ಪ್ರೌಢಶಾಲಾ ಶಿಕ್ಷಕರಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲ
ವರಮಹಾಲಕ್ಷ್ಮೀ ಹಬ್ಬಕ್ಕೂ ಕಾಸಿಲ್ಲದೆ ಶಿಕ್ಷಕರ ಪರದಾಟ • ಮಾನಸಿಕ ಖನ್ನತೆ ಒಳಗಾಗಿರುವ ಶಿಕ್ಷಕರು
Team Udayavani, Aug 7, 2019, 3:02 PM IST
ಕೋಲಾರ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನಾಲ್ಕೈದು ತಿಂಗಳ ವೇತನ ಬಾಕಿ ಇಟ್ಟುಕೊಂಡಿದ್ದು, ಶಿಕ್ಷಕರು ಪರದಾಡುವಂತಾಗಿದೆ.
ಕೋಲಾರ: ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರ ಗೋಳು ಕೇಳ್ಳೋರಿಲ್ಲದಂತಾಗಿದೆ. ಸಂಪತ್ತಿನ ದೇವತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗದ ಸಂಕಷ್ಟಕ್ಕೆ ಶಿಕ್ಷಕರ ಕುಟುಂಬಗಳು ಸಿಲುಕಿವೆ. ಇದಕ್ಕೆ ಕಾರಣವಾದ ಅಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಮೇಲೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ನಾಲ್ಕು ತಿಂಗಳಿನಿಂದಲೂ ವೇತನ ಕೈಗೆ ಸಿಗದೆ ಮಾನಸಿಕ ಖನ್ನತೆಯಲ್ಲಿ ಶಿಕ್ಷಕರು ಮೌನವಾಗಿ ನೋವು ಅನುಭವಿಸುವಂತಾಗಿದ್ದರೂ, ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಅಸಮಾಧಾನವೂ ಭುಗಿಲೇಳುವಂತಾಗಿದೆ.
ಫಲಿತಾಂಶ ಹೆಚ್ಚಿಸಿದ್ದಕ್ಕೆ ವೇತನ ಖೋತಾ: ಸಾಮಾನ್ಯವಾಗಿ ಫಲಿತಾಂಶ ಹೆಚ್ಚಳಕ್ಕೆ ಬೋನಸ್ ರೂಪದಲ್ಲಿ ಕೊಡುಗೆ ಪಡೆದುಕೊಳ್ಳಬೇಕಾಗಿದ್ದ ಪ್ರೌಢಶಾಲಾ ಶಿಕ್ಷಕರು ಕೋಲಾರ ಜಿಲ್ಲೆಯಲ್ಲಿ ಸಂಬಳವಿಲ್ಲದ ಕೊಡುಗೆಯನ್ನು ಸ್ವಾಗತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಏಳನೇ ಸ್ಥಾನಕ್ಕೆ ತಂದು ಜಿಲ್ಲೆಯ ಘನತೆ ಹೆಚ್ಚಿಸಲು ಹಗಲಿರುಳು ಶ್ರಮಿಸಿದ ಶಿಕ್ಷಕರಿಗೆ ಸರ್ಕಾರ, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ನೀಡಿರುವ ಕೊಡುಗೆ ನಾಲ್ಕು ತಿಂಗಳಿಂದ ಸಂಬಳ ನೀಡದೇ ಸಂಕಷ್ಟಕ್ಕೆ ನೂಕಿರುವುದು ಎಂಬ ಆರೋಪವು ಶಿಕ್ಷಕರ ವಲಯದಿಂದ ಕೇಳಿ ಬರುವಂತಾಗಿದೆ.
ಲಕ್ಷ್ಮೀಹಬ್ಬಕೂ ಕಾಸಿಲ್ಲ:ಶ್ರಾವಣ ಹಬ್ಬಗಳ ತಿಂಗಳು, ಅದರಲ್ಲೂ ವರಮಹಾಲಕ್ಷ್ಮೀ ಹಬ್ಬ ಆಚರಣೆ ಪ್ರತಿ ಕುಟುಂಬದಲ್ಲಿ ಸಡಗರ, ಆದರ ಈ ಬಾರಿ ಕೋಲಾರ ತಾಲೂಕಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಪಾಲಿಗೆ ವರಮಹಾಲಕ್ಷ್ಮೀ ಒಲಿಯುತ್ತಿಲ್ಲ. ನಾಲ್ಕು ತಿಂಗಳಿಂದ ಸಂಬಳವಿಲ್ಲ, ಇನ್ನೆಲ್ಲಿ ಹಬ್ಬದ ಸಂಭ್ರಮ, ಕುಟುಂಬ ಸದಸ್ಯರಿಂದ ಬೈಗುಳ ಮಾತ್ರವೇ ಈ ಬಾರಿಯ ಹಬ್ಬದ ಕೊಡುಗೆ ಎಂದು ಶಿಕ್ಷಕರು ಪರಿತಪಿಸುತ್ತಿದ್ದಾರೆ.
