ್ಷಕರ ಸಂಘದ ಎಲ್ಲಾ ಬಣದ ಮುಖಂಡರು ಸಭೆ ಸೇರಿ ಶಿಕ್ಷಕರ ಭವನ ನಿರ್ಮಾಣ ಕಾರ್ಯದ ಬಗ್ಗೆ ಗಮನ ಹರಿಸಿದ್ದೇ ಆದಲ್ಲಿ ಮುಂದಿನ ವರ್ಷವಾದರೂ ಶಿಕ್ಷಕರ ಭವನದಲ್ಲಿಯೇ ಶಿಕ್ಷಕರ ದಿನಾಚರಣೆ ನಡೆಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.