ಎಚ್ಎನ್ ವ್ಯಾಲಿ ಮೊದಲ ಮೋಟಾರ್ ಕಾರ್ಯಾರಂಭ
Team Udayavani, Jul 14, 2019, 4:46 PM IST
ಕೋಲಾರ ಜಿಲ್ಲೆಯ ಕೆ.ಸಿ. ವ್ಯಾಲಿ ನೀರಿನ ಯೋಜನೆಯಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಶನಿವಾರ ಮೊದಲ ಮೋಟಾರ್ ಕಾರ್ಯಾರಂಭಿಸಿದೆ.
ಕೋಲಾರ: ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗಾಗಿ ಜಾರಿ ಮಾಡಲಾದ ಯೋಜನೆಗಳ ಪೈಕಿ ಕೆ.ಸಿ.ವ್ಯಾಲಿ ಈಗಾಗಲೇ ಯಶಸ್ವಿ ಯಾಗಿದೆ. ಈ ನಡುವೆ ಎಚ್.ಎನ್. ವ್ಯಾಲಿ ಕಾಮಗಾರಿಯೂ ಚುರುಕು ಪಡೆದುಕೊಂಡಿದ್ದು, ಶನಿವಾರ ಮೊದಲ ಮೋಟಾರ್ ಕಾರ್ಯಾರಂಭ ಮಾಡಲಾಗಿದೆ.
ಬೆಂಗಳೂರಿನ ಸಂಸ್ಕರಿತ ನೀರನ್ನು ಬಳಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ಇದಾಗಿದ್ದು, 65 ಕೆರೆ ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆ ಕಾಮಗಾರಿ ತ್ವರಿತಗತಿ ಯಲ್ಲಿ ನಡೆಸುತ್ತಿರುವ ಎಂಇಐಎಲ್ ಸಂಸ್ಥೆಯು ಇದಕ್ಕಾಗಿ ಹೆಣ್ಣೂರಿನಲ್ಲಿ ಸುಸಜ್ಜಿತ ಪಂಪ್‌ಹೌಸ್ ನಿರ್ಮಿಸಿದೆ. ಶನಿವಾರ ಸಣ್ಣ ನೀರಾವರಿ ಇಲಾಖೆ ಉನ್ನತಾಧಿಕಾರಿಗಳು ಪಂಪ್‌ಗೆ ಚಾಲನೆ ನೀಡಿದರು.
ಈ ಯೋಜನೆಯಡಿ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂರು ಶುದ್ಧೀಕರಣ ಘಟಕಗಳಿಂದ ನೀರನ್ನು ಪಡೆದು ಬರಪೀಡಿತ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ ಅಂತರ್ಜಲವೃದ್ಧಿಗೆ ಚಿಂತಿಸಲಾಗಿದೆ. ಒಟ್ಟಾರೆ 210 ಎಂ.ಎಲ್.ಡಿ. ನೀರು ದೊರಕಲಿದ್ದು, ಈ ಪೈಕಿ ಈಗ ಚಾಲನೆ ನೀಡಲಾದ 750 ಕಿ.ವ್ಯಾ. ಮೋಟಾರ್‌ನಿಂದ 40 ಎಂ.ಎಲ್.ಡಿ ನೀರನ್ನು ಹರಿಸಲಾಗುವುದು.
ಶನಿವಾರದಿಂದ ಹೆಣ್ಣೂರು ನೀರು ಶುದ್ಧೀಕರಣ ಘಟಕದಿಂದ ಬಾಗಲೂರು ಕೆರೆವರೆಗೆ ಅಂದರೆ 12 ಕಿ.ಮೀ. 1660 ಎಂ.ಎಂ. ವ್ಯಾಸದ ಎಂ.ಎಸ್. ಪೈಪ್‌ನಲ್ಲಿ ನೀರು ಹರಿಯಲಿದೆ. ಶುದ್ಧೀಕರಿಸಿದ ನೀರಿನ ಸಮರ್ಪಕ ಹರಿವಿಗೆ ಅನುಕೂಲವಾಗುವಂತೆ ಹೆಣ್ಣೂರು ಘಟಕದ ಸರ್ಜ್ ವೆಸಲ್ಅನ್ನು ನಿರ್ಮಿಸಲಾಗಿದೆ.
ಎಚ್.ಎನ್. ವ್ಯಾಲಿ ಯೋಜನೆಯಡಿ 114 ಕಿ.ಮೀ. ನೀರನ್ನು ಹರಿಸಬೇಕಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಅಧಿಕ ಸಾಮರ್ಥ್ಯದ ಮೋಟಾರ್‌ಗಳನ್ನು ಅಳವಡಿಸಲಾಗುತ್ತಿದೆ.
ಪ್ರತಿ ಪಂಪ್ ಹೌಸ್‌ಗಳಲ್ಲಿ ಮೂರು ಮತ್ತು ಹೆಚ್ಚುವರಿ ಒಂದು ಅಂದರೆ ನಾಲ್ಕು ಅಧಿಕ ಸಾಮರ್ಥ್ಯದ ಮೊಟಾರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಎಂ.ಇ.ಐ.ಎಲ್. ಉಪಾಧ್ಯಕ್ಷ ಸುಧೀರ್ ಮೋಹನ್ ತಿಳಿಸಿದರು.
ಪ್ರಸ್ತುತ ಮೂರು ಪಂಪ್ ಹೌಸ್‌ಗಳ ಪೈಕಿ ಒಂದು ಪಂಪ್‌ಹೌಸ್ ಕಾರ್ಯನಿರ್ವಹಣೆ ಆರಂಭವಾಗಿದ್ದು, ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿಯಲಾರಂಭಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.