ಕುಟುಂಬದ ಸಮಸ್ಯೆಗಳ ಸುಳಿಯಲ್ಲಿ ನಲುಗಿ ಹೋಗಿರುವ ಶಿಕ್ಷಕರು ಶಾಲೆಗಳಲ್ಲಿ ಕುಳಿತರೂ ಸಂಬಳ, ಸಾಲದ ಕಂತುಗಳದ್ದೇ ಚಿಂತೆಯಲ್ಲಿ ಮುಳುಗಿದ್ದು, ಹಲವಾರು ಶಿಕ್ಷಕರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಇಂತಹ ಮನನೊಂದ ಸ್ಥಿತಿಯಲ್ಲಿರುವ ಶಿಕ್ಷಕರಿಂದ ಸಂಬಳ ನೀಡದೇ ಇನ್ನೆಷ್ಟು ದಿನ ಉತ್ತಮ ಬೋಧನೆ ನಿರೀಕ್ಷಿಸಲು ಸಾಧ್ಯ ಎಂಬ ಮಾತುಗಳು ಕೇಳಿ ಬರುವಂತಾಗಿದೆ.
ಸುಪ್ರೀಂ ಆದೇಶಕ್ಕೂ ಕಿಮ್ಮತ್ತು ನೀಡಲಿಲ್ಲ: ಸುಪ್ರೀಂಕೋರ್ಟ್ ಶಿಕ್ಷಕರ ವೇತನವನ್ನು ಆಯಾ ತಿಂಗಳ ಕೊನೆ ದಿನ ನೀಡಬೇಕು ಎಂದು ನೀಡಿರುವ ಆದೇಶಕ್ಕೂ ಕಿಮ್ಮತ್ತಿಲ್ಲ, ಅನುದಾನವಿಲ್ಲ ಎಂಬ ನೆಪವೊಡ್ಡಿ 4 ತಿಂಗಳಿಂದ ವೇತನ ನೀಡದೇ ಶಿಕ್ಷಕರ ಕುಟುಂಬಗಳು ಸಾಲದ ಶೂಲದಲ್ಲಿ ಬಿದ್ದು ನಲುಗುವಂತೆ ಮಾಡಲಾಗಿದೆ.
ಬಿಇಒ ಕಚೇರಿಯಲ್ಲಿ ಕೇಳಿದರೆ ನಾವು ಡಿಡಿಪಿಐ ಕಚೇರಿಗೆ ಅನುದಾನಕ್ಕೆ ಪ್ರಸ್ತಾವನೆ ನೀಡಿದ್ದೇವೆ ಎನ್ನುತ್ತಾರೆ, ಡಿಡಿಪಿಐ ಕಚೇರಿಯಲ್ಲಿ ಜಿಪಂಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರೂ, ಜಿಪಂನಲ್ಲಿ ಅಂತಹ ಬಾಕಿ ವೇತನಕ್ಕೆ ಪ್ರಸ್ತಾವನೆಯೇ ಬಂದಿಲ್ಲ ಎಂದು ಅಲ್ಲಿನ ಗುಮಾಸ್ತರು ಹೇಳುತ್ತಿದ್ದಾರೆ.
ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ನಾಲ್ಕು ತಿಂಗಳಿಂದ ಸಂಬಳವಿಲ್ಲದೇ ಪರದಾಡುತ್ತಿರುವ ಕೋಲಾರ ತಾಲೂಕಿನ ಶಿಕ್ಷಕರಿಗೆ ಇದೀಗ ಒಂದು ತಿಂಗಳಿಗಾಗುವಷ್ಟು ಅನುದಾನ ನೀಡಿದ್ದಾರೆ. ಪಕ್ಕದ ಬಂಗಾರಪೇಟೆ ತಾಲೂಕಿಗೆ 3 ತಿಂಗಳ ವೇತನಕ್ಕೆ 6 ಕೋಟಿ ರೂ. ನೀಡಿರುವಾಗ, ಕೋಲಾರಕ್ಕೆ ಒಂದು ತಿಂಗಳ ಸಂಬಳಕ್ಕಾಗಿ ಕೇವಲ 2 ಕೋಟಿ ರೂ. ನೀಡಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಈಗ ಬಿಡುಗಡೆಯಾಗಿರುವ ಅನುದಾನದಲ್ಲಿ ಒಂದು ಅಥವಾ ಎರಡು ತಿಂಗಳ ಸಂಬಳ ಮಂಜೂರಾಗಲು ಇನ್ನೂ ಒಂದು ವಾರ ಕಾಯಬೇಕಾಗಿದೆ. ಈ ಸಂಬಳ ಬಂದರೂ ಅನೇಕ ಶಿಕ್ಷಕರು ಗೃಹ ನಿರ್ಮಾಣ ಮತ್ತಿತರ ಕಾರಣಗಳಿಗೆ ಮಾಡಿರುವ ಸಾಲದ ನಾಲ್ಕು ತಿಂಗಳ ಕಂತುಗಳಿಗೇ ಅದು ಸಾಕಾಗುವುದಿಲ್ಲ.
ಅನುದಾನ ಬಿಡುಗಡೆಯಾಗದಿರಲು ಸಕಾಲದಲ್ಲಿ ವೇತನಾನುದಾನದ ಬೇಡಿಕೆ ಸಲ್ಲಿಸದೇ ಇರುವುದೇ ಕಾರಣವೆಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣರಾರು ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಾದ ಆಡಳಿತ ಯಂತ್ರ ತನಗೇನು ಸಂಬಂಧವಿಲ್ಲವೆನ್ನುವಂತೆ ಜಾಣನಿದ್ರೆಗೆ ಜಾರಿರುವುದು ಟೀಕೆಗೆ ಗುರಿಯಾಗಿದೆ.
ಸಾಲದ ಸುಳಿಯಲ್ಲಿ ಶಿಕ್ಷಕರ ತೊಳಲಾಟ:
ಬ್ಯಾಂಕ್, ಫೈನಾನ್ಸ್ ಕಂಪನಿಗಳಲ್ಲಿ ಮನೆಕಟ್ಟಲು, ವಾಹನ ಮತ್ತಿತರ ಕಾರಣಗಳಿಗಾಗಿ ಶಿಕ್ಷಕರು ಮಾಡಿರುವ ಸಾಲದ ಕಂತುಗಳು ಮರುಪಾವತಿಯಾಗದ ಕಾರಣ ಅದಕ್ಕೆ ಬಡ್ಡಿ, ಶುಲ್ಕ ದುಪ್ಪಟ್ಟು ಪ್ರಮಾಣದಲ್ಲಿ ಬೀಳುತ್ತಿದೆ. ಸಾಲದ ಕಂತಿಗಾಗಿ ಫೈನಾನ್ಸ್ ಕಂಪನಿಯೊಂದು ಶಿಕ್ಷಕನ ವೇತನ ಖಾತೆ ಇರುವ ಬ್ಯಾಂಕಿಗೆ ಒಮ್ಮೆ ಚೆಕ್ ಕಳುಹಿಸಿ ಅದು ವಾಪಸ್ಸಾದಲ್ಲಿ 510 ರೂ. ಶುಲ್ಕ ವಿಧಿಸುತ್ತಿದೆ. ಹೀಗೆ 4 ತಿಂಗಳಲ್ಲಿ ಹತ್ತಾರು ಬಾರಿ ಚೆಕ್ ವಾಪಸ್ ಬಂದರೆ ಶಿಕ್ಷಕನಿಗೆ ಐದಾರು ಸಾವಿರ ರೂ. ಶುಲ್ಕದ ಹೊರೆ ಬೀಳುತ್ತದೆ.
ಪ್ರಾಥಮಿಕ ಶಿಕ್ಷಕರ ಸಂಘ ಸ್ಟ್ರಾಂಗ್: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿಜಕ್ಕೂ ಸ್ಟ್ರಾಂಗ್, ಕಾಲಕಾಲಕ್ಕೆ ತನ್ನ ಸದಸ್ಯರಿಗೆ ವೇತನ ಬಟವಾಡೆಯಾಗುವಂತೆ ನೋಡಿಕೊಳ್ಳುತ್ತಿದ್ದು, ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇಂತ ಜವಾಬ್ದಾರಿ ಹೊತ್ತುಕೊಳ್ಳುತ್ತಿಲ್ಲ. ಇದಕ್ಕೆ ಪ್ರೌಢಶಾಲಾ ಸಹಶಿಕ್ಷಕ ಸಂಘದಲ್ಲಿನ ಒಡಕು ಕಾರಣ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಕೆಲವು ಶಿಕ್ಷಕರು.
ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನಕ್ಕೆ ಇಲ್ಲದ ಸಮಸ್ಯೆ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಏಕೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಅನುದಾನದ ಪ್ರಸ್ತಾವನೆ ಸಲ್ಲಿಸುವಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಹುಡುಕಿ, ಶಿಕ್ಷಕರ ಈ ಸಮಸ್ಯೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದಲ್ಲಿ ಶಿಕ್ಷಕರು ಸಂಬಳ ಪಡೆಯಲು ಐದಾರು ತಿಂಗಳುಗಳೇ ಕಳೆಯಬೇಕಾಗುತ್ತದೆ.
ಸಂಬಳವಿಲ್ಲದಿದ್ದರೂ ಅನೇಕ ಶಿಕ್ಷಕರು ಶಾಲಾ ಅವಧಿಗೆ ಮುನ್ನಾ, ನಂತರ ವಿಶೇಷ ತರಗತಿಗಳನ್ನು ನೋವಿನಿಂದಲೇ ನಡೆಸಿಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೆ ಪ್ರಯತ್ನ ಹಾಕುತ್ತಿರುವ ಶಿಕ್ಷಕರ ನೆರವಿಗೆ ಬರುವವರು ಯಾರು ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.
ಪ್ರೌಢಶಾಲಾ ಶಿಕ್ಷಕರಿಗೆ ನಾಲ್ಕು ತಿಂಗಳಿನಿಂದ ವೇತನ ಇಲ್ಲದಂತಾಗಲು 15 ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ, ಇತರೇ ಜಿಲ್ಲೆಗಳಿಂದ ಬಂದಿರುವ ಶಿಕ್ಷಕರು, ಆರನೇ ವೇತನ ಆಯೋಗದನ್ವಯ ವೇತನ ಹೆಚ್ಚಳ, ವೈದ್ಯಕೀಯ ವೆಚ್ಚಗಳ ಬಿಲ್ಗಳ ಪಾವತಿ, ಹೊಸದಾಗಿ ಶಿಕ್ಷಕರ ನೇಮಕವಾದವರಿಗೆ ವೇತನ, ಮತ್ತಿತರ ಕಾರಣಗಳಿಂದ ಹಿಂದಿನ ವರ್ಷ ಬಿಡುಗಡೆಯಾಗಿದ್ದ ವೇತನ ಅನುದಾನವೇ 2 ತಿಂಗಳ ಕೊರತೆಯಾಗಿತ್ತು. ಜೊತೆಗೆ ಹೆಚ್ಚುವರಿ ಅನುದಾನದ ಕೊರತೆಯೂ ಎದುರಾಗಿತ್ತು. ತಾಂತ್ರಿಕ ಕಾರಣಗಳಿಂ ದಾಗಿ ಈ ಮಾಹಿತಿಯನ್ನು ಕ್ರೋಡೀಕರಿಸಿ ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಹೊಸ ಅನುದಾನಕ್ಕೆ ಒಪ್ಪಿಗೆ ಪಡೆದುಕೊಳ್ಳಲು ಸಾಧ್ಯವಾಗದಿರುವುದೇ ಕೋಲಾರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ನಾಲ್ಕು ತಿಂಗಳ ವೇತನ ಬಾಕಿಗೆ ಪ್ರಮುಖ ಕಾರಣವಾಗಿದೆ.
ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಮೂರು ತಿಂಗಳ ಲೇಖಾನುದಾನವನ್ನು ಮಾತ್ರವೇ ಪಡೆದುಕೊಂಡಿರುವುದರಿಂದ ಈ ಅನುದಾನದಲ್ಲಿ ಕೇವಲ ಎರಡು ತಿಂಗಳ ವೇತನ ಪಾವತಿಗೆ ಒಪ್ಪಿಗೆ ಪಡೆಯಲಷ್ಟೇ ಸಾಧ್ಯವಾಗಿದೆ. ಪ್ರೌಢಶಾಲಾ ಶಿಕ್ಷಕರ ಬಾಕಿ ತಿಂಗಳ ವೇತನವನ್ನು ಸರಕಾರ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಂಡ ನಂತರವಷ್ಟೇ ಅಂದರೆ ಸೆಪ್ಟೆಂಬರ್, ಅಕ್ಟೋಬರ್‌ವರೆಗೂ ಸಾಧ್ಯವಾಗುವುದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಯುತ್ತಿವೆ.ಆದರೆ, ಇಡೀ ರಾಜ್ಯದಲ್ಲಿ ಕೋಲಾರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಇಲ್ಲದೇ ಇರುವ ವೇತನ ವಿಳಂಬ ಸಮಸ್ಯೆ ಕೋಲಾರ ತಾಲೂಕಿನಲ್ಲಿಯೇ ಉದ್ಭವವಾಗಲು ಕಾರಣವೇನು ಎಂಬ ಶಿಕ್ಷಕರ ಪ್ರಶ್ನೆಗೆ ನಿಖರ ಉತ್ತರ ಸಿಗುತ್ತಿಲ್ಲ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.